ಒಂದು ತಿರುವಿನ ನಿರೀಕ್ಷೆಯಲ್ಲಿ…

|ಡಾ. ಸುನೀಲ್ ಕೆ.ಎಸ್.

ಹಲವು ಆಯಾಮಗಳ ಬದುಕಿಗೆ ನಕ್ಷೆಯನ್ನು ತಯಾರಿಸುವ ಬುದ್ಧಿವಂತಿಕೆ ಮರೀಚಿಕೆಯಾಗಿಯೇ ಉಳಿದಿರುವುದು ಮನುಷ್ಯನ ಇತಿಮಿತಿಗೆ ಸಾಕ್ಷಿಯಾಗಿದೆ. ‘ಯೋಜಕಗಳೆನಿಸಿದ ಇಂತು, ಇಷ್ಟು ಮೊದಲಾದವುಗಳು ಪದಾರ್ಥಗಳಿಗನ್ವಯಿಸಬಹುದೇನೋ, ಬದುಕಿಗಲ್ಲ’ ಎಂದು ಹಿರಿಯರು ಹೇಳಿರುವರು. ಪ್ರತಿಕ್ಷಣವೂ ಒಂದೊಂದು ತಿರುವಿನ ಸುತ್ತ ಗಿರಕಿಹೊಡೆಸುವ ವಿಧಿ, ಬದುಕಿನೊಡನೆ ಚೆಲ್ಲಾಟವಾಡುತ್ತಿರುವಂತೆ ಕಂಡರೂ ಅವೆಲ್ಲವು ತಿದ್ದಿಕೊಳ್ಳಲು ಸಹಕಾರಿಗಳೆಂದು ಅರಿಯಬೇಕು. ಹತಾಶೆ, ಚಿಂತೆಗಳೆಲ್ಲವೂ ಉಸಿರಾಟದಂತೆ ಸಹಜಸ್ಥಿತಿಗಳೆಂದು ಭಾವಿಸಿದಾಗಲೇ ಜೀವನವನ್ನು ಮುನ್ನಡೆಸುವ ಧೈರ್ಯ ಬರುವುದು.

ತಿಳಿವಳಿಕೆಯ ತಿರುಕನೋರ್ವನ ಬದುಕು, ಬೈಗುಳ ಅವಮಾನಗಳನ್ನೇ ಕಂಡಿತ್ತು. ಅದಕ್ಕೆ ಹೊರತಾದ ಜೀವನವನ್ನೇ ಕಾಣದ ಅವನಿಗೆ ಸುಖ-ನೆಮ್ಮದಿ ಮುಂತಾದವು ಬೆರಗಿನ ಕನಸುಗಳಾಗಿದ್ದವು. ಅವನ ಬಡತನವನ್ನು ಮತ್ತಷ್ಟು ಹೆಚ್ಚಿಸಲು ವಿಧಿಯೊಮ್ಮೆ ಆತನ ಕಾಲುಗಳನ್ನು ಊನ ಮಾಡಿದ. ಶಕ್ತಿಕೇಂದ್ರವೆನಿಸಿದ್ದ ಕಾಲ್ಗಳೇ ಕೈಕೊಟ್ಟಾಗ ಇನ್ನೆಲ್ಲಿಯ ಬದುಕೆಂದು ತಿಳಿದು ಹತಾಶನಾಗಿ ದೇಗುಲವೊಂದರ ಮುಂದೆ ಕುಸಿದ. ಕೆಲವರು ಮರುಕದಿಂದ ಆತನನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು. ಕೆಲ ದಿನಗಳಲ್ಲೆ ಉಳಿದವರು ಈತನನ್ನು ತಿಳಿವಳಿಕೆಯುಳ್ಳ ಶಾಪಗ್ರಸ್ತ ತಿರುಕನೆಂದರಿತರು. ಪ್ರತಿದಿನ ದೇಗುಲಕ್ಕಾಗಮಿಸುತ್ತಿದ್ದ ಶ್ರೀಮಂತನೋರ್ವ ತಿರುಕರಿಗೆಲ್ಲ ಯಥಾಶಕ್ತಿ ಸಹಾಯ ಮಾಡುತ್ತಿದ್ದನಾದರೂ ಈತನಿಗೆ ಬಿಡಿಗಾಸನ್ನೂ ಕೊಡದೆ ಮುನ್ನಡೆಯುತ್ತಿದ್ದ. ಹತಾಶನಾಗದ ಇವನು ನಸುನಕ್ಕು ಸುಮ್ಮನಾಗುತ್ತಿದ್ದ. ಒಮ್ಮೆ ಶ್ರೀಮಂತನೇ ಕುತೂಹಲ ತಡೆಯದೆ ತಿರುಕನನ್ನು ಪ್ರಶ್ನಿಸಿದ- ‘ನಿನಗೇಕೆ ನನ್ನ ನಡಾವಳಿಯ ಬಗ್ಗೆ ಗೊಂದಲವಿಲ್ಲ? ನನ್ನ ನಡೆ ನಿನಗೆ ವಿಚಿತ್ರವೆನಿಸಲಿಲ್ಲವೇ?’ ಎಂದು. ನಸುನಕ್ಕ ತಿರುಕ ‘ಪರರನ್ನು ಬೇಡುತ್ತ ಅವಮಾನವನ್ನು ಸಹಿಸಿಕೊಂಡ ಎನಗೆ ಉಳ್ಳವರ ಮನಸ್ಥಿತಿಯೇನೆಂದು ಈಗಾಗಲೇ ಅರಿವಾಗಿದೆ’ ಎಂದ. ಅರ್ಥವಾಗದ ಶ್ರೀಮಂತ ಗೊಂದಲದಿಂದ ನೋಡುತ್ತಿರಲು ಈತ ವಿವರಿಸಿದ- ‘ಭಿಕ್ಷೆಯೆಂದು ಕೊಡುವ ಕೈಗಳು ಕರುಣೆಯೊಂದ ಹೊರತುಪಡಿಸಿ ತಿರಸ್ಕಾರ-ದರ್ಪ-ತೋರ್ಪಡಿಕೆ ಮುಂತಾದ ಇಂಗಿತದೊಂದಿಗೆ ಮುಂದಾಗುವುವು. ಸ್ವೀಕರಿಸುವ ಕೈಗಳು ಅದನ್ನು ಧರ್ಮವೆಂದರಿತು ತೃಪ್ತಿಯಿಂದ ಹರಸುವುವು. ಇದು ಪಡೆವರ ಉದಾತ್ತತೆಯೇ ಹೊರತು ಕೊಡುವವನದ್ದಲ್ಲ. ಕೊಡದಿದ್ದರೂ ನನ್ನ ಕಡೆ ಮನಮಾಡಿ ವಿಚಾರಿಸುತ್ತಿರುವೆಯೆಂದರೆ ನೀನು ಅರಿವಿನ ತಿರುಕನೆಂದು ಸಾಬೀತುಪಡಿಸಿದೆ; ಹಾಗಾಗಿ ನಿನ್ನ ಕಂಡಾಗ ಅನುಕಂಪವುಂಟಾಗಿ ಮೌನವಾಗಿ ನಿನ್ನ ಹರಸುತ್ತಿದ್ದೆ…’ ಎಂದು ಹೇಳಿ ಸುಮ್ಮನಾದ. ತನ್ನ ಸ್ಥಿತಿಯನ್ನು ಹಾಗೂ ತಿರುಕನ ಮೌನವನ್ನು ತಾಳೆಹಾಕಿದ ಸಿರಿವಂತ ಆ ಕೂಡಲೆ ಆತನನ್ನು ಸತ್ಕರಿಸಿ ಮನೆಯ ಹಾದಿ ಹಿಡಿದ.

ಭರವಸೆಯನ್ನುಕ್ಕಿಸುವ ತಿರುವಿಗೆ ವಿಚಾರವಂತಿಕೆ, ತಾಳ್ಮೆಗಳೇ ಕಾರಣವೇ ಹೊರತು ಆಗಂತುಕ ಸುಖಗಳಲ್ಲ. ಆದ್ದರಿಂದ ಆಕಸ್ಮಿಕ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವತ್ತ ಮನಮಾಡೋಣ.

(ಲೇಖಕರು ಸಂಸ್ಕೃತ ಪ್ರವಾಚಕರು ಹಾಗೂ ವಿಮರ್ಶಕರು) 

Leave a Reply

Your email address will not be published. Required fields are marked *