ಧರ್ಮವಿದ್ದಲ್ಲಿ ಜಯ

| ಡ್ಯಾನಿ ಪಿರೇರಾ

ಯಜ್ಞದಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸುವ ಅರಣಿಯನ್ನು ಋಷಿಯೊಬ್ಬ ಕಳೆದುಕೊಂಡಿದ್ದ. ಅದನ್ನು ಹುಡುಕಲು ಹೊರಟ ಪಾಂಡವರು, ಈ ಯತ್ನದಲ್ಲಾದ ಬಳಲಿಕೆಯಿಂದ ವಿಪರೀತ ಬಾಯಾರಿದರು. ಜಲದ ಸೆಲೆಯನ್ನು ಗುರುತಿಸಲು ಮರವೇರಿದ ನಕುಲನಿಗೆ ದೂರದಲ್ಲಿ ಸರೋವರವೊಂದು ಕಂಡು, ನೀರು ತರಲು ಹೊರಟ. ಇನ್ನೇನು ಪಾತ್ರೆಯಲ್ಲಿ ನೀರು ತುಂಬಿಸಬೇಕೆಂದಿರುವಾಗ, ‘ನಿಲ್ಲು, ಈ ಸರೋವರ ನನ್ನದು. ನೀರು ಕುಡಿಯುವುದಕ್ಕೂ ಮುನ್ನ ನನ್ನ ಪ್ರಶ್ನೆಗೆ ಉತ್ತರಿಸು’ ಎಂಬ ಅಶರೀರವಾಣಿ ಕೇಳಿತು. ನಕುಲ ಅದನ್ನು ಉಪೇಕ್ಷಿಸಿ ನೀರು ಕುಡಿಯುತ್ತಿದ್ದಂತೆ ಪ್ರಜ್ಞೆತಪ್ಪಿ ಕೆಳಗೆ ಬಿದ್ದ. ಅವನನ್ನು ಹುಡುಕಿಕೊಂಡು ಬಂದ ಭೀಮ, ಅರ್ಜುನ, ಸಹದೇವರಿಗೂ ಕ್ರಮವಾಗಿ ಇದೇ ಗತಿಯಾಯಿತು. ಕೊನೆಯಲ್ಲಿ ಅಲ್ಲಿಗೆ ಬಂದ ಧರ್ಮರಾಯ, ತಮ್ಮಂದಿರು ಹೀಗೆ ಪ್ರಜ್ಞೆತಪ್ಪಿ ಬಿದ್ದಿರುವುದನ್ನು ಗಾಬರಿಯಿಂದ ನೋಡುತ್ತಿರುವಾಗ ಮತ್ತೊಮ್ಮೆ ಅದೇ ಅಶರೀರವಾಣಿಯಾಯಿತು. ಅದು ಯಕ್ಷನ ದನಿಯಾಗಿತ್ತು. ನನ್ನ ಪ್ರಶ್ನೆಗೆ ಉತ್ತರಿಸದೆ ನೀರು ಕುಡಿದರೆ ನಿನಗೂ ಇದೇ ಗತಿಯಾದೀತು ಎಂದು ಯಕ್ಷ ಎಚ್ಚರಿಸಿದಾಗ ಧರ್ಮಜ ತಾಳ್ಮೆಯಿಂದ ಸಮ್ಮತಿಸಿದ. ‘ಮನುಷ್ಯನ ಅತಿದೊಡ್ಡ ಮಿತ್ರ ಯಾರು?’ ಎಂಬ ಮೊದಲ ಪ್ರಶ್ನೆಗೆ ‘ತಾಳ್ಮೆ’ ಎಂದುತ್ತರಿಸಿದ ಧರ್ಮಜ. ‘ಗಾಳಿಗಿಂತ ಚಂಚಲ ಯಾವುದು?’ ಎಂಬ ಪ್ರಶ್ನೆಗೆ ‘ಮನಸ್ಸು’ ಎಂಬ ಉತ್ತರ ಹೊಮ್ಮಿತು. ಹೀಗೆಯೇ ಪ್ರಶ್ನೋತ್ತರಗಳ ಸರಣಿ ಮುಂದುವರಿಯಿತು. ಕೊನೆಗೆ, ‘ಮನುಷ್ಯನ ಜೀವನದ ಅತ್ಯದ್ಭುತ ವಿಚಾರ ಯಾವುದು?’ ಎಂದು ಯಕ್ಷ ಕೇಳಿದಾಗ, ‘ಸಾವು ಸಂಭವಿಸುತ್ತಲೇ ಇರುವುದನ್ನು ಮನುಷ್ಯ ನೋಡುತ್ತಾನೆ, ಆದರೆ ಸಾವನ್ನು ಗೆದ್ದವರಿಲ್ಲ, ಸಾಯುವ ದಿನ ಬಲ್ಲವರೂ ಇಲ್ಲ’ ಎಂಬ ಉತ್ತರ ಹೊಮ್ಮಿತು. ಆಗ ಯಕ್ಷ, ‘ತಾಳ್ಮೆಯಿಂದ ಉತ್ತರಿಸಿದ್ದೀಯೆ; ನಿನ್ನ ಸೋದರರ ಪೈಕಿ ಒಬ್ಬನನ್ನು ಬದುಕಿಸುತ್ತೇನೆ. ಯಾರು ಬೇಕು ನಿನಗೆ?’ ಎಂದು ಕೇಳಿದ. ಆಗ ಧರ್ಮರಾಯ ಕೈಮುಗಿದು, ‘ನಾನು, ಭೀಮ, ಅರ್ಜುನರು ಕುಂತಿಯ ಮಕ್ಕಳು; ನಕುಲ-ಸಹದೇವರು ಮಾದ್ರಿಯ ಮಕ್ಕಳು. ಕುಂತಿಯ ಮಗನಾಗಿ ನಾನು ಬದುಕಿರುವೆ, ಮಾದ್ರಿಮಕ್ಕಳ ಪೈಕಿ ಯಾರನ್ನಾದರೂ ಬದುಕಿಸು ಪ್ರಭುವೇ’ ಎಂದ. ಧರ್ಮಜನ ತತ್ತ್ವನಿಷ್ಠೆಗೆ ತಲೆದೂಗಿದ ಯಕ್ಷ, ನಿಜರೂಪದಲ್ಲಿ ಪ್ರಕಟಗೊಂಡ. ಆತ ಬೇರಾರೂ ಆಗಿರದೆ ಯುಧಿಷ್ಠಿರನ ಜನ್ಮದಾತ ಯಮಧರ್ಮರಾಯನಾಗಿದ್ದ! ಧರ್ಮಜನ ಧರ್ಮನೀತಿಗೆ ಮುದಗೊಂಡು ಎಲ್ಲ ಸೋದರರನ್ನೂ ಬದುಕಿಸಿದ. ಹೌದು, ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ. ಧರ್ಮದೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಧರ್ಮರಹಿತ ಚಿಂತನೆ ಜೀವಚ್ಛವದಂತೆಯೇ ಸರಿ. ‘ಧರ್ಮವೇ ಭಾರತದ ಉಸಿರು’ ಎಂದು ಸ್ವಾಮಿ ವಿವೇಕಾನಂದರು ಸಾರಿಹೇಳಿದ್ದು ಈ ಕಾರಣಕ್ಕೇ. ಆದ್ದರಿಂದ, ಅಂತರಂಗಶುದ್ಧಿಯೊಂದಿಗೆ ತತ್ತ್ವದರ್ಶಿತ ಮತ್ತು ಧರ್ವಚರಣೆಯ ಬದುಕಿಗೆ ಒಡ್ಡಿಕೊಳ್ಳಲು ಸಂಕಲ್ಪ ಮಾಡೋಣ.

(ಲೇಖಕರು ಅಧ್ಯಾಪಕರು)