More

  ಮನೋಲ್ಲಾಸ | ಆಂತರ್ಯವನ್ನು ಗುರುತಿಸೋಣ

  ಮನೋಲ್ಲಾಸ | ಆಂತರ್ಯವನ್ನು ಗುರುತಿಸೋಣ

  | ಚಿದಂಬರ ಮುನವಳ್ಳಿ
  ಸೂಫಿ ಸಂತರು ಅಧ್ಯಾತ್ಮ ವಿಚಾರಧಾರೆಯನ್ನು ತಮ್ಮ ಅರ್ಥಪೂರ್ಣ ಕಥೆಗಳ ಮೂಲಕ ಜನಸಾಮಾನ್ಯರಿಗೆ ವಿವರಿಸಿದ್ದಾರೆ. ಅಂಥದ್ದೇ ಒಂದು ಕಥೆ. ಮುಲ್ಲಾ ನಸ್ರುದ್ದೀನ್ ಒಂದು ದಿನ ಕತ್ತೆ ಮೇಲೆ ಸ್ವಲ್ಪ ಗೋಧಿಹಿಟ್ಟು, ಬೆಲ್ಲ ಹೇರಿಕೊಂಡು ಬೇರೆ ರಾಜ್ಯ ಪ್ರವೇಶಿಸುತ್ತಿರಬೇಕಾದರೆ ಸುಂಕದ ಅಧಿಕಾರಿಗಳು ತಡೆದು ನಿಲ್ಲಿಸಿ, ‘ನಿನ್ನ ಹೆಸರೇನು, ಎಲ್ಲಿಗೆ ಹೊರಟಿರುವೆ, ಏನು ಉದ್ಯೋಗ ಮಾಡುತ್ತಿ?’ ಎಂದು ಕೇಳಿದರು. ‘ನನ್ನ ಹೆಸರು ಮುಲ್ಲಾ ನಸ್ರುದ್ದೀನ್. ಪಕ್ಕದ ರಾಜ್ಯಕ್ಕೆ ಹೊರಟಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಉದ್ಯೋಗ ಕಳ್ಳಸಾಗಾಣಿಕೆ’ ಎಂದು ಹೇಳಿದ. ಅಧಿಕಾರಿಗಳು ಅವನನ್ನು ತಪಾಸಣೆಗೊಳಪಡಿಸಿ, ಜೊತೆಗೆ ಕತ್ತೆಯ ಮೇಲಿನ ಸಾಮಗ್ರಿಗಳನ್ನೂ ಕೆಳಗೆ ಇಳಿಸಿ ಕೂಲಂಕಷವಾಗಿ ನೋಡಿದರು. ಬೆಲೆ ಬಾಳುವಂಥದು ಏನೂ ಸಿಗಲಿಲ್ಲ. ಹೋಗಲು ಬಿಟ್ಟರು. ಮರುದಿನ ನಸ್ರುದ್ದೀನ ಮತ್ತೆ ಬಂದ. ಈ ಸಲ ಅವನನ್ನು ಗದರಿಸಿ, ‘ಉಡಾಫೆ ಮಾತನಾಡುತ್ತ ನಮ್ಮ ಸಮಯ ವ್ಯರ್ಥ ಮಾಡಬೇಡ. ಸರಿಯಾದ ಉತ್ತರ ಕೊಡಬೇಕು. ಸಿಕ್ಕಿ ಬಿದ್ದರೆ ದಂಡ ಮತ್ತು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎನ್ನುತ್ತ ಸಾಮಾನಿನ ಜೊತೆಗೆ ಕತ್ತೆಯ ಬಾಯಿಯಿಂದ ಹಿಡಿದು ಬಾಲದವರೆಗೆ ಪರೀಕ್ಷಿಸಿದರು. ಏನೂ ಸಿಗಲಿಲ್ಲ. ಉಪಾಯವಿಲ್ಲದೆ ಹೋಗಲು ಬಿಟ್ಟರು. ಇದು ಹೀಗೆ ನಡೆಯುತ್ತಿರಲು, ಕೆಲವು ತಿಂಗಳುಗಳಾದ ನಂತರ, ಇವನು ದಿನದಿಂದ ದಿನಕ್ಕೆ ಶ್ರೀಮಂತನಾಗುತ್ತಿರುವುದನ್ನು ಕಂಡು ಸಹಿಸಲಾರದ ಅವನ ನೆರೆಹೊರೆಯವರು ಸುಂಕದ ಅಧಿಕಾರಿಗಳಿಗೆ ಮತ್ತಷ್ಟು ಚಾಡಿ ಹೇಳಿ ಅವನ ದಂಧೆಯನ್ನು ಸರಿಯಾಗಿ ಶೋಧಿಸಿ ಪತ್ತೆ ಹಚ್ಚಲು ಹೇಳಿದರು. ಎಷ್ಟು ಪ್ರಯತ್ನಿಸಿದರೂ ಅವನ ಕಳ್ಳಸಾಗಾಣಿಕೆಯ ರಹಸ್ಯ ಯಾರಿಗೂ ತಿಳಿಯಲಿಲ್ಲ.

  ಎಷ್ಟೋ ವರ್ಷಗಳ ನಂತರ ಒಂದು ಸಲ ಪೇಟೆಯಲ್ಲಿ ಆ ಸುಂಕದ ಅಧಿಕಾರಿ ನಸ್ರುದ್ದೀನನನ್ನು ನೋಡಿದ. ಅವನ ಹತ್ತಿರ ಓಡಿ ಬಂದು, ‘ನಾನೀಗ ಸೇವೆಯಿಂದ ನಿವೃತ್ತನಾಗಿದ್ದೇನೆ. ನನ್ನಿಂದ ನಿನಗೆ ಯಾವ ತೊಂದರೆಯೂ ಇಲ್ಲ. ಕುತೂಹಲಕ್ಕಾಗಿ ಕೇಳುತ್ತಿದ್ದೇನೆ ನೀನು ಏನು ಕಳ್ಳಸಾಗಾಣಿಕೆ ಮಾಡಿ ಇಷ್ಟು ಶ್ರೀಮಂತನಾದೆ?’ ನಸ್ರುದ್ದೀನ ನಕ್ಕು ಹೇಳಿದ- ‘ಅದಕ್ಕೇನಂತೆ? ಆಗ ಕೇಳಿದ್ದರೂ ಹೇಳುತ್ತಿದ್ದೆ. ನಾನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸುತ್ತಿದ್ದುದು ಕತ್ತೆಗಳನ್ನು’ ಎಂದ. ಅಲ್ಲಿ ಅವುಗಳಿಗೆ ಸಾಕಷ್ಟು ಬೇಡಿಕೆ ಇದ್ದು ಕೈತುಂಬ ಹಣ ದೊರೆಯುತ್ತಿತ್ತು.

  ನಾವೆಲ್ಲರೂ ಮೂಲತಃ ಜ್ಞಾನರೂಪದ ಪರಮಾತ್ಮನ ಅಂಶವೇ ಆಗಿದ್ದರೂ, ಹೊಗೆಯಿಂದ ಮುಚ್ಚಿದ ಅಗ್ನಿ, ಧೂಳಿನಿಂದ ಮುಚ್ಚಿದ ಕನ್ನಡಿಯ ಹಾಗೆ ಅಜ್ಞಾನ, ಅಹಂಕಾರಗಳಿಂದಾಗಿ ನಮ್ಮ ಮನಸ್ಸನ್ನು ಆಂತರ್ಯದ ಕಡೆಗೆ ಹರಿಸದೇ ಕೇವಲ ಬಾಹ್ಯವಸ್ತುಗಳ ಕಡೆಗೆ ಕೇಂದ್ರೀಕರಿಸುತ್ತೇವೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು, ‘ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ’ ಎಂದು ಮಾರ್ವಿುಕವಾಗಿ ಹೇಳಿದ್ದಾರೆ. ಬೇರೆಯವರನ್ನು ತಿಳಿಯುವ ಮೊದಲು ನಮ್ಮನ್ನು ನಾವು ತಿಳಿದುಕೊಂಡರೆ? ‘ವಿವೇಕಶ್ಚ ನಿರ್ಮಲಂ ನಯನಂ ದ್ವಯಂ’ ಎಂಬಂತೆ ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದು ಎಷ್ಟು ಸುಲಭ ಅಲ್ಲವೇ?

  (ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts