More

  ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಇನ್ನಿಲ್ಲ

  ಮಂಗಳೂರು: ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ (64) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
  ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಏರ್ಲಪಾಡಿಯವರಾದ ಮನೋಹರ ಪ್ರಸಾದ್ ಮಂಗಳೂರಿನ ‘ನವಭಾರತ’ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದರು. ಬಳಿಕ ‘ಉದಯವಾಣಿ’ಯ ಮಂಗಳೂರು ವರದಿಗಾರರಾಗಿ ಸೇರಿ, ಮುಖ್ಯ ವರದಿಗಾರ, ಬ್ಯೂರೋ ಮುಖ್ಯಸ್ಥರಾಗಿ 36 ವರ್ಷ ಸೇವೆ ಸಲ್ಲಿಸಿ, ವಿಶ್ರಾಂತ ಸಹಾಯಕ ಸಂಪಾದಕರಾಗಿಯೂ ಸೇವೆ ಸಲ್ಲಿಸಿ, 2022ರಲ್ಲಿ ನಿವೃತ್ತರಾಗಿದ್ದರು.
  ಕರ್ವಾಲು ಎಲ್ಲೂರಿನ ದೇವರಾವ್-ಕಾಶಿಯಮ್ಮ ದಂಪತಿಯ ಎಂಟು ಮಕ್ಕಳ ಪೈಕಿ ಮನೋಹರ ಪ್ರಸಾದ್ ಕೊನೆಯವರು. 1959ರಲ್ಲಿ ಜನಿಸಿದ ಅವರು ಒಂದರಿಂದ ಐದನೇ ತರಗತಿವರೆಗೆ ಬೈಲೂರಿನ ನೀರೆ ಬ್ರಾಂಚ್ ಶಾಲೆಯಲ್ಲಿ ಕಲಿತರು. 6ರಿಂದ 7ನೇ ತರಗತಿವರೆಗೆ ಹೆಕ್ಕಡ್ಕ ಶ್ರೀ ಅನಂತಮತಿ ಹಿರಿಯ ಪ್ರಾಥಮಿಕ ಶಾಲೆ, ಬಳಿಕ ಬೈಲೂರು ಸರ್ಕಾರಿ ಪ್ರೌಢಶಾಲೆ, ಕಾರ್ಕಳದ ಭುವನೇಂದ್ರ ಕಾಲೇಜು, ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ಮದರ್ ತೆರೇಸಾ, ಅಮಿತಾಭ್ ಬಚ್ಚನ್, ಕೆ.ಜೆ.ಯೇಸುದಾಸ್, ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ, ಸಚಿನ್ ತೆಂಡುಲ್ಕರ್, ಐಶ್ವರ್ಯಾ ರೈ ಮೊದಲಾದ ಗಣ್ಯರನ್ನು ಸಂದರ್ಶನ ನಡೆಸಿದ ಹಿರಿಮೆ ಅವರದು. ‘ಬೊಗ್ಸಾಣೆ’ ಕೊಂಕಣಿ ಚಲನಚಿತ್ರ, ‘ಐಸ್‌ಕ್ರೀಂ’ ತುಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನ ತಾಳಮದ್ದಳೆ ಕಲಾವಿದರಾಗಿ, ಕ್ರಿಕೆಟ್ ವೀಕ್ಷಕ ವಿವರಣೆಕಾರರಾಗಿ, ರಂಗಭೂಮಿ ಕಲಾವಿದರಾಗಿಯೂ ಮಿಂಚಿದ್ದಾರೆ.
  ಮಂಗಳಾ ಫಿಲಂ ಸೊಸೈಟಿ ಸ್ಥಾಪಕ ಸದಸ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ದಕ್ಷಿಣ ಕನ್ನಡ ಟೆಲಿಕಾಂ ಸಲಹಾ ಸಮಿತಿ ಮಾಜಿ ಸದಸ್ಯ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಸಮಿತಿ ಮಾಜಿ ಸದಸ್ಯರಾಗಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅಧ್ಯಕ್ಷರಾಗಿ 10 ವರ್ಷ ಹಾಗೂ ಪ್ರೆಸ್ ಕ್ಲಬ್ ಸ್ಥಾಪಕ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮನೋಹರ ಪ್ರಸಾದ್ ಅವರ 30 ಸಣ್ಣ ಕತೆಗಳು ಪ್ರಕಟವಾಗಿವೆ. ಆಕಾಶವಾಣಿಯಲ್ಲಿ 20 ತುಳು ಕತೆಗಳು ಪ್ರಸಾರವಾಗಿವೆ. ಹಲೋ ಮಿಸ್ಟರ್ ಧೂಮಪ್ಪ, ರೈಲ್, ಬೇಲಿಬೈಲ್ ಎಂಬ ನಾಟಕಗಳನ್ನು ಅವರು ತುಳುವಿಗೆ ಅನುವಾದ ಮಾಡಿದ್ದರು. ‘ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ’ ಎಂಬ ಜೀವನ ಕಥನದ ಕನ್ನಡಾನುವಾದ ಪ್ರಕಟವಾಗಿದೆ. ‘ಬಂಡಿ’ ಎಂಬ ಕಾದಂಬರಿಗೆ ಪಣಿಯಾಡಿ ಪುರಸ್ಕಾರ ದೊರೆತಿದೆ. ‘ಬದ್‌ಕ್‌ದ ಬಂಡಿ’ ಎಂಬ ತುಳು ಕಥಾಸಂಕಲನ ಪ್ರಕಟವಾಗಿದೆ. ಅವರ ಸಾಧನೆಯನ್ನು ಪರಿಗಣಿಸಿ 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ-ಪುರಸ್ಕಾರ, ಸನ್ಮಾನಗಳು ಸಂದಿವೆ.

  ಗಣ್ಯರಿಂದ ಅಂತಿಮ ನಮನ
  ಮನೋಹರ ಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕದ್ರಿಯ ಲೋಬೋ ಲೇನ್‌ನಲ್ಲಿರುವ ಗೃಹದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಸಭಾಂಗಣಲ್ಲಿರಿಸಿ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಕದ್ರಿಯ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
  ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ವಿನಯಕುಮಾರ್ ಸೊರಕೆ, ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಮೊದೀನ್ ಬಾವ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಗಣ್ಯರಾದ ಬಿ.ಎ.ವಿವೇಕ ರೈ, ಡಾ.ಎಂ.ಮೋಹನ ಆಳ್ವ, ಪ್ರೊ.ನರೇಂದ್ರ ಎಲ್.ನಾಯಕ್, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ದೇವದಾಸ ಕಾಪಿಕಾಡ್, ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಮತಾ ಗಟ್ಟಿ, ಎಚ್.ಎಸ್.ಸಾಯಿರಾಂ ಮೊದಲಾದವರು ಮೃತರ ಅಂತಿಮ ದರ್ಶನ ಪಡೆದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts