VIDEO| ವಿವಾದಿತ ಮಂಕಡಿಂಗ್​ಗೆ ಹಳ್ಳಿ ಬಾಲಕರಿಂದ ಪರಿಹಾರ: ಈ ರೀತಿ ಮಾಡಿದ್ರೆ ಸಮಸ್ಯೆಯೇ ಉದ್ಭವಿಸುವುದಿಲ್ಲವಂತೆ

ನವದೆಹಲಿ: ವಿವಾದಿತ ಮಂಕಡಿಂಗ್​ ಪ್ರಕರಣ ಐಪಿಎಲ್​ನಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದ ನಂತರ ಕ್ರಿಕೆಟ್ ಭ್ರಾತೃತ್ವದಲ್ಲಿ ಸಣ್ಣ ಪ್ರಮಾಣದ ಬಿರುಕು ಉಂಟಾಗಿತ್ತು. ಮಂಕಂಡಿಗ್​ ಮಾಡಿದ ಕಿಂಗ್ಸ್​ ಇಲೆವೆನ್​ ಪಂಜಾಬ್​ ನಾಯಕ ಅಶ್ವಿನ್​ ನಡೆಯನ್ನು ಕೆಲವರು ಟೀಕಿಸಿದ್ದರು. ಅದೇ ರೀತಿ ಕೆಲವರು ಸರಿ ಎಂದಿದ್ದರು. ಈಗ ಮಂಕಡಿಂಗ್​ ಪ್ರಕರಣ ನಿವಾರಿಸುವ ಸಲಹೆಯೊಂದನ್ನು ಹಳ್ಳಿ ಬಾಲಕರು ಹೊತ್ತು ತಂದಿದ್ದು, ಈ ಸಂಬಂಧ ವಿಡಿಯೋ ವೈರಲ್​ ಆಗಿದೆ.

ಗ್ರೇ ನಿಕೋಲ್​ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್​ ಆಗಿದ್ದು, ವಿಡಿಯೋದಲ್ಲಿ ನಾನ್​ ಸ್ಟ್ರೈಕರ್​ ವಿಭಾಗದಲ್ಲಿ ನಿಂತಿರುವ ಆಟಗಾರ ಒಂದು ದೊಡ್ಡ ಕೋಲಿನ ಸಹಾಯದಿಂದ ರನ್​ ಕದಿಯುತ್ತಿದ್ದಾನೆ. ಈ ಮಾದರಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಳವಡಿಸಿಕೊಂಡರೆ ಮಂಕಡಿಂಗ್​ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಟ್ವಿಟರ್​​ನಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ. ಇದಕ್ಕೆ ನೆಟ್ಟಿಗರು ಸಹ ಬೆಂಬಲ ಸೂಚಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಕುತೂಹಲವಾಗಿದೆ.

ಘಟನೆ ಹಿನ್ನೆಲೆ
ಈ ಹಿಂದಿನ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ತಂಡ ಮೊದಲು ಬ್ಯಾಟ್​ ಮಾಡಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 184ರನ್​ ಕಲೆಹಾಕಿತ್ತು. ಇದನ್ನು ಬೆನ್ನತ್ತಿದ್ದ ರಾಜಸ್ಥಾನ ತಂಡ ಉತ್ತಮ ಆರಂಭವನ್ನೇ ಕಂಡಿತ್ತು. ಬಿರುಸಿನ ಆಟವಾಡುತ್ತಿದ್ದ ಜಾಸ್​​ ಬಟ್ಲರ್​ (69 ರನ್, 43 ಎಸೆತ, 10 ಬೌಂಡರಿ, 2 ಸಿಕ್ಸರ್) ಪಂಜಾಬ್ ತಂಡದಿಂದ ಗೆಲುವನ್ನು ಕಸಿದುಕೊಳ್ಳುತ್ತಿದ್ದ ಹಂತದಲ್ಲಿ ಆರ್.ಅಶ್ವಿನ್ ಮಾಡಿದ ಐಪಿಎಲ್ ಇತಿಹಾಸದ ಮೊಟ್ಟಮೊದಲ ವಿವಾದಿತ ಮಂಕಡಿಂಗ್ ರನೌಟ್ ತಂಡದ ಗೆಲುವಿನ ಟರ್ನಿಂಗ್ ಪಾಯಿಂಟ್ ಎನಿಸಿತ್ತು.

ಮಂಕಡಿಂಗ್ ರನೌಟ್ ಅಂದರೆ ಏನು?
ಬೌಲರ್ ಚೆಂಡು ಎಸೆಯುವ ಮುನ್ನವೇ, ನಾನ್​ಸ್ಟ್ರೈಕರ್​ಎಂಡ್​ನಲ್ಲಿದ್ದ ಬ್ಯಾಟ್ಸ್​ಮನ್ ಕ್ರೀಸ್ ಬಿಟ್ಟಾಗ, ಬೌಲರ್ ಚೆಂಡನ್ನು ಎಸೆಯದೇ ಬೇಲ್ಸ್​ಅನ್ನು ಎಗರಿಸಿ ಔಟ್​ಗೆ ಅಪೀಲ್ ಮಾಡುವುದನ್ನು ಮಂಕಡಿಂಗ್ ಎನ್ನಲಾಗುತ್ತದೆ. ಎಂಸಿಸಿಯ ಕ್ರಿಕೆಟ್ ನಿಯಮದಲ್ಲೂ ಮಂಕಡಿಂಗ್ ಔಟ್ ಮಾನ್ಯತೆ ಪಡೆದಿದೆ.

ಅಶ್ವಿನ್ ವಿರುದ್ಧ​ ಟ್ವಿಟರ್​ನಲ್ಲಿ ಆಕ್ರೋಶ
ಅಶ್ವಿನ್​ ನಡೆಯನ್ನು ವಂಚನೆ ಎಂದು ಕರೆಯಲಾಗಿತ್ತು. ಕ್ರೀಸ್​ ಬಿಡುವ ಮುನ್ನ ಒಂದು ಬಾರಿ ಅಶ್ವಿನ್​ ಎಚ್ಚರಿಕೆ ನೀಡಬೇಕಾಗಿತ್ತು. ಆದರೆ, ಹಾಗೆ ಮಾಡದೇ ಮಂಕಡಿಂಗ್​ ಮಾಡಿದ್ದು ಸರಿಯಲ್ಲ. ಇದು ಗೇಮ್​ ಸ್ಟಿರಿಟ್​ ಅಲ್ಲ. ಬಿಸಿಸಿಐ ಕೂಡ ಇದನ್ನು ಔಟ್​ ಎಂದು ನಿರ್ಣಯಿಸಿದ್ದು ಐಪಿಎಲ್​ ದೃಷ್ಟಿಯಿಂದ ಸರಿಯಲ್ಲ. ಈ ಬಗ್ಗೆ ಅಶ್ವಿನ್​ ಪಶ್ಚಾತಾಪ ಪಡಬೇಕಾಗುತ್ತದೆ ಎಂದೆಲ್ಲಾ ಟ್ವೀಟ್​ನಲ್ಲಿ ಹಿರಿಯ ಆಟಗಾರರು ಹಾಗೂ ಕ್ರೀಡಾಭಿಮಾನಿಗಳು ಕಿಡಿಕಾರಿದ್ದರು.

ಅಶ್ವಿನ್​ ಹೇಳಿದ್ದೇನು?
ಇದು ಬಹಳ ಸಹಜವಾದ ಘಟನೆ. ಅದು ಪೂರ್ವ ನಿರ್ಧಾರಿತ ಯೋಜನೆಯಲ್ಲ. ಆಟದ ನಿಯಮದಲ್ಲಿ ಮಂಕಡಿಂಗ್​ ಬಗ್ಗೆ ಉಲ್ಲೇಖವಿದೆ ಎಂದು ತಿಳಿಸಿದ್ದರು. ಇದೇ ವೇಳೆ ಗೇಮ್​ ಸ್ಪಿರಿಟ್​ ಬಗ್ಗೆ ಮಾತನಾಡಿರುವ ಅಶ್ವಿನ್​ ಆಟದ ನಿಯಮದಲ್ಲೇ ಇರುವಾಗ ಗೇಮ್​ ಸ್ಪಿರಿಟ್​ಗೆ​ ಅರ್ಥ ಎಲ್ಲಿ ಬರುತ್ತದೆ ಎಂದು ನನಗೆ ಗೊತ್ತಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದರು. (ಏಜೆನ್ಸೀಸ್​)