ಮಾವು ಇಳುವರಿ ಮತ್ತೆ ಕುಸಿತ?

| ಅಭಯ್ ಮನಗೂಳಿ ಬೆಂಗಳೂರು

ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನ ಮಾವು ಬೆಳೆಗಾರರ ಆತಂಕಕ್ಕೆ ಕಾರಣವಾಗಿದ್ದು, ಈ ಬಾರಿಯೂ ರಾಜ್ಯದ ಒಟ್ಟು ಇಳುವರಿಯಲ್ಲಿ ಕುಸಿತ ಕಂಡುಬರುವ ಸೂಚನೆಯಿದೆ. 8 ಲಕ್ಷ ಮೆಟ್ರಿಕ್ ಟನ್ ಮಾವು ಮಾತ್ರ ಬೆಳೆಗಾರರ ಕೈಸೇರುವ ಸಾಧ್ಯತೆಯಿದೆ.

ಡಿಸೆಂಬರ್-ಜನವರಿ ವೇಳೆಗೆ ಹೂವು ಬಿಟ್ಟ ಕಡೆಗಳಲ್ಲಿ ಉತ್ತಮ ಫಸಲು ನಿರೀಕ್ಷಿಸಲಾಗಿದ್ದು, ನಂತರದಲ್ಲಿ ಹೂವು ಬಿಟ್ಟ ಕಡೆಗಳಲ್ಲಿ ಬೆಳೆಗಾರರಿಗೆ ಆತಂಕ ಶುರುವಾಗಿದೆ. ತಾಪಮಾನದಲ್ಲಿ ದಿಢೀರ್ ಏರಿಕೆ ಕಂಡುಬಂದಿರುವುದರಿಂದ ಹೂವುಗಳು ಉದುರುತ್ತಿವೆ. ಎಳ್ಳಷ್ಟೂ ತೇವಾಂಶವಿಲ್ಲದ ಕಾರಣ ಹಣ್ಣಿಗೆ ಅಗತ್ಯವಾಗುವ ಪೌಷ್ಟಿಕಾಂಶ ದೊರೆಯುವುದು ಕಷ್ಟ ಎಂಬ ವಿಶ್ಲೇಷಣೆ ತಜ್ಞರದ್ದು. ತಾಪಮಾನ ಹೆಚ್ಚಳದಿಂದ ಮಾವು ಬೆಳೆಗೆ ತೊಂದರೆಯಾಗುತ್ತಿರುವ ಹಿನ್ನೆಲೆ

ಯಲ್ಲಿ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮಾ.15ರಂದು ರೈತರ ಸಭೆ ನಡೆಸುತ್ತಿದೆ. ಬೆಳೆಯ ಸ್ಥಿತಿಗತಿ, ಮಾರುಕಟ್ಟೆ ಕುರಿತು ರ್ಚಚಿಸ ಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ಕೊರತೆಯಿಂದ ಸಂಕಷ್ಟ: 2017ರ ಅಂತ್ಯ ದಿಂದ ಅಕಾಲಿಕ ಮಳೆ ಸುರಿದಿದ್ದರಿಂದ 2018ರ ಮಾವು ಋತುಮಾನ ಬೆಳೆಗಾರರ ಪಾಲಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಮಾವಿನ ಋತುಮಾನದ ಸಂದರ್ಭದಲ್ಲಿಯೇ ಕೇರಳದಲ್ಲಿ ನಿಫಾ ವೈರಸ್ ಹರಡಿದ್ದರಿಂದ ಇತಿಹಾಸದಲ್ಲಿಯೇ ಅತ್ಯಂತ ಸಂಕಷ್ಟದ ವರ್ಷವನ್ನು ಮಾವು ಬೆಳೆಗಾರರು ಅನುಭವಿಸಿದ್ದರು. 7 ವರ್ಷಕ್ಕೊಮ್ಮೆ ಬರುವ ಆಫ್ ಸೀಸನ್ ಕೂಡ 2018ರಲ್ಲಿ ಉಂಟಾಗಿದ್ದರಿಂದ ಕಳೆದ ಋತುಮಾನ ಸಿಹಿಗಿಂತ ಹೆಚ್ಚು ಕಹಿಯಾಗಿ ಪರಿಣಮಿಸಿತ್ತು. 2019ರ ಋತುಮಾನಕ್ಕೆ ಪೂರಕ ವಾಗಿ ವಾತಾವರಣವಿದೆ ಎಂದು ಅಂದಾಜಿಸಲಾಗಿತ್ತಾದರೂ ಹೆಚ್ಚುತ್ತಿ ರುವ ತಾಪಮಾನ ರೈತರನ್ನು

ಚಿಂತೆಗೆ ದೂಡಿದೆ.

ಕಳೆದ ಮಳೆಗಾಲದಲ್ಲಿ ಉತ್ತಮ ಮಳೆ ಬಿದ್ದಿದ್ದರೆ ಈ ಹಂಗಾಮು ಬೆಳೆಗಾರರಿಗೆ ಸಿಹಿ ನೀಡುತ್ತಿತ್ತು. ಮಳೆ ಕೊರತೆ ಜತೆಗೆ ತಾಪಮಾನ ಹೆಚ್ಚಳದಿಂದಾಗಿ ಭೂಮಿಯಲ್ಲಿ ನೀರಿನ ಅಂಶ ಸಂಪೂರ್ಣವಾಗಿ ಕಡಿಮೆಯಾಗಿರುವುದು ಹಣ್ಣುಗಳ ಬೆಳವಣಿಗೆ ಕುಸಿಯುವಂತೆ ಮಾಡಿದೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ ಎಸ್.ವಿ. ಹಿತ್ತಲಮನಿ ವಿವರಿಸಿದ್ದಾರೆ.

ಬಾದಾಮಿ, ತೋತಾಪುರಿ ಹೆಚ್ಚು: ರಾಜ್ಯದ 2 ಲಕ್ಷ ಹೆಕ್ಟೇರ್​ನಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರತಿವರ್ಷ 10 ರಿಂದ 12 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆ ನಿರೀಕ್ಷಿಸಲಾಗುತ್ತದೆ. ಕಳೆದ ವರ್ಷ ಇಳುವರಿ ಗಣನೀಯವಾಗಿ ಇಳಿದಿತ್ತು. ಕೆಲವೆಡೆ ನಿರೀಕ್ಷಿತ ಸಂದರ್ಭದಲ್ಲಿ ಹಣ್ಣು ಬೆಳೆಗಾರರ ಕೈಸೇರದೆ ರೈತರು ಕಂಗಾಲಾಗಿದ್ದರು. ಈ ಬಾರಿ ಒಣಹವೆ ವಾತಾವರಣ ಮಾವಿಗೆ ಪೂರಕವಾಗಿ ಇದೆಯಾದರೂ ಮಣ್ಣಿನಲ್ಲಿ ತೇವಾಂಶವಿದ್ದಿದ್ದರೆ ಬೆಳೆ ಕೂಡ ನಿರೀಕ್ಷಿತ ಮಟ್ಟದಲ್ಲಿ ದೊರೆಯುತ್ತಿತ್ತು ಎಂಬುದು ತಜ್ಞರ ಅಭಿಪ್ರಾಯ. ರಾಜ್ಯದಲ್ಲಿ ಬಾದಾಮಿ ತಳಿಯನ್ನು ಹೆಚ್ಚು ಬೆಳೆಯಲಾಗುತ್ತಿದೆ. ಒಟ್ಟು ಬೆಳೆಯ ಶೇ.40 ಭಾಗ ಬಾದಾಮಿ ತಳಿಯನ್ನು ಹೊಂದಿರುವ ಅಂದಾಜಿದೆ. ಈ ಬಾರಿ ಮಾರುಕಟ್ಟೆಯಲ್ಲಿ ಬಾದಾಮಿ ಮತ್ತು ತೋತಾಪುರಿ ಹೆಚ್ಚು ಲಭ್ಯವಾಗುವ ನಿರೀಕ್ಷೆಯಿದೆ.

ಮೇಳಗಳ ಹೆಚ್ಚಳಕ್ಕೆ ಸಲಹೆ

ಪ್ರತಿ ವರ್ಷ ಬೆಂಗಳೂರಿನ ಲಾಲ್​ಬಾಗ್ ಸೇರಿ ನಾಲ್ಕಾರು ಜಿಲ್ಲೆಗಳಲ್ಲಿ ಮೇಳವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಮೇಳಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಬೆಳಗಾರರಿಗೆ ನೆರವಾಗಬೇಕೆಂದು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ರಾಮನಗರ, ಧಾರವಾಡ, ತುಮಕೂರು, ಕೊಪ್ಪಳ, ಬೆಳಗಾವಿ, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ.

ರಫ್ತಿಗೆ ಅಗತ್ಯ ತಂತ್ರಜ್ಞಾನ ಅಲಭ್ಯ

ರಾಜ್ಯದ ಮಾವಿನಹಣ್ಣನ್ನು ‘ಕರಿಸಿರಿ’ ಬ್ರಾ್ಯಂಡ್​ನಲ್ಲಿ ರಫ್ತು ಮಾಡಲಾಗುತ್ತಿದೆ. ಈ ಹಿಂದಿನಿಂದಲೇ ರಫ್ತಿಗೆ ಒತ್ತು ನೀಡಿದ್ದರೆ ಕರುನಾಡು ಮಾವು ವಿಶ್ವಖ್ಯಾತಿ ಗಳಿಸುತ್ತಿತ್ತು. ಆದರೆ, ರಾಜ್ಯದಲ್ಲಿ ಮಾವು ರಫ್ತಿಗೆ ಬೇಕಾಗುವ ತಂತ್ರಜ್ಞಾನದ ಲಭ್ಯತೆ ಇಲ್ಲದಿರುವುದು ಕಷ್ಟವಾಗಿದೆ. ಕರ್ನಾಟಕದ ಹಣ್ಣನ್ನು ಮಹಾರಾಷ್ಟ್ರದ ಮಧ್ಯವರ್ತಿಗಳು ಖರೀದಿಸಿ ಅಲ್ಲಿನ ಬ್ರಾ್ಯಂಡ್ ಮೂಲಕ ರಫ್ತು ಮಾಡುತ್ತಿರುವುದು ಕೂಡ ರಾಜ್ಯ ಸರ್ಕಾರ ಗಮನಕ್ಕೆ ಬಂದಿದೆ. ಅಷ್ಟಾಗಿಯೂ ನಿರೀಕ್ಷಿತ ಮಟ್ಟದಲ್ಲಿ ಪ್ರೋತ್ಸಾಹ ಸಿಗದಿರುವುದು ಬೆಳೆಗಾರರ ಬೇಸರಕ್ಕೆ ಕಾರಣವಾಗಿದೆ.

ತಾಪಮಾನ ಹೆಚ್ಚಳದಿಂದಾಗಿ ಮಾವು ಬೆಳೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ರ್ಚಚಿಸಲು ಮಾ.15ರಂದು ಸಭೆ ಕರೆಯಲಾಗಿದೆ. ಮಾವು ಬೆಳೆಯ ವಾಸ್ತವ ಚಿತ್ರಣದ ಕುರಿತು ಸಭೆಯಲ್ಲಿ ರ್ಚಚಿಸಲಾಗುತ್ತದೆ.

| ಡಾ. ಸಿ. ಜೆ. ನಾಗರಾಜ್ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಎಂಡಿ

ಡಿಸೆಂಬರ್- ಜನವರಿ ವೇಳೆಗೆ ಹೂವು ಬಿಟ್ಟಿರುವ ಹಣ್ಣುಗಳಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಆದರೆ, ಮಾರ್ಚ್​ನಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಕಂಡುಬರುತ್ತಿರುವುದರಿಂದ ಬೆಳೆ ತಡವಾಗಿ ಕೈ ಸೇರುವ ಆತಂಕವಿದೆ. ಇದರ ಹೊರತಾಗಿಯೂ 8 ಲಕ್ಷ ಮೆಟ್ರಿಕ್ ಟನ್ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

| ಎಸ್.ವಿ. ಹಿತ್ತಲಮನಿ ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ