ನಿಜವಾದ ಬಾಳಸಂಗಾತಿ

| ಡಾ. ಕೆ.ಪಿ. ಪುತ್ತೂರಾಯ

ಅದೊಂದು ಸಭಾಂಗಣದಲ್ಲಿ ಪ್ರವಚನವನ್ನು ಏರ್ಪಡಿಸಲಾಗಿತ್ತು. ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರವಚನಕಾರರು, ‘ನಿಮ್ಮ ಬಾಳಸಂಗಾತಿ ಯಾರು?’ ಎಂದು ಪ್ರಶ್ನಿಸಿದರು. ‘ಅಪ್ಪ’, ‘ಅಮ್ಮ’, ‘ಮಕ್ಕಳು’, ‘ಗೆಳೆಯ’… ಹೀಗೆ ಬಗೆಬಗೆಯ ಉತ್ತರಗಳು ಹೊಮ್ಮಿದವು. ಮತ್ತೆ ಕೆಲವರು, ‘ವಿವಾಹದ ವೇಳೆ ಕೈಹಿಡಿದ, ಜೀವನಪರ್ಯಂತ ಕಷ್ಟ-ನಷ್ಟಗಳಿರಲಿ, ಏಳು-ಬೀಳುಗಳಿರಲಿ ಕೈಬಿಡದ ಪತಿ/ಪತ್ನಿ’ ಎಂದು ಉತ್ತರಿಸಿದರು. ಆಗ ಪ್ರವಚನಕಾರರು, ‘ಇವರ್ಯಾರೂ ಅಲ್ಲ; ನಿಮ್ಮ ನಿಮ್ಮ ದೇಹವೇ ನಿಮ್ಮ ನಿಜವಾದ ಬಾಳಸಂಗಾತಿ….’ ಎಂದರು. ಅದು ಹೇಗೆ ಎಂದು ಸಭಿಕರು ಪ್ರಶ್ನಿಸಲಾಗಿ ಪ್ರವಚನಕಾರರು- ‘ಹುಟ್ಟಿನಿಂದ ಸಾಯುವ ತನಕ ನಮ್ಮ ಜತೆಯೇ ಇರುವ ಏಕೈಕ ಸಂಗಾತಿ ಎಂದರೆ ನಮ್ಮ ದೇಹ. ನಮ್ಮ ದೇಹವೇ ನಾವು ವಾಸಮಾಡುವ ಮನೆಯ ನಿಜವಾದ ವಿಳಾಸ. ದೇಹವು ನಮ್ಮ ಇರುವಿಕೆಯೂ ಹೌದು, ಗುರುತೂ ಹೌದು, ಆಸ್ತಿಯೂ ಹೌದು, ಜವಾಬ್ದಾರಿಯೂ ಹೌದು. ಅದನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಅದೂ ನಮ್ಮ ಜೀವನವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ದೇಹದ ಆರೋಗ್ಯವನ್ನು ನಿರ್ಲಕ್ಷಿಸಿದರೆ ಬದುಕನ್ನೇ ಅಲಕ್ಷಿಸಿದಂತೆ. ನಮ್ಮ ದೇಹಕ್ಕಾಗುವ ನೋವನ್ನಾಗಲೀ, ಆನಂದವನ್ನಾಗಲೀ ನಾವೇ ಅನುಭವಿಸಬೇಕೇ ಹೊರತು, ಬೇರೆ ಯಾರೊಂದಿಗೂ ಹಂಚಿಕೊಳ್ಳಲಾಗದು. ಆದ್ದರಿಂದ ದೇಹವೇ ನಮ್ಮ ನಿಜವಾದ ಬಾಳಸಂಗಾತಿ’ ಎಂದು ಸಮರ್ಥಿಸಿಕೊಂಡರು. ಸಭಿಕರಲ್ಲಿ ಒಂದಷ್ಟು ಅರಿವಿನ ಸಂಚಲನೆ ಮೂಡುತ್ತಿದ್ದಂತೆ ಹಾಸ್ಯಮಯವಾಗಿ ಮಾತು ಮುಂದುವರಿಸಿದ ಪ್ರವಚನಕಾರರು, ‘ನಮ್ಮ ದೇಹವೊಂದು ಮಂತ್ರಿಮಂಡಲವಿದ್ದಂತೆ. ಒಂದು ಕೈ ಕೃಷಿಮಂತ್ರಿಯಾದರೆ, ಮತ್ತೊಂದು ಕೈ ಕೈಗಾರಿಕಾ ಮಂತ್ರಿ. ಕಾಲು ಸಾರಿಗೆ ಮಂತ್ರಿ. ಕಣ್ಣು ಉಸ್ತುವಾರಿ ಮಂತ್ರಿ, ಕಿವಿ ಗುಪ್ತಚರ ಇಲಾಖಾ ಮಂತ್ರಿ, ಮೂಗು ವಾಯುಮಾಲಿನ್ಯ ತಪಾಸಣಾ ಮಂತ್ರಿ, ಚರ್ಮ ರಕ್ಷಣಾ ಮಂತ್ರಿ, ಬಾಯಿ ವಾರ್ತಾ ಮಂತ್ರಿ, ಜಠರ ಆಹಾರ ಮಂತ್ರಿ, ಮೂತ್ರಪಿಂಡಗಳು ನೀರಾವರಿ ಮಂತ್ರಿ, ಜನನಾಂಗಗಳು ಕುಟುಂಬ ಯೋಜನಾ ಮಂತ್ರಿ ಮತ್ತು ತಲೆ ಮುಖ್ಯಮಂತ್ರಿ ಇದ್ದ ಹಾಗೆ’ ಎಂದರು.

ತಾತ್ಪರ್ಯ ಇಷ್ಟೇ: ಕಣ್ಣಿಗೆ ಕಾಣುವ ರೋಗ-ರುಜಿನಗಳು ಇಲ್ಲವೆಂದ ಮಾತ್ರಕ್ಕೆ ಒಬ್ಬ ವ್ಯಕ್ತಿ ಆರೋಗ್ಯವಂತನೆಂದು ಅರ್ಥವಲ್ಲ! ವಯಸ್ಸಿಗೆ ತಕ್ಕಂತಹ ಶಾರೀರಿಕ ಲವಲವಿಕೆಯನ್ನು ಹೊಂದಿರುವುದೇ ನಿಜವಾದ ಆರೋಗ್ಯ. ಆರೋಗ್ಯವೆಂದರೆ ಬರೀ ಮಾನಸಿಕ, ಆತ್ಮದ ಆರೋಗ್ಯ ಮಾತ್ರವಲ್ಲ. ಶಾರೀರಿಕ ಆರೋಗ್ಯವೂ ಹೌದು. ದುಗುಡರಹಿತ ಮನಸ್ಸು, ದುಃಖರಹಿತ ಆತ್ಮವಿದ್ದಂತೆ. ನಮ್ಮ ದೇಹವೂ ರೋಗರಹಿತವಾಗಿರಬೇಕು. ಆಗಲೇ ಸಂಪೂರ್ಣ ಆರೋಗ್ಯ.

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)