ಉತ್ತಮ ಗುಣವೇ ವ್ಯಕ್ತಿತ್ವಕ್ಕೆ ಭೂಷಣ

| ಶಿಲ್ಪಾ ಕುಲಕರ್ಣಿ

ಶ್ರೀರಾಮಕೃಷ್ಣ ಪರಮಹಂಸರು ಸಾಧನಾ ಕಾಲದಲ್ಲಿ, ಧಾರ್ವಿುಕ ಮುಖಂಡ ಮತ್ತು ಆಧ್ಯಾತ್ಮಿಕ ವ್ಯಕ್ತಿಯೆಂದು ಪ್ರಸಿದ್ಧರಾದ ದೇವೇಂದ್ರನಾಥ ಟಾಗೋರರನ್ನು ಭೇಟಿಯಾಗಲು ಉತ್ಸುಕರಾಗಿ, ಅವರ ಮನೆಯ ಹಜಾರಕ್ಕೆ ಬಂದಿಳಿದರು. ಟಾಗೋರರು ರಾಮಕೃಷ್ಣರ ಬಗ್ಗೆ ತಿಳಿದು ಅವರನ್ನು ಕಾಣಲು ಕಾತುರತೆಯಿಂದ ಹಜಾರದತ್ತ ಬಂದರು.

ಬಂದು ನೋಡಿದಾಗ ಕೃಶಕಾಯದ ವ್ಯಕ್ತಿ, ಕುರುಚಲು ಗಡ್ಡ, ಪಂಚೆಯ ಮೇಲೆ ಸಾಧಾರಣ ಷರಟು, ಸ್ವಲ್ಪವೂ ಶಿಸ್ತು, ಸೊಗಸು ಇಲ್ಲ. ಆದರೆ ಮುಖದಲ್ಲಿ ಮಾತ್ರ ಅವರ್ಣನೀಯ ತೇಜಸ್ಸು, ವಿನಯವೆಂಬುದು ಅವರ ವ್ಯಕ್ತಿತ್ವದಲ್ಲೇ ತುಂಬಿಹೋಗಿದೆ. ಟಾಗೋರರನ್ನು ಕಂಡೊಡನೆ ರಾಮಕೃಷ್ಣರು ಕೈಜೋಡಿಸಿ ಶಿರಬಾಗಿ ನಮಿಸಿದರು. ಆದರೆ, ಟಾಗೋರರು ಅವರನ್ನು ಕಂಡು ಎಂತಹ ವಿಲಕ್ಷಣ ಮನುಷ್ಯನೆಂದುಕೊಂಡು ಬಿಗುಮಾನದಿಂದ ಪ್ರತಿ ನಮಸ್ಕಾರ ಹೇಳಿದರು. ಮುಂದೆ ಹಲವು ಗಂಟೆಗಳ ಕಾಲ ರಾಮಕೃಷ್ಣರು ಮತ್ತು ಟಾಗೋರರ ನಡುವೆ ಆಧ್ಯಾತ್ಮಿಕ ಸಂವಾದ ನಡೆಯಿತು. ನಂತರ ಅವರ ಜ್ಞಾನದ ಆಳವನ್ನರಿತ ಟಾಗೋರರು ರಾಮಕೃಷ್ಣರಿಗೆ ಶರಣಾದರು. ಅಲ್ಲದೆ, ಧಾರ್ವಿುಕ ಕಾರ್ಯಕ್ರಮವೊಂದಕ್ಕೆ ರಾಮಕೃಷ್ಣರಿಗೆ ಆಹ್ವಾನವಿತ್ತರು. ಆಗ ಟಾಗೋರರು ರಾಮಕೃಷ್ಣರಿಗೆ ಸ್ವಲ್ಪ ನೀಟಾಗಿ ಬಟ್ಟೆಬರೆ ಹಾಕಿಕೊಂಡು ಉತ್ತರೀಯ ಹೊದ್ದು ಬರಬೇಕೆಂದು ವಿನಂತಿಸಿಕೊಂಡರು. ಆದರೆ ರಾಮಕೃಷ್ಣರು ‘ಅದು ಮಾತ್ರ ಸಾಧ್ಯವಿಲ್ಲ ನಾನು ಬಾಬು ಆಗಲಾರೆ’ ಎಂದು ನಗುತ್ತಲೇ ಉತ್ತರಿಸಿದರು. ಹೀಗೆ ರಾಮಕೃಷ್ಣರು ಆಧ್ಯಾತ್ಮಿಕ ಸಾಧಕರ ಭೇಟಿಗೆ ಹೋದಾಗಲೆಲ್ಲ ಅವರ ಎಷ್ಟೋ ಶಿಷ್ಯರು ರಾಮಕೃಷ್ಣರ ವೇಷಭೂಷಣಗಳಿಂದ ಅವರನ್ನು ಅಳೆದು, ವೇದಾಂತ ಚರ್ಚೆಗೆ ಇವರು ತಕ್ಕವರಲ್ಲವೆಂದು, ಕೆಲವೊಮ್ಮೆ ನಮ್ಮ ಗುರುಗಳೇಕೆ ನಾವೇ ಸಾಕು ಇವರ ಪಾಂಡಿತ್ಯಕ್ಕೆ ಎಂದುಕೊಂಡು ಚರ್ಚೆ ಶುರುಮಾಡಿ ಬಿಡುತ್ತಿದ್ದರು.

ಬಾಲ್ಯದಿಂದಲೇ ಭಗವಂತನ ಅನುಗ್ರಹಕ್ಕಾಗಿ ಸಾಧನೆಗಿಳಿದವರು ರಾಮಕೃಷ್ಣರು. ಭೋಗಗಳನ್ನು ಕಡೆಗಣ್ಣಿನಿಂದಲೂ ನೋಡದೆ ಯೋಗಶಿಖರವನ್ನೇರಿ ಅವತಾರ ಪುರುಷರಾದರು. ಹೀಗೆ ತುಂಬ ಜನರು ಬರೀ ಬಾಹ್ಯಸೌಂದರ್ಯದಿಂದಲೇ ಪರರ ಯೋಗ್ಯತೆಯನ್ನು ತೂಗಿನೋಡುತ್ತಾರೆ. ನವಕಾಲೀನ ಜನತೆ ಆಧುನಿಕ ಜೀವನಶೈಲಿಯನ್ನು, ಅದರಲ್ಲೂ ಪಾಶ್ಚಾ್ಯತ್ಯ ಶೈಲಿಯನ್ನೇ ಹೆಚ್ಚಾಗಿ ಅನುಸರಿಸುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತ ಉಡುಗೆ-ತೊಡುಗೆ, ಆಚಾರ-ವಿಚಾರ ಅನುಸರಿಸಿದ್ದಲ್ಲಿ ಅನಾದರದಿಂದ ನೋಡುತ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರಾಮುಖ್ಯತೆ ಇದ್ದೆ ಇದೆ ಎಂದು ಪರಿಗಣಿಸಿ, ಬರೀ ಬಾಹ್ಯ ಸೊಗಸಿಗೆ ಆಕರ್ಷಿತರಾಗದೆ ಗೌರವವನ್ನು ನೀಡುವ ಸಹಜಗುಣ, ಸಭ್ಯತೆ ನಮ್ಮದಾಗಬೇಕು. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬಾಳುತ್ತ ಅಸಾಮಾನ್ಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಸಂಕಲ್ಪ ನಮ್ಮದಾಗಲಿ.

(ಲೇಖಕಿ ಇಂಜಿನಿಯರ್ ಹಾಗೂ ಹವ್ಯಾಸಿ ಬರಹಗಾರ್ತಿ)

Leave a Reply

Your email address will not be published. Required fields are marked *