ಮಂಗನ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಡಿ.ಸಿ.ತಮ್ಮಣ್ಣ

ಶಿವಮೊಗ್ಗ: ಮಂಗನ ಕಾಯಿಲೆ ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮಂಗನ ಕಾಯಿಲೆಯಿಂದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಸಾಗರದಲ್ಲಿ ಮಾತನಾಡಿದ ಅವರು, ಈ ರೀತಿಯ ಕಾಯಿಲೆಗಳಿಗೆ ಹಿಂದೆ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿ ಅವರೊಂದಿಗೆ ಈ ಬಗ್ಗೆ ಸಮಾಲೋಚನೆ ಮಾಡಿ ನಿರ್ಧರಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಖರ್ಚುವೆಚ್ಚಗಳನ್ನು ಸರ್ಕಾರದಿಂದ ಭರಿಸಲಾಗುತ್ತಿದೆ. ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಡಿಎಂಪಿ ತೈಲ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ಕ್ರಮಕೈಗೊಳ್ಳಲಾಗಿದೆ. ಪ್ರಸ್ತುತ 8000 ಬಾಟಲ್ ಡಿಎಂಪಿ ಲಭ್ಯವಿದ್ದು, ಹೆಚ್ಚುವರಿಯಾಗಿ 50 ಸಾವಿರ ಬಾಟಲ್ ತಕ್ಷಣ ತರಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಸಾಗರ ಆಸ್ಪತ್ರೆಗೆ ಹೆಚ್ಚುವರಿ 2 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತಿದೆ. ಶಿವಮೊಗ್ಗದ ನಾಲ್ಕು ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿವೆ. ಜಿಲ್ಲೆಯ ಕೆಲವು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ‌ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)