ತಾರಸಿ ಮೇಲೆ ಕೃಷಿ ಸೌಂದರ್ಯ

ಭರತ್‌ರಾಜ್ ಸೊರಕೆ ಮಂಗಳೂರು

ಪುಟ್ಟ ಮನೆ. ಮನೆಸುತ್ತ ಹಸಿರು. ಟೆರೇಸ್ ಮೇಲೆ, ಅಂಗಳ ತುಂಬ ತರಕಾರಿ ಗಿಡಗಳದ್ದೇ ಪಾರಮ್ಯ.
ಇದು ನಗರದ ಕೊಟ್ಟಾರಚೌಕಿ ಸಮೀಪದ ಮಾಲಾಡಿ ಕೋರ್ಟ್ ರಸ್ತೆಯಲ್ಲಿರುವ ತ್ರಿವೇಣಿ ಭಟ್ ಅವರ ಟೆರೇಸ್ ಕೃಷಿಯ ಸೌಂದರ್ಯ.

ಕಳೆದ 10 ವರ್ಷಗಳಿಂದ ಟೆರೆಸ್ ಕೃಷಿಯಲ್ಲಿ ಸಕ್ರೀಯವಾಗಿರುವ ತ್ರಿವೇಣಿ ಅವರ ಮನೆ ಮೇಲೆ ಹೀರೆ, ಬದನೆ, ಸೌತೆ, ಟೊಮ್ಯಾಟೋ, ಬೆಂಡೆ, ಅಲಸಂಡೆ, ಹೀರೆ, ಬಸಳೆ, ಬೀನ್ಸ್, ಹಾಗಲ, ಕುಂಬಳಕಾಯಿ ಹೀಗೆ 25ಕ್ಕೂ ಅಧಿಕ ಬೆಳೆಗಳಿವೆ. ಹರಿವೆ, ಬಸಳೆ, ಪುದಿನ, ಒಂದೆಲಗ ಮೊದಲಾದ ಸೊಪ್ಪು ವೈವಿಧ್ಯಗಳಿವೆ. ಪ್ಲಾಸ್ಟಿಕ್ ಕುಂಡ, ಗೋಣಿಗಳಿಗೆ ಮಣ್ಣು ತುಂಬಿಸಿ ಪೇಟೆಯಲ್ಲೂ ಕೃಷಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ತರಕಾರಿಗಳ ನಡುವೆ ಅಲ್ಲಲ್ಲಿ ಔಷಧ ಗಿಡಗಳನ್ನು ನೆಟ್ಟಿರುವುದು ಇನ್ನೊಂದು ವಿಶೇಷ. ಅಲೆವೇರಾ, ಸಾಂಬ್ರಾಣಿ, ನೆಲನೆಲ್ಲಿ, ಲೆಮನ್‌ಗ್ರಾಸ್ ಮೊದಲಾದವುಗಳನ್ನು ಪೋಷಿಸಿದ್ದು, ನಳನಳಿಸುತ್ತಿವೆ. ತರಕಾರಿ ಮಧ್ಯೆಯೇ ಇವುಗಳನ್ನು ನೆಡುವುದರಿಂದ, ವಿಶೇಷ ಆರೈಕೆ ಬೇಕಿಲ್ಲ ಎನ್ನುವುದು ಇವರ ಮಾತು.

ಕೃಷಿಯಲ್ಲಿ ಮಾಡಿರುವ ವೈವಿಧ್ಯಮಯ ಪ್ರಯೋಗ ಗಮನ ಸೆಳೆಯುತ್ತದೆ. ಚಳಿ ಪ್ರದೇಶದಲ್ಲಿ ಬೆಳೆಯುವ ಹೂಕೋಸು, ಕ್ಯಾಬೇಜ್ ಇವರ ತೋಟದಲ್ಲಿ ಹಸಿರಾಗಿ ಆಕರ್ಷಿಸುತ್ತಿದೆ. ಬಿರುಬಿಸಿಲಿದ್ದಾಗ ಹೂಕೋಸು, ಕ್ಯಾಬೇಜ್ ಮೇಲೆ ಐಸ್‌ನೀರು ಹಾಕಿ ಇಲ್ಲಿನ ಉಷ್ಣತೆಗೆ ಸರಿಹೊಂದುವಂತೆ ಮಾಡಬಹುದು ಎನ್ನುವುದು ತ್ರಿವೇಣಿ ಅವರ ಸಲಹೆ.

ತಾನು ಕೃಷಿ ಮಾಡುವುದು ಮಾತ್ರವಲ್ಲ ಸಾಮಾಜಿಕ ಜಾಲತಾಣದ ಮೂಲಕ ತನ್ನ ಟೆರೆಸ್ ಬೆಳೆಯ ಅನುಭವಗಳನ್ನು ಹಂಚಿಕೊಂಡು ಇತರರೂ ಕೃಷಿಗೆ ಬರುವಂತೆ ಪ್ರೇರೇಪಿಸುತ್ತಾರೆ. ಇವರ ಸಾಧನೆಗೆ ತೋಟಗಾರಿಕಾ ಇಲಾಖೆಯಿಂದ ಕಳೆದ ವರ್ಷ ಪ್ರಶಸ್ತಿ ಸಂದಿದೆ.

ಅಂಗಡಿಯಿಂದ ತರಕಾರಿ ತರುವುದನ್ನು ಬಿಟ್ಟು ವರ್ಷಗಳೇ ಕಳೆಯಿತು. ದಿನದ ಖರ್ಚಿಗೆ ಸಾಕಷ್ಟು ಮನೆ ಟೆರೇಸ್‌ನಲ್ಲೇ ಸಿಗುತ್ತದೆ. ಮಿಕ್ಕಿದ್ದನ್ನು ಮನೆಗೆ ಬಂದ ಅತಿಥಿಗಳಿಗೆ ಹಂಚುತ್ತೇನೆ. ಪ್ರತಿ ಬಾರಿಯೂ ವೈವಿಧ್ಯಮಯ ಅಡುಗೆ ಮಾಡುವುದು ಟೆರೆಸ್ ಕೃಷಿಯಿಂದ ಸಾಧ್ಯವಾಗಿದೆ ಎನ್ನುವುದು ಈ ಪುಟ್ಟ ಕೃಷಿಕೆಯ ಹೆಮ್ಮೆಯ ಮಾತು.

ಸಾವಯವ ಗೊಬ್ಬರ: ಟೆರೆಸ್ ಕೃಷಿಗೆ ತ್ರಿವೇಣಿ ಭಟ್ ಬಳಸುವುದು ಸಾವಯವ ಗೊಬ್ಬರ ಮಾತ್ರ. ಹಸುವಿನ ಗೊಬ್ಬರ, ಹಿಂಡಿ ಪ್ರಮುಖ ಸಾರ. ಗಿಡಗಳಿಗೆ ರೋಗ ಬಂದರೆ ಗೋಮೂತ್ರ ಸಿಂಪಡಣೆ. ಬಸವ ಕುಣಿಸುವ ತಂಡದ ಡೇರೆ ಸಮೀಪ ಸಂಗ್ರಹವಾಗುವ ದನದ ಸೆಗಣಿಯೇ ಗೊಬ್ಬರದ ಮೂಲ.

ಬಾಟಲಿಯಲ್ಲಿ ಹನಿ ನೀರಾವರಿ: ತಾರಸಿ ಕೃಷಿಗೆ ಇವರು ಮಾಡಿರುವುದು ಬಾಟಲಿಯ ಮೂಲಕ ಹನಿ ನೀರಾವರಿ. ಹಳೇ ಬಾಟಲಿಯಲ್ಲಿ ನೀರು ತುಂಬಿಸಿ ಹನಿ ಹನಿಯಾಗಿ ಗಿಡಗಳ ಬುಡಕ್ಕೆ ಬೀಳುವಂತೆ ಮಾಡಲಾಗಿದೆ. ತಾರಸಿಯ ಬಿಸಿಲಿಗೆ ಬಾಟಲಿ ಮೂಲಕ ಹನಿಹನಿಯಾಗಿ ನೀರೊದಗಿಸಿದರೆ ಗಿಡದ ಬುಡ ತಂಪಾಗಿರುತ್ತದೆ ಮತ್ತು ನೀರು ಮಿತ ಬಳಕೆ ಮಾಡಿದಂತಾಗುತ್ತದೆ.

ನಮ್ಮ ಆಹಾರವನ್ನು ನಾವೇ ಬೆಳೆದು ಸ್ವಾವಲಂಬಿಗಳಾಗಬೇಕು. ನಮ್ಮದೇ ಅಂಗಳದಲ್ಲಿ ಬೆಳೆಯುವ ಸಾವಯವ ತರಕಾರಿಗಳ ಬಗ್ಗೆ ನಮಗೆ ವಿಶ್ವಾಸ ಮತ್ತು ಪ್ರೀತಿ ಇರುತ್ತದೆ. ಟೆರೆಸ್ ಮೇಲೆ ಕೃಷಿ ನಗರದ ಗೃಹಿಣಿಯರಿಗೆ ಒಳ್ಳೆಯ ಹವ್ಯಾಸವಾಗಿ ಬೆಳೆಯುತ್ತದೆ. ನಿರಂತರ ಚಟುವಟಿಕೆಯಿಂದ ಇರಲು ಸಹಕಾರಿ.
|ತ್ರಿವೇಣಿ ಭಟ್, ತಾರಸಿ ಕೃಷಿಕೆ