ವಿಟ್ಲ: ಮಕ್ಕಳಿಗೆ ಸಂಸ್ಕಾರ ಆಚಾರ ವಿಚಾರಗಳನ್ನು ನೀಡಿದಾಗ ಜೀವನದಲ್ಲಿ ಆತ್ಮವಿಶ್ವಾಸ, ಸನ್ನಡತೆ ಬರುತ್ತದೆ. ದೇವರ ಶಕ್ತಿಯೆದುರು ನಾವೆಲ್ಲರೂ ತೃಣ ಸಮಾನರಾಗಿದ್ದು, ಜೀವನದ ಕೊನೆಯ ಕಾಲವನ್ನು ಸೇವೆಯಲ್ಲಿ ಕಳೆಯಬೇಕು. ವಿರಕ್ತಿ, ತ್ಯಾಗ ಭಾವನೆಯಿದ್ದಾಗ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಭಾನುವಾರ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪದ ಅಂಗವಾಗಿ ೪೮ ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ, ಜಯಲಕ್ಷ್ಮೀಯಮ್ಮ ಬೆಂಗಳೂರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶ್ರೀ ಸತ್ಯಸಾಯಿ ಸದ್ಭಾವನಾ ಸದ್ಭಕ್ತ ಸಮಾವೇಶ ರಾಜ್ಯ ಸಮ್ಮೇಳನ ೨೦೨೪ರ ಮಾಹಿತಿ ಪತ್ರ ಅನಾವರಣ ಮಾಡಲಾಯಿತು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಪೆರ್ನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ಪೆರ್ನೆ, ಮಾಣಿಲ ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಶ್ರೀಧಾಮ ಮಿತ್ರ ವೃಂದದ ಅಧ್ಯಕ್ಷ ಬಾಲಕೃಷ್ಣ ರೈ ಕೆಳಗಿನಮನೆ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಪ್ರಶಾಂತಿ ಸದ್ಭಾವನ ಟ್ರಸ್ಟ್‌ನ ಎಂ. ಮಧುಸೂಧನ ನಾಯಕ್ ಸ್ವಾಗತಿಸಿದರು. ಮಾಣಿಲ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಲತಾ ಪ್ರಾಸ್ತಾವನೆಗೈದರು. ಮಾಣಿಲ ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸುಣ್ಣಂಬಳ ವಂದಿಸಿದರು. ನಳಿನಿ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.
ಸದ್ಭಾವನಾ ಸದ್ಭಕ್ತ ಸಮಾವೇಶ
ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ, ಪುತ್ತೂರು ಪ್ರಶಾಂತಿ ಸದ್ಭಾವನ ಟ್ರಸ್ಟ್, ಬೆಂಗಳೂರು ಶ್ರೀ ಸತ್ಯಸಾಯಿ ಪಾದುಕಾ ಪೂಜಾ ಸಮಿತಿ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ಸದ್ಭಾವನಾ ಸದ್ಭಕ್ತ ಸಮಾವೇಶ ರಾಜ್ಯ ಸಮ್ಮೇಳನ ನ.೨೧, ೨೨, ೨೩ರಂದು ಮಾಣಿಲ ಶ್ರೀಧಾಮದಲ್ಲಿ ನಡೆಯಲಿದೆ. ನ.೨೨ರಂದು ಸಾಮೂಹಿಕ ಶ್ರೀದುರ್ಗಾ ಚಂಡಿಕಾ ಹೋಮ, ನ.೨೩ರಂದು ಶ್ರೀ ಸತ್ಯ ಸಾಯಿ ೯೯ನೇ ಜನ್ಮ ದಿನದ ಅಂಗವಾಗಿ ೯೯ದಂಪತಿಗಳಿಂದ ಶ್ರೀ ಸತ್ಯ ಸಾಯಿ ಪಾದುಕಾ ಪೂಜೆ ನಡೆಯಲಿದೆ.