ಒಳ್ಳೆಯತನವನ್ನು ಗುರುತಿಸೋಣ

|ಡ್ಯಾನಿ ಪಿರೇರಾ

ದ್ರೋಣಾಚಾರ್ಯರು ಒಮ್ಮೆ ಯುಧಿಷ್ಠಿರ ಮತ್ತು ದುರ್ಯೋಧನರನ್ನು ಕರೆದು ‘ನೀವಿಬ್ಬರೂ ಹಸ್ತಿನಾಪುರದಲ್ಲಿ ಸಂಚರಿಸಿ ಅಲ್ಲಿನ ಸಜ್ಜನರು ಮತ್ತು ದುರ್ಜನರ ಪಟ್ಟಿಮಾಡಿಕೊಂಡು ಬನ್ನಿ’ ಎಂದು ಆದೇಶವಿತ್ತರು. ಅಂತೆಯೇ ಅವರಿಬ್ಬರೂ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿ ಮಾಹಿತಿ ಪಡೆದರು. ದ್ರೋಣಾಚಾರ್ಯರು ಅದನ್ನು ಪರಾಮಶಿಸುವ ದಿನ ಬಂತು. ಅಂದು ಶಿಷ್ಯರೆಲ್ಲರೂ ಗುರುಗಳ ಸಾನ್ನಿಧ್ಯದಲ್ಲಿ ಒಟ್ಟುಗೂಡಿದ್ದರು. ಧರ್ಮಜ-ದುರ್ಯೋಧನರು ಸಂಗ್ರಹಿಸಿದ್ದ ಮಾಹಿತಿಯನ್ನು ತಿಳಿಯುವ ಕುತೂಹಲವೂ ಅವರಲ್ಲಿತ್ತು!

ದ್ರೋಣರು ಮೊದಲಿಗೆ ದುರ್ಯೋಧನನನ್ನು ಕರೆದು, ‘ವತ್ಸ, ಹಸ್ತಿನಾಪುರದಲ್ಲಿ ಸಜ್ಜನರೆಷ್ಟು ದುರ್ಜನರೆಷ್ಟು ಹೇಳಬಲ್ಲೆಯಾ?’ ಎಂದು ಕೇಳಿದಾಗ, ‘ಗುರುಗಳೇ, ನಿಮ್ಮ ಆದೇಶದಂತೆ ಮಾಹಿತಿ ಕಲೆಹಾಕಿದೆ. ನಾನು ಹೋದಕಡೆ ಯಾರೊಬ್ಬರೂ ಸಜ್ಜನರೇ ಕಾಣಲಿಲ್ಲ’ ಎಂದ ದುರ್ಯೋಧನ. ನಂತರ ದ್ರೋಣರು ಯುಧಿಷ್ಠಿರನನ್ನು ಕರೆದು ಇದೇ ಪ್ರಶ್ನೆ ಕೇಳಿದಾಗ, ‘ಗುರುಗಳೇ ನಿಮ್ಮ ಆಜ್ಞೆಯಂತೆ ಎಲ್ಲೆಡೆ ಅಲೆದೆ. ಸಜ್ಜನರ ಅನ್ವೇಷಣೆಯಲ್ಲಿ ನನಗೆ ಸಿಕ್ಕ ಅನುಭೂತಿ ಅವಿಸ್ಮರಣೀಯ! ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಉತ್ತಮ ಗುಣಗಳೇ ಇವೆ. ಯಾರೊಬ್ಬರೂ ದುರ್ಜನರು ಸಿಗಲಿಲ್ಲ! ಗುರುಗಳೇ, ಸಜ್ಜನರ ಸಂಗ-ಸಂಪರ್ಕಕ್ಕೆ ಅವಕಾಶ ಕಲ್ಪಿಸಿದ ನಿಮಗಿದೋ ಸಾಷ್ಟಾಂಗ ನಮಸ್ಕಾರ’ ಎಂದು ಯುಧಿಷ್ಠಿರ ಗುರುಗಳಿಗೆ ವಂದಿಸಿದ. ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನೇ ಗುರುತಿಸುವ ಯುಧಿಷ್ಠಿರನ ಅಸಾಮಾನ್ಯ ಗುಣಕ್ಕೆ ದ್ರೋಣರು ಮನಸೋತು ಆಲಿಂಗಿಸಿಕೊಂಡರು.

ಸಜ್ಜನರು ಮತ್ತು ದುರ್ಜನರ ನಡುವೆ ಇರುವ ವ್ಯತ್ಯಾಸವನ್ನು ಈ ನಿದರ್ಶನ ಹೇಳುತ್ತದೆ. ಯುಧಿಷ್ಠಿರ ಮತ್ತು ದುರ್ಯೋಧನ ಇಬ್ಬರಿಗೂ ಒಬ್ಬರೇ ಗುರುಗಳು. ಒಳಿತಿನ ವಿದ್ಯೆಯನ್ನೇ ಅವರು ಇಬ್ಬರಿಗೂ ಕಲಿಸಿದ್ದರು. ಆದರೆ ಯುಧಿಷ್ಠಿರನದು, ಎಲ್ಲರಲ್ಲೂ ಉತ್ತಮವಾದುದನ್ನು ಆರಿಸಿಕೊಂಡು ಅದನ್ನು ಮುಕ್ತವಾಗಿ ಕೊಂಡಾಡುತ್ತ ಒಂದಾಗುವ ಸಮರಸಭಾವ. ಈ ಕಾರಣದಿಂದಾಗಿಯೇ ‘ಕುವರಂ ಕುಲಭೂಷಣಂ’ ಎಂಬ ಮಾತಿಗೆ ಆತ ಅನ್ವರ್ಥನಾದ. ಆದರೆ ಇದಕ್ಕೆ ವ್ಯತಿರಿಕ್ತ ಸ್ವಭಾವದವನು ದುರ್ಯೋಧನ. ಹೀಗಾಗಿ ‘ಕುಪುತ್ರಃ ಕುಲನಾಶಕಃ’ ಎಂಬ ಹಣೆಪಟ್ಟಿ ಹೊತ್ತು ತನ್ನ ಕುಲಕ್ಕೆ ಅಪಖ್ಯಾತಿ ತಂದ! ಮತ್ತೊಬ್ಬರಲ್ಲಿರುವ ಉತ್ತಮಿಕೆಯನ್ನು ಗ್ರಹಿಸುವ ಧರ್ಮರಾಜನ ನಡೆ ನಮಗೆ ಆದರ್ಶವಾಗಲಿ, ದುರ್ಯೋಧನನ ವರ್ತನೆ ನಮಗೆ ಎಚ್ಚರಿಕೆಯ ಪಾಠವಾಗಲಿ.

(ಲೇಖಕರು ಅಧ್ಯಾಪಕರು)

Leave a Reply

Your email address will not be published. Required fields are marked *