ಮನಮೋಹನ್​ ಸಿಂಗ್​ ಆಕ್ಸಿಡೆಂಟಲ್​ ಪಿಎಂ ಅಲ್ಲ, ಯಶಸ್ವಿ ಪಿಎಂ: ಶಿವಸೇನೆಯ ಸಂಜಯ್​ರಾವತ್​

ಮುಂಬೈ: ಮಾಜಿ ಪ್ರಧಾನಿ ಡಾ.ಮನ​ಮೋಹನ್​ ಸಿಂಗ್​ ಕುರಿತ ಚಿತ್ರದ ಬಗ್ಗೆ ಭಾರಿ ವಿವಾದವಾಗುತ್ತಿರುವ ಬೆನ್ನಲ್ಲೇ ಶುಕ್ರವಾರ ಶಿವಸೇನೆಯ ನಾಯಕ ಸಂಜಯ್​ ರಾವತ್​ ಅವರು ಮನಮೋಹನ್​ ಸಿಂಗ್​ ಪರ ಬ್ಯಾಟ್​ ಬೀಸಿದ್ದಾರೆ.

“ಮನಮೋಹನ್​ ಸಿಂಗ್​ ಅವರು ಆಕ್ಸಿಡೆಂಟಲ್​ ಪ್ರಧಾನಿ ಅಲ್ಲ. ಅವರು ಯಶಸ್ವಿ ಪ್ರಧಾನಿ” ಎಂದು ಪ್ರತಿಕ್ರಿಯಿಸಿದ್ದಾರೆ.

“ಒಬ್ಬ ಪ್ರಧಾನಿ ದೇಶವನ್ನು 10 ವರ್ಷ ಆಡಳಿತ ನಡೆಸಿದ್ದಾರೆ ಎಂದರೆ ಅವರನ್ನು ಗೌರವಿಸಿ. ನನಗೆ ಎಂದೂ ಅವರು ಆಕ್ಸಿಡೆಂಟಲ್​ ಪ್ರಧಾನಿಯ ಹಾಗೆ ಕಂಡಿಲ್ಲ. ನರಸಿಂಹ ರಾವ್​ ನಂತರ ಭಾರತ ಕಂಡ ಯಶಸ್ವಿ ಪ್ರಧಾನಿಯೆಂದರೆ ಅದು ಮನಮೋಹನ್​ ಸಿಂಗ್​ ಅವರು” ಎಂದು ತಿಳಿಸಿದ್ದಾರೆ.

ಅನುಪಮ್​ ಖೇರ್​ ಅಭಿನಯದ ‘ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್’ ಚಿತ್ರದ ಟ್ರೈಲರ್​ ಬಿಡುಗಡೆಯಾದಾಗಿನಿಂದ ಕಾಂಗ್ರೆಸ್​ ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಈಗ ಎನ್​ಡಿಎ ಒಕ್ಕೂಟದಲ್ಲಿ ಬಿಜೆಪಿ ಜತೆ ಮೈತ್ರಿಯಲ್ಲಿರುವ ಶಿವಸೇನೆಯ ನಾಯಕರೇ ಮನಮೋಹನ್​ ಸಿಂಗ್​ ಅವರನ್ನು ಆಕ್ಸಿಡೆಂಟಲ್​ ಪ್ರಧಾನಿ ಎಂಬುದನ್ನು ಅಲ್ಲಗಳೆದಿದ್ದಾರೆ.

ಈ ಚಿತ್ರದ ಕುರಿತು ಮಹಾರಾಷ್ಟ್ರದ ಯುವ ಕಾಂಗ್ರೆಸ್​ ತಕರಾರು ಎತ್ತಿದ್ದು, ಸತ್ಯಾಸತ್ಯತೆಯನ್ನು ಪರಿಶೀಲಿಸಲು ಚಿತ್ರ ಬಿಡುಗಡೆಗೂ ಮುಂಚೆ ವಿಶೇಷ ಪ್ರದರ್ಶನ ಆಯೋಜಿಸಬೇಕು ಎಂದು ಬೇಡಿಕೆ ಇಟ್ಟಿದೆ.

“ಒಂದೇ ಕುಟುಂಬ 10 ವರ್ಷ ದೇಶವನ್ನು ಹೇಗೆ ತನ್ನ ಮುಷ್ಠಿಯಲ್ಲಿಟ್ಟುಕೊಂಡಿತ್ತು ಎಂಬ ಕಥಾವಸ್ತು”ವನ್ನು ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​ ಹೊಂದಿದೆ ಎಂದು ಇತ್ತೀಚೆಗೆ ಬಿಜೆಪಿ ಟ್ವೀಟ್​ ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆದಿತ್ತು.

ವಿವಾದದಿಂದ ಕೂಡಿರುವ ಈ ಚಿತ್ರ ಜ.11ರಂದು ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. (ಏಜೆನ್ಸೀಸ್)