More

    26 ರಿಂದ ‘ಮಾವು, ಹಲಸು ಮೇಳ

    ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಕುಪ್ಪಣ್ಣ ಪಾರ್ಕ್ ಆವರಣದಲ್ಲಿ ಮೇ 26 ರಿಂದ 28ರವರೆಗೆ ‘ಮಾವು ಮತ್ತು ಹಲಸು’ ಮೇಳ ಆಯೋಜಿಸಲಾಗಿದೆ. 3 ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ವಿವಿಧ ಸ್ವಾದದ ಮಾವು, ಹಲಸು ಮೈಸೂರಿಗರಿಗೆ ಲಭ್ಯವಾಗಲಿದೆ.

    ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಅನೇಕ ವರ್ಷಗಳಿಂದ ಮಾವು ಮತ್ತು ಹಲಸು ಮೇಳ ಏರ್ಪಡಿಸುತ್ತಿದೆ. ಮೇ 26 ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಕೆ.ಹರೀಶ್‌ಗೌಡ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಮೇಳದಲ್ಲಿ ಸಾರ್ವಜನಿಕರು ಭಾಗಿಯಾಗಬಹುದಾಗಿದೆ.

    ಪೂರ್ವಸಿದ್ಧತೆ

    ಮೇಳ ಆಯೋಜನೆಗೆ ತೋಟಗಾರಿಕೆ ಇಲಾಖೆ ನಗರದ ಕುಪ್ಪಣ್ಣ ಪಾರ್ಕ್ ಆವರಣದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿವೆ. ಪಾರ್ಕ್‌ನ ಒಂದು ಭಾಗದಲ್ಲಿ 20 ಮಳಿಗೆಗಳನ್ನು ನಿರ್ಮಿಸಲು ಎಲ್ಲ ರೀತಿಯ ತಯಾರಿ ನಡೆಯುತ್ತಿದೆ. ಮಾವು ಬೆಳೆಗಾರರು, ವರ್ತಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಾವು ಮಾಗಿಸುವ ಸಂಬಂಧ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಮಾವುಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಉತ್ಕೃಷ್ಟ ದರ್ಜೆಯ ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಗ್ರಾಹಕರಿಗೆ ದೊರೆಯುವಂತೆ ನೋಡಿಕೊಳ್ಳಲು, ಉತ್ತಮ ಬೆಲೆ ನಿಗದಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

    ವಿವಿಧ ಮಾವು, ಹಲಸಿನ ತಳಿಗಳನ್ನು ಮೇಳದಲ್ಲಿ ಪರಿಚಯಿಸಲು ತೀರ್ಮಾನಿಸಲಾಗಿದೆ. ಮಾನಕೂರ, ಆಮ್ಲೆಟ್, ಚೈತ್ರಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ(ಆಲ್ಫನ್ಸ್), ಬಾದಾಮಿ, ರಸಪುರಿ, ಮಲಗೋವ, ಮಲ್ಲಿಕಾ, ಸೇಂದೂರಾ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ದಿಲ್‌ಪಸಂದ್ ಸೇರಿ ಹಲವು ತಳಿಯ ಹಣ್ಣುಗಳು ಮೇಳದಲ್ಲಿರಲಿವೆ. ಒಂದೊಂದು ಜಾತಿಯ ಮಾವಿಗೂ ಒಂದೊಂದು ಬೆಲೆ ನಿಗದಿ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆ ಉದ್ಘಾಟನೆ ದಿನವೇ ದರ ನಿಗದಿಪಡಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts