ಸಾಧನೆಯ ಸಾಧನ

| ವಿನಾಯಕ ಭಟ್ಟ ಶೇಡಿಮನೆ

ಸಾಧಕರ ಬಗ್ಗೆ ಯೋಚಿಸುವಾಗ ನೆನಪಾಗುವ ಹೆಸರು ಬ್ರರ್ಹ¾ ವಿಶ್ವಾಮಿತ್ರ. ಬ್ರರ್ಹ¾ ಪದವಿ ಪ್ರಾಪ್ತಿಗೂ ಮುನ್ನ ‘ಕೌಶಿಕ’ ಎಂಬ ಮಹಾರಾಜನಾಗಿದ್ದ ಆತ ಒಮ್ಮೆ ವಸಿಷ್ಠರ ಆಶ್ರಮಕ್ಕೆ ಬಂದಾಗ, ಅವನಿಗೂ ಅವನ ಸೈನಿಕರಿಗೂ ಅಮೋಘ ಸತ್ಕಾರವೇ ದೊರಕಿತು. ಇದರ ಹಿಂದಿರುವ ಶಕ್ತಿ ‘ಕಾಮಧೇನು’ ಎಂಬ ದಿವ್ಯಗೋವು ಎಂದು ತಿಳಿದು, ಅದನ್ನು ಪಡೆಯಲು ಕೌಶಿಕ ಹಂಬಲಿಸಿದ. ಹವ್ಯ ಕವ್ಯಗಳಿಗೆ ಆಧಾರವಾಗಿದ್ದ, ತಪಸ್ಸಿನಿಂದ ಪಡೆದಿದ್ದ ಕಾಮಧೇನುವನ್ನು ಕೊಡಲು ವಸಿಷ್ಠರು ಒಪ್ಪದಿದ್ದಾಗ ತನ್ನ ಕ್ರಾತ್ರಬಲದಿಂದ ಬಲವಂತವಾಗಿ ಎಳೆದೊಯ್ಯಲು ಯತ್ನಿಸಿದ. ಆದರೆ ವಸಿಷ್ಠರ ಬ್ರಹ್ಮಬಲದ ಮುಂದೆ ಸೋಲುಣ್ಣಬೇಕಾಯಿತು. ಅರಮನೆಗೆ ಮರಳಿದವನೇ ಅಂತಮುಖಿಯಾದ. ತನ್ನ ದೋಷವೇನು, ವಸಿಷ್ಠರ ಶಕ್ತಿಯೇನು ಎಂಬುದನ್ನು ಕಂಡುಕೊಂಡ. ತಾನೂ ಬ್ರಹ್ಮತೇಜಸ್ಸನ್ನು ಸಂಪಾದಿಸಿ ಬ್ರರ್ಹ¾ಯಾಗಬೇಕು ಎಂದು ಹೊರಟ. ಒಂದು ವೇಳೆ ಆತ ವಸಿಷ್ಠರಿಂದಾದ ಅವಮಾನವನ್ನು ಕೇವಲ ಹೊರದೃಷ್ಟಿಯಿಂದಷ್ಟೇ ನೋಡಿದ್ದರೆ, ಅವರನ್ನು ವಧಿಸಲು ಅನ್ಯ ಕುತಂತ್ರ ಹೂಡುತ್ತಿದ್ದನೇನೋ; ಆದರೆ ಅಂತಮುಖಿಯಾಗಿ ಯೋಚಿಸಿದ್ದರಿಂದ ಮತ್ತೊಬ್ಬ ಬ್ರರ್ಹ¾ಯಾದ. ಗಾಯತ್ರೀ ಮಂತ್ರದ ದ್ರಷ್ಟಾರನಾಗಿ, ವಿಶ್ವಕ್ಕೇ ಮಿತ್ರ ಅಂದರೆ ವಿಶ್ವಾಮಿತ್ರನಾದ. ತ್ರಿಶಂಕು ಪ್ರಕರಣ, ಮೇನಕಾ ಪ್ರಸಂಗದಂಥ ಎಡರು-ತೊಡರುಗಳನ್ನೆಲ್ಲ ದಾಟಿ ಸಾಧನೆಯ ಶಿಖರವನ್ನೇರಿದ… ನಾವು ಕೆಲವೊಮ್ಮೆ ನಮ್ಮ ತಪ್ಪಿಗೆ ಅಥವಾ ಸೋಲಿಗೆ ಬೇರೆಯವರೆಡೆಗೆ ಬೆರಳು ಮಾಡುತ್ತ ಕಾಲಕಳೆಯುತ್ತೇವೆ. ಇದರಿಂದ ನಮ್ಮ ಏಳಿಗೆ ಸಾಧ್ಯವಿಲ್ಲ. ಪ್ರಾಂಜಲ ಮನಸ್ಸಿನಿಂದ ಆತ್ಮಾವಲೋಕನ ಮಾಡಿಕೊಂಡರೆ, ನಮ್ಮ ಸೋಲಿಗೆ ಬಹುತೇಕ ನಾವೇ ಕಾರಣ ಎಂಬ ಅರಿವಾಗುತ್ತದೆ. ‘ತಾನು ವರ್ತಿಸಿದ್ದು ಪ್ರಾಣಿಯಂತೆಯೋ ಅಥವಾ ಸತ್ಪುರುಷರಂತೆಯೋ ಎಂಬುದನ್ನು ಮನುಷ್ಯನು ಪ್ರತಿದಿನವೂ ಅವಲೋಕಿಸಿಕೊಳ್ಳಬೇಕು; ಆಗ ಮಾತ್ರ ಪರಿಪೂರ್ಣತೆಯೆಡೆಗೆ ಸಾಗಬಹುದು’ ಎಂಬರ್ಥ ನೀಡುವ ಸೂಕ್ತಿಯೊಂದಿದೆ. ಇಂದಿನ ಶರವೇಗದ ಜೀವನಕ್ರಮದಲ್ಲಿ, ತಮ್ಮನ್ನು ತಾವು ಅವಲೋಕಿಸಿಕೊಳ್ಳುವ ವ್ಯವಧಾನ ಯಾರಿಗಿದೆ ಎಂಬ ಪ್ರಶ್ನೆಯಿಲ್ಲಿ ಹೊಮ್ಮಬಹುದು; ಆದರೆ ನಮ್ಮೊಳಗಿನ ಸತ್ವವನ್ನು ಜಾಗೃತಗೊಳಿಸಿಕೊಂಡರೆ ಎಂಥ ಸವಾಲಿನ ಸಂದರ್ಭವನ್ನೂ ಮೀರಿ ಸಾಧನೆ ಮಾಡಬಹುದು. ಸಾಧನೆಗೆ ಸವಲತ್ತು-ಸೌಲಭ್ಯಗಳಿಲ್ಲ ಎಂದು ಕೊರತೆಯನ್ನೇ ನೆನೆದು ಕೊರಗುವುದರ ಬದಲು, ‘ಯುದ್ಧವನ್ನು ಗೆಲ್ಲುವುದು ಆಯುಧದಿಂದಲ್ಲ, ಆತ್ಮಬಲದಿಂದ’ ಎಂಬ ಚಿರಂತನ ಸತ್ಯಕ್ಕೆ ನಾವೆಲ್ಲರೂ ತೆರೆದುಕೊಳ್ಳಬೇಕಿದೆ. ಆದ್ದರಿಂದ, ‘ಯಶಸ್ಸು ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ’ ಎಂಬ ಜಾಣನುಡಿಯನ್ನು ಪಟ್ಟಾಗಿ ಅನುಸರಿಸಿ ಎಡೆಬಿಡದೆ ದುಡಿದು, ಮಡಿಯುವುದರೊಳಗಾಗಿ ಸಾಧಕರಾಗೋಣ.

(ಲೇಖಕರು ಸಂಸ್ಕೃತ ಅಧ್ಯಾಪಕರು ಮತ್ತು ಯಕ್ಷಗಾನ ಕಲಾವಿದರು)