ದೈವಸಾನ್ನಿಧ್ಯ ಎಲ್ಲಿದೆ..?

| ಜೆ.ಬಿ. ಉದಯ ಮಂಟಗಣಿ

ಜಪಾನಿನ ಫೂಜಿಯಾಮ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಒಂದು ಆಶ್ರಮವಿತ್ತು. ಅಲ್ಲಿ ಒಬ್ಬ ಝೆನ್ ಗುರುವಿದ್ದರು. ಅಲ್ಲಿಗೆ ಆಗಮಿಸಿದ ವಿದ್ವಾಂಸನೊಬ್ಬ ಗುರುವಿಗೆ ನಮಸ್ಕರಿಸಿ, ‘ಪೂಜ್ಯರೇ, ನನಗೆ ಭಗವಂತನನ್ನು ತಲುಪುವ ಮಾರ್ಗವನ್ನು ತೋರಿಸಿ’ ಎಂದು ಕೋರಿದ. ‘ಈ ಬೆಟ್ಟದ ಮಾರ್ಗ ಹಿಡಿದುಹೋಗು’ ಎಂದರು ಗುರುಗಳು. ‘ಆದರೆ ಇದು ಬೆಟ್ಟಕ್ಕೆ ಹೋಗುವ ಮಾರ್ಗ, ಭಗವಂತನನ್ನು ಅದು ಹೇಗೆ ತಲುಪುತ್ತದೆ? ಸಾಧ್ಯವಿಲ್ಲ…’ ಎಂದ ವಿದ್ವಾಂಸ. ‘ಹೀಗೇ ಸಂಶಯಿಸುತ್ತಿದ್ದರೆ ನೀನು ಈ ಜಗತ್ತಿನಲ್ಲಿ ಯಾವ ದಾರಿ ಹಿಡಿದುಹೋದರೂ ನಿನಗೆ ದೇವರು ಕಾಣಿಸುವುದಿಲ್ಲ. ಆದ್ದರಿಂದ ಶ್ರದ್ಧಾಭಕ್ತಿಯೊಂದಿಗೆ ಒಮ್ಮೆ ಈ ಬೆಟ್ಟದ ಹಾದಿ ಹಿಡಿದು ನೋಡು’ ಎಂದರು ಗುರುಗಳು. ವಿದ್ವಾಂಸ ವಿಧಿಯಿಲ್ಲದೆ, ಒಲ್ಲದ ಮನಸ್ಸಿನಿಂದಲೇ ಆ ದಾರಿಯಲ್ಲಿ ಉಪಕ್ರಮಿಸಿದ- ದೇವರನ್ನು ಕಾಣಬೇಕೆಂದಲ್ಲ, ಆ ಗುರುಗಳ ಮಾತನ್ನು ಪರೀಕ್ಷಿಸಲೆಂದು!

ಬಹುದೊಡ್ಡದೂ ಎತ್ತರದ್ದೂ ಆಗಿದ್ದ ಆ ಬೆಟ್ಟವನ್ನು ವಿದ್ವಾಂಸ ತುಂಬ ಪ್ರಯಾಸದಿಂದಲೇ ಏರಲು ಶುರುಮಾಡಿದ. ಹೆಜ್ಜೆಹೆಜ್ಜೆಗೂ ಏದುಸಿರು ಬರುತ್ತಿದ್ದರೂ ಆಯಾಸ ವಾಗುತ್ತಿದ್ದರೂ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಅವನ ಧ್ಯಾನವೆಲ್ಲ ಬೆಟ್ಟದ ಶಿಖರವನ್ನು ತಲುಪುವುದೇ ಆಗಿದ್ದರಿಂದ, ಆಗೊಮ್ಮೆ ಈಗೊಮ್ಮೆ ಎದುರಲ್ಲಿ ಸುಳಿಯುತ್ತಿದ್ದ ವನ್ಯಪ್ರಾಣಿಗಳಿಂದಲೂ ಆತ ವಿಚಲಿತನಾಗದೆ ಬಹುತೇಕ ಕಣ್ಣುಮುಚ್ಚಿಕೊಂಡೇ ಹೆಜ್ಜೆಹಾಕತೊಡಗಿದ. ಕೊನೆಗೊಮ್ಮೆ ‘ಇನ್ನು ಹತ್ತಲಾರೆ…’ ಎಂಬಷ್ಟರಮಟ್ಟಿಗೆ ಸುಸ್ತಾಯಿತು. ಅಪ್ರಯತ್ನವಾಗಿ ಕಣ್ಣುತೆರೆದು ನೋಡಿದರೆ, ಪರಮಾಶ್ಚರ್ಯ! ಬೆಟ್ಟವೇ ಕಾಣಲಿಲ್ಲ. ಕಾರಣ, ಆತ ಅದರ ತುತ್ತತುದಿಗೆ ಬಂದು ನಿಂತಿದ್ದ. ಅವನ ಕಣ್ಣೆದುರು ವಿಶಾಲವಿಶ್ವ ತೆರೆದುಕೊಂಡಿತ್ತು. ತಕ್ಷಣವೇ ಆತನ ಒಳಗಣ್ಣೂ ತೆರೆಯಿತು- ‘ಬೆಟ್ಟವನ್ನು ನೋಡಲು ಬಂದಿದ್ದಕ್ಕೆ ವಿಶ್ವವೇ ಕಂಡಿತು, ಇನ್ನು ವಿಶ್ವವನ್ನು ಕಾಣಲು ಯತ್ನಿಸಿದರೆ ‘ವಿಶ್ವಾತೀತ ವಸ್ತು’ ಕಂಡೇಕಾಣುತ್ತದೆ’ ಎಂಬ ದೃಢವಿಶ್ವಾಸದಲ್ಲಿ ಆತ ಬಂಡೆಯೊಂದರ ಮೇಲೆ ದೃಢವಾಗಿ ಕುಳಿತ. ಸುತ್ತಲೂ ಒಮ್ಮೆ ಕಣ್ಣುಹಾಯಿಸಿದ. ವಿಶಾಲವಾಗಿ ವ್ಯಾಪಿಸಿದ್ದ ಭೂಮಿ, ಅದನ್ನು ಬಾಚಿ ತಬ್ಬಿದಂತಿರುವ ಕೊನೆಮೊದಲಿಲ್ಲದ ಶುಭ್ರ ಆಕಾಶ, ಅದರಲ್ಲಿ ತೇಲಿಬರುವ ಮೇಘರಾಶಿ. ಕೆಳಗಡೆ ಕಣ್ಣುಹಾಯಿಸಿದರೆ ಹಸಿರು ಹಾಸಿದಂತಿರುವ ವನಸಿರಿ. ಅದನ್ನೆಲ್ಲ ನೋಡುತ್ತ ಹೋದಂತೆ ಮನಸ್ಸು ವಿಶಾಲವೂ, ಪರಿಶುಭ್ರವೂ, ಪ್ರಶಾಂತವೂ ಆಗಿತ್ತು. ಕೊನೆಗೆ ಆತ ನೋಡುವುದನ್ನೆಲ್ಲ ನಿಲ್ಲಿಸಿ ಧ್ಯಾನದಲ್ಲಿ ಮಗ್ನನಾದ. ಅದೇ ಕ್ಷಣ ಆತನಿಗೆ ನಿರ್ವಾಣದ ಅನುಭೂತಿಯಾಯ್ತು. ಆತ ‘ಕಾಣುವ’ ದಾರಿಯನ್ನು ಹಿಡಿದುಹೋಗಿ ‘ಕಾಣದುದನ್ನು’ ಕಂಡಿದ್ದ. ‘ಕಂಡುದ ಹಿಡಿಯಲೊಲ್ಲದೆ ಕಾಣುದುದನರಸಿ ಹಿಡಿದಿಹೆನೆಂದಡೆ ಸಿಕ್ಕದೆಂಬ ಬಳಲಿಕೆಯ ನೋಡಾ! ಕಂಡುದನೆ ಕಂಡು ಗುರು ಪಾದವ ಹಿಡಿದಲ್ಲಿ ಕಾಣುದದ ಕಾಣಬಹುದು ಗುಹೇಶ್ವರ’ ಎಂದಿದ್ದಾರೆ ಅಲ್ಲಮಪ್ರಭುಗಳು. ಭಗವಂತ ಎಂಬುದೊಂದು ಆನಂದದ ಅನುಭೂತಿ, ಪರಮೋಚ್ಚ ಶಕ್ತಿ. ಅದನ್ನು ಅರಸಿ ಹುಚ್ಚುಕುದುರೆಯಂತೆ ಎಲ್ಲೆಲ್ಲೋ ಅಲೆಯಬೇಕಿಲ್ಲ. ಅದು ನಾವಿರುವಲ್ಲೇ ಇದೆ, ನಮ್ಮೊಳಗೇ ಇದೆ ಎಂಬ ಪರಮಸತ್ಯವನ್ನು ಅರಿತು ಸಾಧನೆಯಲ್ಲಿ ತೊಡಗೋಣ, ಯೋಗ್ಯರಾಗಿ ಬಾಳೋಣ.

(ಲೇಖಕರು ಹವ್ಯಾಸಿ ಬರಹಗಾರರು)