ವಿವೇಚನೆಯಿರಲಿ…

|ಮಹಾದೇವ ಬಸರಕೋಡ

ಮುಲ್ಲಾ ನಸ್ರುದ್ದೀನ್ ಒಮ್ಮೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅವನ ತಲೆಗೆ ಬಲವಾಗಿ ಹೊಡೆದ. ಇದರಿಂದ ಕ್ಷಣಕಾಲ ಕಂಗಾಲಾದ ನಸ್ರುದ್ದೀನ್, ‘ನನಗೆ ಹೊಡೆದಿದ್ದೇಕೆ…. ಇದು ತಪ್ಪಲ್ಲವೇ?’ ಎಂದು ಅಪರಿಚಿತನಿಗೆ ದಬಾಯಿಸಿದಾಗ ಆತ ಉಡಾಫೆಯ ನಗೆಯೊಂದಿಗೆ ‘ನೀನು ಹಿಂದಿನಿಂದ ನನ್ನ ಸ್ನೇಹಿತನಂತೆ ಕಂಡಿದ್ದಕ್ಕೇ ನಿನಗೆ ಹೊಡೆದೆ; ಇದರಲ್ಲಿ ನನ್ನದೇನೂ ತಪ್ಪಿಲ್ಲ. ನನ್ನ ಸ್ನೇಹಿತನಂತೆ ಕಂಡ ನಿನ್ನದೇ ತಪು್ಪ’ ಎಂದು ವಾದಿಸಿದ. ಈ ಮಾತಿನಿಂದ ಕುಪಿತಗೊಂಡ ನಸ್ರುದ್ದೀನ್, ನ್ಯಾಯ ನಿರ್ಣಯಿಸುತ್ತಿದ್ದ ಆ ಊರಿನ ಮುಖ್ಯಸ್ಥನ ಬಳಿ ತೆರಳಿ ನಡೆದಿದ್ದೆಲ್ಲವನ್ನೂ ಹೇಳಿಕೊಂಡ. ‘ಏನಯ್ಯಾ, ಈತನಿಗೆ ಹೊಡೆದಿದ್ದು ನಿಜವೇ?’ ಎಂದು ಮುಖ್ಯಸ್ಥ ಆ ಅಪರಿಚಿತನನ್ನು ಕೇಳಿದ. ‘ಹೌದು, ಆತ ನನ್ನ ಗೆಳೆಯನಂತೆ ಕಂಡ, ಅದಕ್ಕಾಗೇ ಹೊಡೆದೆ’ ಎಂದ ಅಪರಿಚಿತ. ‘ನೀನು ಮಾಡಿದ್ದು ತಪು್ಪ; ಇದಕ್ಕೆ ದಂಡನೆಯಾಗಿ ನೀನು ನಸ್ರುದ್ದೀನ್​ಗೆ ಐದು ಬೆಳ್ಳಿಯ ನಾಣ್ಯಗಳನ್ನು ನೀಡಬೇಕು’ ಎಂದು ತೀರ್ಪಿತ್ತ ಮುಖ್ಯಸ್ಥ. ‘ಸದ್ಯಕ್ಕೆ ನನ್ನ ಬಳಿ ನಾಣ್ಯವಿಲ್ಲ, ಮನೆಗೆ ಹೋಗಿ ತರಲು ಅಪ್ಪಣೆ ಕೊಡಿ’ ಎಂದ ಅಪರಿಚಿತ. ಆಗ ಆ ಮುಖ್ಯಸ್ಥ, ‘ಅದಕ್ಕೇನಂತೆ, ನೀನು ಮನೆಗೆ ಹೋಗಿ ನಾಣ್ಯಗಳನ್ನು ತಾ; ಅಲ್ಲಿಯವರೆಗೂ ನಸ್ರುದ್ದೀನ್ ಇಲ್ಲೇ ಕೂತಿರುತ್ತಾನೆ’ ಎಂದ.

ಆದರೆ, ಎಷ್ಟು ಹೊತ್ತು ಕಾದರೂ ಅಪರಿಚಿತ ಮರಳಿ ಬರಲಿಲ್ಲ. ಆಗ ನಸ್ರುದ್ದೀನ್ ‘ಆತನ ಮನೆ ದೂರವಿದೆಯೇ? ಅವನು ಬರುವ ಲಕ್ಷಣಗಳಿನ್ನೂ ಕಾಣುತ್ತಿಲ್ಲವಲ್ಲ?’ ಎಂದು ಪಂಚಾಯ್ತಿಕಟ್ಟೆಯ ಸಮೀಪ ಕುಳಿತಿದ್ದ ಮತ್ತೋರ್ವ ವ್ಯಕ್ತಿಯನ್ನು ಪ್ರಶ್ನಿಸಿದ. ಅದಕ್ಕೆ ಆತ, ‘ಮೂರ್ಖಾ, ಅವನು ಈ ಊರಿನ ಮುಖ್ಯಸ್ಥನ ಸ್ನೇಹಿತ; ಅವನನ್ನು ರಕ್ಷಿಸುವ ಸಲುವಾಗೇ ಹೀಗೆ ನಾಟಕವಾಡಿದ್ದಾನೆ. ಆತ ಮರಳಿ ಬರುವ ಸಾಧ್ಯತೆ ಕಡಿಮೆ…’ ಎಂದ. ಮುಖ್ಯಸ್ಥನೂ ತನಗೆ ಮೋಸಮಾಡುತ್ತಿದ್ದಾನೆ ಎಂಬುದು ಗೊತ್ತಾಗುತ್ತಿದ್ದಂತೆ ಅವನಿಗೆ ಪಾಠ ಕಲಿಸಲು ನಸ್ರುದ್ದೀನ್ ನಿರ್ಧರಿಸಿ, ಹಿಂದಿನಿಂದ ಹೋಗಿ ಅವನ ತಲೆಗೆ ಬಲವಾಗಿ ಹೊಡೆದ. ‘ನನಗೇಕೆ ಹೊಡೆದೆ?’ ಎಂದು ಮುಖ್ಯಸ್ಥ ಕೋಪಗೊಂಡು ಪ್ರಶ್ನಿಸಲಾಗಿ, ‘ಏನಿಲ್ಲ, ನನ್ನ ತಲೆಗೆ ಹೊಡೆದವನಿಗೆ ಐದು ಬೆಳ್ಳಿ ನಾಣ್ಯವನ್ನು ದಂಡವಾಗಿ ಕಟ್ಟುವಂತೆ ಆದೇಶಿಸಿದಿರಿ. ಈಗ ನನ್ನಿಂದ ನಿಮಗೆ ಒದೆ ಬಿದ್ದಿರುವುದರಿಂದ ನಾನೂ ಹಾಗೆಯೇ ದಂಡವನ್ನು ಕಟ್ಟಬೇಕಲ್ಲವೇ? ನೀವೀಗ ಮನೆಗೆ ಕಳಿಸಿರುವ ವ್ಯಕ್ತಿ ನನಗೆ ಕೊಡಬೇಕಾದ ಬೆಳ್ಳಿ ನಾಣ್ಯಗಳನ್ನು ತಾವೇ ತೆಗೆದುಕೊಳ್ಳಿ. ಲೆಕ್ಕಾಚಾರ ಸರಿಯಾಯ್ತಲ್ಲ….’ ಎನ್ನುತ್ತ ಜಾಗ ಖಾಲಿಮಾಡಿದ ನಸ್ರುದ್ದೀನ್! ಕೈಯಲ್ಲಿ ಹಣ-ಅಧಿಕಾರವಿದೆ ಎಂದೋ ಅಥವಾ ತಪ್ಪೆಸಗಿದವರು ನಮ್ಮವರು ಎಂಬ ಕಾರಣಕ್ಕೋ, ತಪ್ಪಾಗಿರುವುದು ಕಂಡರೂ ತಿದ್ದಿಹೇಳದೆ ಅಮಾಯಕರನ್ನು ಗೋಳಾಡಿಸುವುದು ಸಲ್ಲ. ಇಂಥ ವಿವೇಚನಾರಹಿತ ನಡೆಗಳು ಯಾರಿಗೂ ಶೋಭೆ ತರುವುದಿಲ್ಲ ಎಂಬುದನ್ನು ಮರೆಯದಿರೋಣ.

(ಲೇಖಕರು ಅಧ್ಯಾಪಕರು)