ಲೈಟ್ ಫಿಶಿಂಗ್ ಮುಗಿಯದ ವಿವಾದ

ಮಂಗಳೂರು: ಪರ್ಸೀನ್ ಬೋಟ್‌ಗಳು ಕಾನೂನು ಉಲ್ಲಂಘಿಸಿ ಬೆಳಕು ಮೀನುಗಾರಿಕೆ ಮಾಡಿವೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ ಟ್ರಾಲ್‌ಬೋಟ್ ಮೀನುಗಾರರು ಅದರಲ್ಲಿರುವ ಮೀನುಗಳನ್ನು ಅನ್‌ಲೋಡ್ ಮಾಡಲು ತಡೆಯೊಡ್ಡಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಪರ್ಸೀನ್ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲಿಂಗ್ ನಿಷೇಧಿಸಿ 2017 ನ.10ರಂದು ಹೊರಡಿಸಿದ ಆದೇಶವನ್ನು ಫೆ.6ರಂದು ಹೈಕೋರ್ಟ್ ಎತ್ತಿ ಹಿಡಿದಿತ್ತು. ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲಿಂಗ್ ಮಾಡದಂತೆ ಪರ್ಸೀನ್ ಬೋಟ್ ಮೀನುಗಾರರಿಗೆ ನ್ಯಾಯಾಲಯ ಆದೇಶ ಮಾಡಿತ್ತು. ಆದರೂ ಧಕ್ಕೆಯಿಂದ 9 ದೋಣಿಗಳು ತೆರಳಿ ಲೈಟ್ ಫಿಶಿಂಗ್ ನಡೆಸಿವೆ ಎಂದು ಟ್ರಾಲ್‌ಬೋಟ್ ಮೀನುಗಾರರು ಆರೋಪಿಸಿ, ಆಕ್ಷೇಪ ವ್ಯಕ್ತಪಡಿಸಿದರು.

ಲೈಟ್ ಫಿಶಿಂಗ್ ಮಾಡಿಲ್ಲ ಎಂದು ಪರ್ಸೀನ್ ಬೋಟ್ ಮೀನುಗಾರರು ವಾದ ಮಾಡಿದರು. ಆದರೆ ಲೈಟ್ ಫಿಶಿಂಗ್ ಮಾಡಿರುವುದನ್ನು ಸಾಬೀತುಪಡಿಸಲು ಟ್ರಾಲ್‌ಬೋಟ್‌ನವರ ಬಳಿ ಯಾವುದೇ ಸಾಧನ ಇಲ್ಲ. ಅದಕ್ಕಾಗಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದರು.

ಪರ್ಸೀನ್ ಬೋಟ್‌ನಲ್ಲಿದ್ದ ದಾಖಲೆ, ಬಲೆ, ಜನರೇಟರ್, ಹರಾಜು ಹಾಕಿದ ಮೀನಿನ ವಿವರ, ಪತ್ತೆಯಾದ ಮೀನಿನ ಸ್ಯಾಂಪಲ್ ತೆಗೆದು ದಾಖಲೀಕರಿಸಿ, ಮೀನು ಅನ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಯಿತು. ತನಿಖೆಯಲ್ಲಿ ಲೈಟ್‌ಫಿಶಿಂಗ್ ಮಾಡಿರುವುದು ಸಾಬೀತಾದರೆ ಹಿಡಿದ ಮೀನಿನ ಮೌಲ್ಯದ ಐದು ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಟ್ರಾಲ್‌ಬೋಟ್ ಮೀನುಗಾರರ ಸಂಘ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.

ಟ್ರಾಲ್‌ಬೋಟ್ ಮೀನುಗಾರರ ಸಂಘ ಅಧ್ಯಕ್ಷ ನಿತಿನ್ ಕುಮಾರ್, ಪ್ರಧಾನ ಕಾರ‌್ಯದರ್ಶಿ ರಾಜೇಶ್ ಪುತ್ರನ್ ಉಳ್ಳಾಲ, ಡಿಸಿಪಿ ಹನುಂತರಾಯ, ಎಸಿಪಿ ಸುಧೀರ್ ಎಂ. ಹೆಗ್ಡೆ ಮೊದಲಾದವರಿದ್ದರು.

ಆಯುಕ್ತರಿಂದ ಎಚ್ಚರಿಕೆ: ಕಾನೂನು ಉಲ್ಲಂಘನೆ, ಶಾಂತಿಭಂಗ ಉಂಟು ಮಾಡಿರುವುದನ್ನು ಪರಿಗಣಿಸಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಮ್ಮ ಕಚೇರಿಯಲ್ಲಿ ಮೀನುಗಾರಿಕಾ ಮುಖಂಡರ ಸಭೆ ನಡೆಸಿದರು. ಸರ್ಕಾರದ ನಿಯಮದಂತೆ ಮೀನುಗಾರಿಕೆ ನಡೆಸಬೇಕು. ಈ ವಿಚಾರದಲ್ಲಿ ಯಾರಾದರೂ ಶಾಂತಿಭಂಗ ಉಂಟು ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.