ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ

ಶೃಂಗೇರಿ: ಮಾವು, ಹಲಸು, ಬೀಟೆ ಮತ್ತಿತರ ಜಾತಿಯ ಮರಗಳ ಕೊಂಬೆಗಳಲ್ಲಿ ಆಕರ್ಷಕವಾಗಿ ಗೊಂಚಲಾಗಿ ಬೆಳೆಯುವ ಸೀತಾಳೆ ದಂಡೆ ಮಳೆಗಾಲದಲ್ಲಿ ಮಲೆನಾಡಿಗೆ ಬರುವ ಅಪರೂಪದ ಅತಿಥಿ.

15 ದಿನಗಳ ಕಾಲ ಮರಗಳಲ್ಲಿ ಅರಳಿ ತನ್ನ ಆಕರ್ಷಕ ಸೌಂದರ್ಯದಿಂದ ಪ್ರಕೃತಿ ಪ್ರಿಯರ ಮನತಣಿಸುತ್ತದೆ. ಸೀತಾಮಾತೆ ತವರು ಮನೆಗೆ ಹೋಗುವ ಸಂಭ್ರಮದಲ್ಲಿ ಸೀತಾಳೆ ದಂಡೆಯ ದೊಡ್ಡ ಮಾಲೆ ಕಟ್ಟಿದ್ದಳಂತೆ. ಗಂಡನ ಮನೆಗೆ ವಾಪಸ್ ಬರುವಾಗ ಚಿಕ್ಕದಾದ ಹೂವಿನ ದಂಡೆ ಕಟ್ಟಿದಳು. ಹಾಗಾಗಿ ಮಲೆನಾಡಿನಲ್ಲಿ ದೊಡ್ಡ ಸೀತಾಳೆದಂಡೆ…ಚಿಕ್ಕ ಸೀತಾಳೆ ದಂಡೆ ಎಂಬ ಎರಡು ಪ್ರಭೇದಗಳಿವೆ.

ದಕ್ಷಿಣ ಕನ್ನಡದಲ್ಲಿ ಈ ಹೂವಿಗೆ ಮರಬಾಳೆ ಹೂವು ಎಂದು ಕರೆಯುತ್ತಾರೆ. ಆಷಾಢ ಮಾಸದಲ್ಲಿ ಬೆಳೆಯುವ ಈ ಪರಾವಲಂಬಿ ಸಸ್ಯದ ಹೂವುಗಳನ್ನು ತೆಗೆದು ಬಾಳೆಯ ನಾರಿನಲ್ಲಿ ಅಂದವಾಗಿ ಕಟ್ಟಿ ಮಹಿಳೆಯರು ಮುಡಿಗೇರಿಸುತ್ತಾರೆ.

ಸೀತಾಳೆದಂಡೆ ಆರ್ಕೆಡೇಸಿಯ ಕುಟುಂಬಕ್ಕೆ ಸೇರಿದ ಸಸ್ಯ ಪ್ರಭೇದ. ಅರ್ಕಿಡ್​ಗಳ ಬೆಳವಣಿಗೆಯಲ್ಲಿ ವೈವಿಧ್ಯತೆ ಇದೆ. ಮಳೆಗಾಲದಲ್ಲಿ ಬೆಳವಣಿಗೆ ಆರಂಭಿಸುವ ಮೊದಲ ಹಂತದಲ್ಲಿ ಹಲವು ಸಸ್ಯಗಳು ಆಕರ್ಷಕ ಹೂವುಗಳನ್ನು ಪರಿಸರದಲ್ಲಿ ಅನಾವರಣಗೊಳಿಸುತ್ತವೆ. ಅದರಲ್ಲಿ ಸೀತಾಳೆದಂಡೆ ಕೂಡ ಒಂದು. ಭಾರತದಲ್ಲಿ ಈಶಾನ್ಯ ಗಡಿ ರಾಜ್ಯ ಅರುಣಾಚಲಪ್ರದೇಶ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಈ ಅರ್ಕಿಡ್ ಸಸ್ಯಗಳ ಹೂವುಗಳು ಬಲು ಸುಂದರವಾಗಿ ಅರಳುತ್ತವೆ. ಅಲ್ಲಿನ ಸಮಾರಂಭಗಳಲ್ಲಿ ಶುಭ ಹಾರೈಸಲು ಇದನ್ನು ಬಳಸಲಾಗುತ್ತದೆ.

ಮರಗಳಲ್ಲಿ ಬಿಡುವ ಈ ಸಸ್ಯವನ್ನು ಜೋಪಾನವಾಗಿ ತೆಗೆದು ಹಲವರು ಹೂವಿನ ಕುಂಡದಲ್ಲಿ ಹಾಕಿ ಬೆಳೆಸುತ್ತಾರೆ. ನೆರಳಿನ ಆಶ್ರಯದಲ್ಲಿ ಇದ್ದರೆ ಹೂವಿನ ಅಯುಷ್ಯ ಹೆಚ್ಚು. ಹೂವಿನ ಕುಂಡಕ್ಕೆ ಮರದ ಚೆಕ್ಕೆಗಳನ್ನು ಹಾಕಿ ಸಸ್ಯವನ್ನು ನೆಟ್ಟರೆ ಸೀತಾಳೆ ದಂಡೆ ಮನೆ ಅಂಗಳದಲ್ಲಿ ಅರಳಬಹುದು.

Leave a Reply

Your email address will not be published. Required fields are marked *