ರಿಪ್ಪನ್ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯ ರಾಘವೇಂದ್ರ ಚಾಟ್ಸ್ ಎದುರಿಗೆ ಸೋಮವಾರ ಸಂಜೆ ಸಿಕ್ಕಿದ್ದ ಮಾಂಗಲ್ಯ ಸರ ವಾರಸುದಾರರರಿಗೆ ಸೇರಿದೆ.
ರಾಘವೇಂದ್ರ ಚಾಟ್ಸ್ ಮಾಲೀಕ ಸತೀಶ್, ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮಾಂಗಲ್ಯ ಸರವನ್ನು ಗಮನಿಸಿ ಎತ್ತಿಕೊಂಡಿದ್ದಾರೆ. ಬಳಿಕ ಸ್ನೇಹಿತರೊಂದಿಗೆ ರ್ಚಚಿಸಿ ತಾಳಿ ಕಳೆದುಕೊಂಡವರನ್ನು ಪತ್ತೆ ಮಾಡುವ ಮಾಗೋಪಾಯ ಹುಡುಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಇದನ್ನು ಗಮನಿಸಿದ ಸಮೀಪದ ಚಂದಳ್ಳಿ ಗ್ರಾಮದ ರೋಜಾರಾಣಿ ತಾಳಿಸರ ನನ್ನದೆಂದು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಪೊಲೀಸರು ಮಾಂಗಲ್ಯ ಸರ ಕಳೆದು ಹೋದ ಬಗ್ಗೆ ಖಚಿತ ಮಾಹಿತಿ ಪಡೆದು ಸರ ತಂದೊಪ್ಪಿಸಿದ ಯುವಕನ ಸಮ್ಮುಖದಲ್ಲಿ ಮಹಿಳೆಗೆ ಹಸ್ತಾಂತರಿಸಿದರು.
ರಾಜಾರಾಣಿ ಸೋಮವಾರ ಬೆಳಗ್ಗೆ ಉದ್ಯಾವರದ ಶ್ರೀ ಮಂಜುನಾಥ ಆಯುರ್ವೆದ ಆಸ್ಪತ್ರೆಗೆ ಆರೋಗ್ಯ ತಪಾಸಣೆ ಕುಟುಂಬದೊಂದಿಗೆ ತೆರಳಿದ್ದು, ಸಂಜೆ ರಿಪ್ಪನ್ಪೇಟೆಗೆ ಮರಳಿದ್ದರು. ಈ ಸಂದರ್ಭದಲ್ಲಿ ಚಾಟ್ಸ್ ಸವಿಯಲು ಹೋದಾಗ ಕಂಕುಳಲ್ಲಿದ್ದ ಮಗು ಮಾಂಗಲ್ಯ ಸರವನ್ನು ಜಗ್ಗಿದ ಹಿನ್ನೆಲೆಯಲ್ಲಿ ಹರಿದು ಬಿದ್ದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಎಸ್ಐ ರಾಜಶೇಖರ್, ಕರಿಬಸಪ್ಪ, ಸಂತೋಷ್ ಕುಮಾರ್, ನಾಗೋಜಿರಾವ್ ಇತರರಿದ್ದರು.