ನಮಸ್ಕಾರದ ಮಹತ್ವ

|ಡಾ. ಗಣಪತಿ ಆರ್. ಭಟ್

ಮಾರ್ಕಂಡೇಯನು ಐದು ವರ್ಷದ ಬಾಲಕ. ತಂದೆ ಮೃಕಂಡ ಮುನಿಗಳ ತೊಡೆ ಮೇಲೆ ಕುಳಿತಿದ್ದ ಸಂದರ್ಭದಲ್ಲಿ ಬಂದ ಕಾಲಜ್ಞಾನಿ ಪಂಡಿತನೋರ್ವ- ‘ಈ ಮಗುವಿನಲ್ಲಿ ದೈವೀಗುಣಗಳಿವೆಯಾದರೂ, ಇನ್ನು ಆರು ತಿಂಗಳೊಳಗೆ ಈತನಿಗೆ ಮೃತ್ಯುವಿನಿಂದ ಗಂಡಾಂತರವಿದೆ’ ಎಂದು ಹೇಳಿ ಹೋದ.

ಮೃಕಂಡ ಮುನಿಗಳಿಗೆ ಒಮ್ಮೆಲೇ ದಿಗಿಲಾಯಿತು. ಸೂಕ್ತ ಪರಿಹಾರವನ್ನು ಚಿಂತಿಸಿ, ಆ ಕೂಡಲೇ ಮಗನಿಗೆ ಉಪನಯನ ಮಾಡಿ, ಧರ್ವೇಪದೇಶ ಮಾಡಿದರು. ‘ಮಗೂ, ಹಿರಿಯರು ಯಾರೇ ಎದುರಾಗಲಿ, ಕೂಡಲೇ ಅವರನ್ನು ವಿನಯದಿಂದ ಕಂಡು ನಮಸ್ಕರಿಸು. ಹಿರಿಯರ, ಜ್ಞಾನಿಗಳಾದವರ ಸೇವೆ ಮಾಡಬೇಕು’ ಎಂಬುದಾಗಿ ತಿಳಿಸಿದರು.

ಮಾರ್ಕಂಡೇಯನು ತಂದೆಯ ಉಪದೇಶಾನುಸಾರ ಹಿರಿಯರನ್ನು ನಮಸ್ಕರಿಸಿ ಗೌರವದಿಂದ ಕಾಣತೊಡಗಿದ. ದಿನಗಳು ಕಳೆದವು. ಜ್ಞಾನಿ ಹೇಳಿದ 6 ತಿಂಗಳು ಕಳೆಯಲು 3 ದಿನ ಮಾತ್ರ ಬಾಕಿ ಇತ್ತು. ಸಮಯಕ್ಕೆ ಸರಿಯಾಗಿ ತೀರ್ಥಯಾತ್ರೆಗೆ ಹೊರಟಿದ್ದ ಸರ್ಪ¤ಗಳು ಮಾರ್ಕಂಡೇಯನಿಗೆ ಎದುರಾದರು. ಯಥಾಪ್ರಕಾರ ಸಪ್ತ ಋಷಿಗಳಿಗೆ ಮಾರ್ಕಂಡೇಯನು ಉದ್ದಂಡ ನಮಸ್ಕಾರವನ್ನು ಮಾಡಿದ. ಪ್ರತಿಯಾಗಿ ಅವರು ಅವನಿಗೆ ‘ದೀರ್ಘಾಯುಷಿಯಾಗು’ ಎಂದು ಆಶೀರ್ವದಿಸಿದರು. ಕೂಡಲೇ ಆ ಋಷಿಗಳ ಪೈಕಿ ವಸಿಷ್ಠರು ಬಾಲಕನನ್ನು ಸೂಕ್ಷ್ಮವಾಗಿ ಗಮನಿಸಿ ‘ಅರೇ..! ಈ ಮಗುವಿಗೆ ಆಯಸ್ಸು ಉಳಿದಿರುವುದು ಇನ್ನು ಕೇವಲ ಮೂರು ದಿನ ಮಾತ್ರ. ನಾವು ದೀರ್ಘಾಯಸ್ಸನ್ನು ಆಶೀರ್ವದಿಸಿಯಾಗಿದೆ’ ಎಂದಾಗ ವಿಧಾತನ ತೀರ್ವನವೂ ಸುಳ್ಳಾಗಬಾರದು. ತಮ್ಮ ಆಶೀರ್ವಾದವೂ ಸುಳ್ಳಾಗಬಾರದು. ಇದಕ್ಕೇನಾದರೂ ಉಪಾಯ ಮಾಡಬೇಕು ಎಂದು ಅವರಲ್ಲಿಯೇ ತೀರ್ವನಿಸಿ ಆ ಬಾಲಕನನ್ನು ಬ್ರಹ್ಮನ ಬಳಿಗೆ ಕರೆದುಕೊಂಡು ಹೋದರು. ಬ್ರಹ್ಮನು ಆತನಲ್ಲಿರುವ ಶಿಷ್ಟಾಚಾರ, ವಿನಯತೆಯನ್ನು ಗಮನಿಸಿ ದೀರ್ಘಾಯಸ್ಸನ್ನು ಕರುಣಿಸಿದನು. ಹಿರಿಯರೋ, ಪರಿಚಿತರೋ ಅಥವಾ ಯಾರೇ ಇರಲಿ, ಎದುರಿಗೆ ಬಂದ ಸಜ್ಜನರನ್ನು ನಮಸ್ಕರಿಸಬೇಕು ಎಂಬುದು ಶಿಷ್ಟಾಚಾರ. ನಮಸ್ಕಾರವೆಂದರೆ ಕೇವಲ ಬಾಗುವ ಕ್ರಿಯೆಯಲ್ಲ. ಅದು ನಮ್ಮ ವಿನಯತೆಯ ಪ್ರತೀಕ. ನಮ್ಮಲ್ಲಿರುವ ನಿರಹಂಕಾರ ಗುಣವನ್ನು ಪ್ರಕಟಪಡಿಸುತ್ತದೆ. ಹಿರಿಯರನ್ನು, ಜ್ಞಾನವೃದ್ಧರನ್ನು ಸದಾ ವಂದಿಸಬೇಕು. ಗೌರವದಿಂದ ಕಾಣಬೇಕು. ಅವರನ್ನು ಶುಶ್ರೂಷೆ ಮಾಡಬೇಕು ಎನ್ನುತ್ತದೆ ನಮ್ಮ ಸನಾತನ ಧರ್ಮ. ಅದರ ತಿರುಳು ಇಷ್ಟೇ. ನಮ್ಮಿಂದ ಅಭಿವಾದನ ಪಡೆದವರು ಸದಾ ನಮಗೆ ಒಳ್ಳೆಯದನ್ನು ಹಾರೈಸುತ್ತಾರೆ. ಇದರಿಂದ ನಾವೂ ಒಂದಿಷ್ಟು ಉತ್ತೇಜಿತರಾಗಿ, ಸಕಾರಾತ್ಮಕವಾಗಿ ಬದುಕಬಹುದು. ಇತರರೆದುರು ತಲೆ ಬಾಗಿಸಿದಷ್ಟೂ ನಾವು ವಿನಯಶೀಲರಾಗುತ್ತ ಹೋಗುತ್ತೇವೆ. ವಿನಯತೆಯಿಂದ ಜ್ಞಾನವೂ, ಜ್ಞಾನದಿಂದ ಯಶಸ್ಸೂ ಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ಅದಕ್ಕಾಗಿಯೇ ಸುಭಾಷಿತವೊಂದು

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |

ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋ ಬಲಮ್| ಎಂಬುದಾಗಿ ಯಾರು ಸದಾ ನಮಸ್ಕರಿಸುತ್ತ ಹಿರಿಯರನ್ನು ಗೌರವಿಸುತ್ತಾರೋ, ಅವರಲ್ಲಿ ಆಯಸ್ಸು, ಜ್ಞಾನ, ಕೀರ್ತಿ, ಬಲಗಳು ಹೆಚ್ಚಾಗುತ್ತವೆ ಎನ್ನುತ್ತದೆ. ಈ ನಿಟ್ಟಿನಲ್ಲಿ ನಾವು ಅಭಿವಾದನಶೀಲರಾಗೋಣ.

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

Leave a Reply

Your email address will not be published. Required fields are marked *