ಕಿರಿಯರಿಂದಲೂ ಕಲಿಯಬಹುದು!

| ಮಹಾದೇವ ಬಸರಕೋಡ

ಶಿಷ್ಯರೊಂದಿಗೆ ತೀರ್ಥಯಾತ್ರೆಗೆ ಹೊರಟ ಗುರುಗಳು ಮಾರ್ಗಮಧ್ಯದ ಊರೊಂದನ್ನು ಸಮೀಪಿಸುತ್ತಿದ್ದಂತೆ ಅಲ್ಲಿನ ಅವರ ಅನುಯಾಯಿಗಳಿಗೆ ಆ ಸುದ್ದಿ ತಿಳಿದು, ಗೌರವಾದರಗಳೊಂದಿಗೆ ಬರಮಾಡಿಕೊಂಡರು. ಯಥೋಚಿತವಾಗಿ ಸತ್ಕರಿಸಿದ್ದು ಮಾತ್ರವಲ್ಲದೆ, ತೀರ್ಥಯಾತ್ರೆ ಸಂದರ್ಭದಲ್ಲಿ ಅಗತ್ಯವೆನಿಸುವ ಆಹಾರ, ಬಟ್ಟೆ, ಹಣ ಇತ್ಯಾದಿಗಳನ್ನು ಒಂದು ದೊಡ್ಡ ಚೀಲದಲ್ಲಿ ಹಾಕಿ ಗುರುಗಳಿಗೆ ಅರ್ಪಿಸಿದರು. ‘ಇದೇನು?’ ಎಂದು ಗುರುಗಳು ಪ್ರಶ್ನಿಸಿದಾಗ, ‘ಗುರುವರ್ಯಾ, ತೀರ್ಥಯಾತ್ರೆ ವೇಳೆ ಅಗತ್ಯವಾಗುವಂಥದ್ದೆಲ್ಲವೂ ಇದರಲ್ಲಿದೆ, ಯಾವುದಕ್ಕೂ ಕೊರತೆಯಾಗಬಾರದಲ್ಲ? ನಿಮಗೆ ಇನ್ನಷ್ಟು ಹಣ ಬೇಕಾದರೆ ಸಂಕೋಚವಿಲ್ಲದೆ ಕೇಳಿ’ ಎಂದರು ಆ ಅನುಯಾಯಿಗಳು ವಿನಮ್ರರಾಗಿ. ಗುರುಗಳು ಅದರಲ್ಲಿನ ಸ್ವಲ್ಪವೇ ಆಹಾರವನ್ನು ತೆಗೆದುಕೊಂಡಾಗ, ‘ದಯವಿಟ್ಟು ಚೀಲದಲ್ಲಿರುವ ಎಲ್ಲವನ್ನೂ ತೆಗೆದುಕೊಳ್ಳಬೇಕು ಗುರುಗಳೇ, ಮುಂದೆ ಸಾಗುತ್ತ ಹೋದಂತೆ ಹೆಚ್ಚೆಚ್ಚು ಬೇಕಾಗಬಹುದು, ನಿರಾಕರಿಸಬೇಡಿ’ ಎಂದು ಅನುಯಾಯಿಗಳು ಒತ್ತಾಯಿಸಿದರು. ಆಗ ಗುರುಗಳು, ‘ಈ ಬದುಕು ತುಂಬ ಕ್ಷಣಿಕ; ನಾಳೆ ಬದುಕಿನ ಕುರಿತಾದ ಯಾವ ಭರವಸೆಯೂ ಇಲ್ಲದಿರುವಾಗ, ಹೆಚ್ಚುವರಿ ಸಂಗ್ರಹ ನಿಷ್ಪ ್ರೊಜಕವಲ್ಲವೇ?’ ಎಂದರು. ಉತ್ಸಾಹಿ ಅನುಯಾಯಿಗಳಿಗೆ ಒಂದಿಷ್ಟು ಬೇಸರವಾದರೂ, ಗುರುಗಳ ನಡೆಗೆ ತಲೆದೂಗಿದರು, ಅವರನ್ನು ಕೊಂಡಾಡಿದರು. ಇದನ್ನು ಕಂಡು ಗುರುಗಳು ಮನಸ್ಸಿನೊಳಗೇ ಹೆಮ್ಮೆಯಿಂದ ಬೀಗತೊಡಗಿದಾಗ, ಊರಿಂದ ಅವರ ಜತೆಯೇ ಬಂದಿದ್ದ ಶಿಷ್ಯನೊಬ್ಬ ಗಹಗಹಿಸಿ ನಗತೊಡಗಿದ. ಅವನ ಉದ್ಧಟತನ ಕಂಡು ಎಲ್ಲರಿಗೂ ಕೋಪಬಂದು ನಿಂದಿಸತೊಡಗಿದರು. ಅವರನ್ನೆಲ್ಲ ಸುಮ್ಮನಾಗಿಸಿದ ಗುರುಗಳು, ‘ನಿನಗೇನು ತಲೆ ಕೆಟ್ಟಿದೆಯೇ? ನನ್ನ ಶಿಷ್ಯನಾಗಿ ಇಂಥ ವರ್ತನೆ ತೋರುವುದು ಸರಿಯಲ್ಲ’ ಎಂದು ಅಸಮಾಧಾನದಿಂದ ನುಡಿದು ಅವನ ನಗುವಿಗೆ ಕಾರಣ ಕೇಳಿದರು.

ಆಗ ಆ ಶಿಷ್ಯ, ‘ಗುರುಗಳೇ ನನ್ನನ್ನು ಮನ್ನಿಸಿ. ಈ ಬದುಕು ಕ್ಷಣಿಕವೆಂದು ನೀವೇ ಹೇಳಿದಿರಿ; ಯಾವುದೇ ಕ್ಷಣದಲ್ಲಿ ಮೃತ್ಯು ನಮ್ಮನ್ನು ಸೆಳೆದೊಯ್ಯಬಲ್ಲದು ಎಂಬ ಸಂಗತಿ ತಿಳಿದಿರುವಾಗಲೂ ನಾಳೆಯವರೆಗೆ ಬದುಕಿರುತ್ತೇವೆ ಎಂಬ ನಂಬಿಕೆಯೊಂದಿಗೆ ಈ ಊರಿನ ಅನುಯಾಯಿಗಳಿಂದ ಆಹಾರ ಪದಾರ್ಥವನ್ನು ಪಡೆದಿರಲ್ಲ, ಅದಕ್ಕೆ ನಗುಬಂತು’ ಎಂದ. ಗುರುಗಳಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಪಡೆದ ಅಲ್ಪಾಹಾರವನ್ನೂ ಅನುಯಾಯಿಗಳಿಗೆ ಹಿಂದಿರುಗಿಸಿ ಮುನ್ನಡೆದರು…

ಈ ರೂಪಕದಲ್ಲಿನ ಗುರುಗಳಂತೆ, ಬದುಕಿನ ಬಹುತೇಕ ಸಂದರ್ಭಗಳಲ್ಲಿ ನಾವು ಕೂಡ ಕೆಲವರನ್ನು ಕುರಿತು ‘ಅವರು ಸಣ್ಣವರು, ಅವರಿಗೆ ನನ್ನಷ್ಟು ತಿಳಿಯದು, ನಾನು ಅವರಿಗಿಂತ ತುಂಬ ದೊಡ್ಡವನು, ಅವರಿಂದ ನಾನು ಕಲಿಯುವುದೇನಿದೆ?’ ಎಂಬ ಭ್ರಮೆಯಲ್ಲೇ ತೇಲುತ್ತಿರುತ್ತೇವೆ ಮತ್ತು ನಮ್ಮ ಸುತ್ತ ಒಂದು ಬೇಲಿ ನಿರ್ವಿುಸಿಕೊಂಡು ಸಹವರ್ತಿಗಳಿಂದ ದೂರ ಉಳಿಯುತ್ತೇವೆ. ಇದು ಕ್ರಮೇಣ ನಮ್ಮನ್ನು ಮುಜುಗರಕ್ಕೆ ದೂಡುವುದಲ್ಲದೆ ನಮ್ಮ ಹಿನ್ನಡೆಗೂ ಕಾರಣವಾಗುತ್ತದೆ. ಆದರೆ ‘ಯಾರೂ ಸಣ್ಣವರಲ್ಲ’ ಎಂಬ ಭಾವವು ಸತ್ಯದ ದರ್ಶನ ಮಾಡಿಸುವುದರ ಜತೆಗೆ ಔನ್ನತ್ಯಕ್ಕೂ ನಮ್ಮನ್ನು ಕೊಂಡೊಯ್ಯುತ್ತದೆ ಎಂಬುದನ್ನು ಮರೆಯದಿರೋಣ.

(ಲೇಖಕರು ಅಧ್ಯಾಪಕರು) 

Leave a Reply

Your email address will not be published. Required fields are marked *