More

    ಅಹಂಕಾರ, ಪ್ರತಿಷ್ಠೆ ದೂರವಿಡೋಣ; ಮನೋಲ್ಲಾಸ..

    ಅಹಂಕಾರ, ಪ್ರತಿಷ್ಠೆ ದೂರವಿಡೋಣ; ಮನೋಲ್ಲಾಸ..| ಶಿಲ್ಪಾ ಕುಲಕರ್ಣಿ

    ಶಾಂತಮ್ಮ ಹಳ್ಳಿಯ ಹಿರಿಯ ಮುತೆôದೆ. ವೈವಾಹಿಕ ಜೀವನಕ್ಕೆ ಐವತ್ತು ವರ್ಷ ತುಂಬಿದ ಸವಿನೆನಪಿಗೆ ಪತಿ ಶಾಂತಮ್ಮಳಿಗೆ ವಜ್ರದೋಲೆ ಮತ್ತು ಮೂಗುಬೊಟ್ಟನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಪತಿರಾಯರು ನೀಡಿದ ಈ ಉಡುಗೊರೆಯನ್ನು ಹಳ್ಳಿಯ ಜನರಿಗೆ ಜಂಭದಿಂದ ತೋರಿಸಲೇಬೇಕೆಂಬ ಆಸೆ ಶಾಂತಮ್ಮಳಿಗೆ ತೀವ್ರವಾಯಿತು. ಈಕೆ ತನ್ನ ಆಭರಣದ ಮೇಲೆ ಜನರ ದೃಷ್ಟಿಯನ್ನು ಕೇಂದ್ರೀಕರಿಸಲು ಪ್ರಯತ್ನಿಸಿದರೂ, ಯಾರೂ ಆ ಕಡೆಗೆ ದೃಷ್ಟಿ ಹಾಯಿಸಲೇ ಇಲ್ಲ.

    ಒಂದು ಮುಸ್ಸಂಜೆ ಶಾಂತಮ್ಮ ಸಮೀಪದ ದೇಗುಲಕ್ಕೆ ತೆರಳಿದಳು. ದೇವರಿಗೆ ನಮಸ್ಕರಿಸಿ, ಅರ್ಚಕರಿಂದ ತೀರ್ಥ-ಪ್ರಸಾದ ಸ್ವೀಕರಿಸುವಾಗ ಹೂವಿನ ಎಳೆಯೊಂದು ಮೂಗಿಗೆ ತಗುಲಿಕೊಂಡಿತು. ಒಂದು ಚಿಕ್ಕ ಹೂವಿನ ಎಳೆ ಮೂಗಿಗೆ ತಗುಲಿಸಿಕೊಂಡ ಆಕೆ ಗಟ್ಟಿಯಾಗಿ ಕಿರುಚಿದಳು. ತಕ್ಷಣವೇ ವೃದ್ಧ ಅರ್ಚಕರು, ‘ಏನಮ್ಮ, ಯಾಕೆ ಜೋರಾಗಿ ಕಿರುಚಿದೆ?’ ಎಂದು ಆತ್ಮೀಯತೆಯಿಂದ ಕೇಳಿದರು. ತಕ್ಷಣವೇ ಶಾಂತಮ್ಮ ‘ನನ್ನ ಹೂಸ ವಜ್ರದ ಮೂಗುತಿಗೆ ಈ ಹೂವಿನ ಎಳೆ ಸಿಕ್ಕಿಹಾಕಿಕೊಂಡಾಗ ಪ್ರಾಣ ಹೋದಂತಾಯಿತು’ ಎಂದು ವಯ್ಯಾರದಿಂದ ನುಡಿದಳು. ಇದನ್ನು ಕೇಳಿ ದೇವಸ್ಥಾನದಲ್ಲಿ ಅನೇಕ ಜನ ಸೇರಿದರು. ಶಾಂತಮ್ಮನ ಮನದಿಂಗಿತ ಅರಿತ ಅರ್ಚಕರು, ‘ಆ ವಜ್ರದ ನತ್ತಿಗೆ ನೀನು ಇಷ್ಟೊಂದು ಬಿಗಿರುವಿ, ಆ ನತ್ತಿನ ಹಿಂದಿರುವ ಮೂಗಿಗಾಗಿ, ಆ ದೇವರಲ್ಲಿ ನೀನು ಎಷ್ಟು ಕೃತಜ್ಞಳಾಗಿರಬೇಕು. ಈ ಸತ್ಯವನ್ನು ಮರೆತು ಯಾಕಮ್ಮ ಇಷ್ಟೊಂದು ಬಿಗುವಿ… ಬಿಗುವುದನ್ನು ಮರೆತು ಬಾಗುವುದನ್ನು ಅರಿತು ಕೊಳ್ಳಮ್ಮ’ ಎಂದಾಗ ಆಕೆಯ ಆಶಾಸೌಧವೇ ಕುಸಿದು ಬಿತ್ತು. ಶಾಂತಮ್ಮಳಿಗೆ ತನ್ನ ತಪ್ಪಿನ ಅರಿವಾಗಿ, ಅರ್ಚಕರಲ್ಲಿ ಕ್ಷಮೆ ಯಾಚಿಸಿ ಅಲ್ಲಿಂದ ಹೊರಟಳು.

    ಹೆಮ್ಮೆಯಾಡಲು ಬೇಡಿ | ಹೆಮ್ಮೆನೀಡಾಡುವುದು

    ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯ |

    ಎಂಬ ಪುರಂದರ ದಾಸರ ಕೀರ್ತನೆ ಮನುಷ್ಯನಲ್ಲಿನ ಅಹಂ ತಿದ್ದುವ ಮನೋಔಷಧವಾಗಿದೆ. ಅದೆಷ್ಟೋ ಬಾರಿ ನಾವು ಸಹ ಆ ದೈವಿಕಶಕ್ತಿಗೆ ಕೃತಜ್ಞರಾಗದೆ, ‘ನಾನೇ ಮಾಡಿದೆ, ನನ್ನಿಂದಲೇ ಆಯಿತು’ ಎನ್ನುವ ಹುಚ್ಚು ಜಂಭ ಪ್ರದರ್ಶಿಸುತ್ತೇವೆ. ಪರರ ಜೊತೆಗೆ ಪ್ರೀತಿಯಿಂದ ಖುಷಿಯನ್ನು ಹಂಚಿಕೊಳ್ಳದೆ, ‘ನನ್ನ ಹತ್ತಿರ ಮಾತ್ರ ಆಸ್ತಿ, ದುಡ್ಡು, ಸೌಲಭ್ಯಗಳು ಉಂಟು’ ಎಂದಾಗ ಅದು ಜಂಭವೆನಿಸುತ್ತದೆ. ಆ ಜಂಭದಲ್ಲಿ ಅವರು ಇತರರನ್ನು ಕಡಿಮೆ ಎಂದು ಭಾವಿಸುತ್ತಾರೆ, ಅವಮಾನಿಸುತ್ತಾರೆ, ಮನಸ್ಸು ನೋಯಿಸುತ್ತಾರೆ. ಆದರೆ, ಆ ಅಹಂಕಾರ ಅವರನ್ನೂ ಆಂತರ್ಯದಿಂದ ಕಲುಷಿತಗೊಳಿಸುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಆ ದೇವರಲ್ಲಿ ಶರಣಾಗಿ, ಮನುಷ್ಯ ಮನುಷ್ಯನ ಮಧ್ಯೆ ಕೃತಜ್ಞತಾ ಭಾವನೆ ಹೊಮ್ಮಬೇಕು. ಎಷ್ಟೋ ಜನರು ಮಾಡಿಸಿಕೊಂಡ ಸಹಾಯವನ್ನು ಆ ಕ್ಷಣಕ್ಕೆ ಸ್ಮರಿಸಿ, ಮುಂದೊಂದು ದಿನ ಮರೆತು, ಸಹಾಯ ಮಾಡಿದಾತ ನೆರವು ಬಯಸಿ ಬಂದಾಗ ‘ನೀನೇನು ಮಹಾ ಮಾಡಿದ್ದೆ’ ಎಂದು ಹೇಳುವ ಮೂಲಕ ಕೃತಘ್ನರಾಗುತ್ತಾರೆ. ಜಗತ್ತಿನಲ್ಲಿ ಯಾರೂ ಶಾಶ್ವತವಲ್ಲ ಎಂಬ ಮರೆತ ಸತ್ಯವನ್ನು ನೆನಪಿಸಿಕೊಂಡು, ಪ್ರತಿಷ್ಠೆಯನ್ನು ತ್ಯಜಿಸಿ ಎಲ್ಲರೊಳಗೊಂದಾಗಿ ಬದುಕಲು ಪ್ರಯತ್ನಿಸೋಣ.

    (ಲೇಖಕಿ ಇಂಜಿನಿಯರ್ ಹಾಗೂ ಹವ್ಯಾಸಿ ಬರಹಗಾರ್ತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts