ಹಾಸ್ಯಪ್ರಜ್ಞೆ ಇರಲಿ

|ಡಾ. ಕೆ.ಪಿ. ಪುತ್ತೂರಾಯ

ದೇಶ ಕಂಡ ಖ್ಯಾತ ತತ್ತ್ವಶಾಸ್ತ್ರಜ್ಞ, ಆದರ್ಶ ಶಿಕ್ಷಕ, ಅಪ್ರತಿಮ ರಾಷ್ಟ್ರಪತಿ, ‘ಭಾರತ ರತ್ನ’ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅಪೂರ್ವ ಶೈಲಿಯ ಮಾತುಗಳಿಗೂ, ಹಾಸ್ಯಪ್ರಜ್ಞೆಗೂ ಹೆಸರುವಾಸಿಯಾಗಿದ್ದರು. ಒಮ್ಮೆ ಅವರು ವಿದೇಶದಲ್ಲಿದ್ದಾಗ, ವ್ಯಕ್ತಿಯ ವರ್ಣಾಧಾರಿತ ನಿಂದನೆಗಳ ಕುರಿತಾಗಿ ಚರ್ಚೆಯೊಂದು ನಡೆಯುತ್ತಿತ್ತು. ಕಂದುಬಣ್ಣದ ಭಾರತೀಯರಾದ ರಾಧಾಕೃಷ್ಣನ್​ರನ್ನು ಕಂಡು ಬಿಳಿಬಣ್ಣದ ವಿದೇಶಿ ಮಹಿಳೆಯೊಬ್ಬಳು, ‘ನೀವು ಭಾರತೀಯರೇಕೆ ಕಂದುಬಣ್ಣದವರಾಗಿದ್ದೀರಿ?’ ನಮ್ಮಂತೆ ಶ್ವೇತವರ್ಣದವರಾಗಿಲ್ಲ?’ ಎಂದು ಚುಡಾಯಿಸಿದಳು. ರಾಧಾಕೃಷ್ಣನ್ ಅಷ್ಟೇ ತಮಾಷೆಯಿಂದ, ‘ದೇವರಿಗೂ ಮನುಷ್ಯನನ್ನು ಸೃಷ್ಟಿಸುವ ಮೊದಲು ಅನುಭವ ಇರಲಿಲ್ಲ. ಮೊದಲಿಗೆ ಪ್ರಯೋಗಾರ್ಥವಾಗಿ, ಬ್ರೆಡ್ ತಯಾರಿಸುವ ಹಿಟ್ಟಿನಿಂದ ಮಾನವನ ಆಕೃತಿಯೊಂದನ್ನು ನಿರ್ವಿುಸಿ ಗೂಡೊಲೆಯೊಳಗೆ ಬೇಯಿಸಲು ಇಟ್ಟ. ಅದನ್ನು ಹೊರತೆಗೆಯುವುದು ತಡವಾದ್ದರಿಂದ ಅದು ಸುಟ್ಟುಹೋಗಿ ಕರಿಕಪ್ಪಾಗಿ ಹೋಯಿತು. ಅದರಿಂದ ಕರಿಯ ಜನಾಂಗದವರನ್ನು ಸೃಷ್ಟಿಸಿದ. ಮುಂದಿನ ಬಾರಿ, ಹೀಗಾಗಬಾರದೆಂಬ ಜಾಗರೂಕತೆಯಿಂದ ಅಗತ್ಯಕ್ಕಿಂತ ಮೊದಲೇ ಆ ಆಕೃತಿಯನ್ನು ಹೊರತೆಗೆದ. ನೋಡಲಾಗಿ ಅದು ಇನ್ನೂ ಸರಿಯಾಗಿ ಬೆಂದಿರಲಿಲ್ಲ. ಅದರಿಂದ ಬಿಳಿಯರನ್ನು ರೂಪಿಸಿದ. ಮುಂದಿನ ಯತ್ನದಲ್ಲಿ ತಪು್ಪಮಾಡಲೇಬಾರದು ಎಂದು ಸಂಕಲ್ಪಿಸಿದ ದೇವರು, ಹಿಟ್ಟನ್ನು ಸರಿಯಾಗಿ-ಹದವಾಗಿ ಬೇಯಲು ಬಿಟ್ಟು ಸರಿಯಾದ ಸಮಯಕ್ಕೇ ಹೊರತೆಗೆದ. ನೋಡಲಿಕ್ಕೆ ಅದು ಸುಂದರವಾದ, ಕಂದುಬಣ್ಣದ ಆಕೃತಿಯಾಗಿತ್ತು. ಅದರಿಂದ ನಮ್ಮಂತಹ ಭಾರತೀಯರನ್ನು ರೂಪಿಸಿದ’ ಎಂದರು. ರಾಧಾಕೃಷ್ಣನ್​ರ ಮಾತಿಗೆ ನಕ್ಕ ಎಲ್ಲರೂ ಅವರ ಹಾಸ್ಯಪ್ರಜ್ಞೆಯನ್ನು ಕೊಂಡಾಡಿದರು.

ಹಾಸ್ಯಕ್ಕೆ ಅದ್ಭುತವಾದ ಶಕ್ತಿ-ಸಾಮರ್ಥ್ಯವಿದೆ. ಅದು ಎಂಥ ಗಂಭೀರ ಅಥವಾ ಬಿಗುವಿನ ವಾತಾವರಣವನ್ನೂ ತಿಳಿಗೊಳಿಸಬಲ್ಲದು, ಮುನಿಸನ್ನೂ ಶಮನ ಮಾಡಬಲ್ಲದು, ಸ್ನೇಹ-ಸಂಬಂಧಗಳಿಗೆ ನಾಂದಿ ಹಾಡಬಲ್ಲದು. ಆದ್ದರಿಂದಲೇ, ಹಾಸ್ಯಚಟಾಕಿ ಹಾರಿಸುತ್ತ ಎಲ್ಲರನ್ನೂ ನಗಿಸಿ ತಾವೂ ನಗುವವರ ಸುತ್ತ ಜನ ಸೇರಿರುತ್ತಾರೆ ಹಾಗೂ ಅವರ ಸಾಂಗತ್ಯವನ್ನು ಬಯಸುತ್ತಾರೆ. ಹಾಸ್ಯವು ನಮ್ಮ ಸಮಸ್ಯೆ ಮತ್ತು ನೋವುಗಳನ್ನು, ದುಃಖ-ದುಮ್ಮಾನಗಳನ್ನು ಕಡಿಮೆ ಮಾಡಬಲ್ಲದು. ನಮ್ಮಲ್ಲಿ ಹಾಸ್ಯಪ್ರಜ್ಞೆ ಇದ್ದರಂತೂ ಅನೇಕ ಗೆಳೆಯರನ್ನು ಬಲು ಸುಲಭವಾಗಿ ಸಂಪಾದಿಸಿಕೊಳ್ಳಬಹುದು. ಹಾಸ್ಯಕ್ಕೆ ಇಂಥದ್ದೇ ವಸ್ತು-ವಿಷಯ-ಸಂದರ್ಭ ಇರಬೇಕೆಂಬ ನಿರ್ಬಂಧವಿಲ್ಲ. ಸಣ್ಣಪುಟ್ಟ ವಿಷಯಗಳೂ ಹಾಸ್ಯವನ್ನು ಚಿಮ್ಮಿಸಬಲ್ಲವು. ಆದರೆ ಅದು ಅಪಹಾಸ್ಯ, ಕೀಳು ಅಭಿರುಚಿಯ ಹಾಸ್ಯವಾಗದೆ, ಡಾ. ರಾಧಾಕೃಷ್ಣನ್ ಸಿಡಿಸಿದ ಹಾಸ್ಯಚಟಾಕಿಯಂತೆ ಸಮಯಸ್ಪೂರ್ತಿಯಿಂದ ಕೂಡಿರಬೇಕು, ಸಂದಭೋಚಿತವಾಗಿರಬೇಕು ಹಾಗೂ ನವಿರಾಗಿರಬೇಕು.

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)