ಹೋಬಳಿ ಕೇಂದ್ರಗಳಿಗೂ ಇಂದಿರಾ ಕ್ಯಾಂಟೀನ್: ಸಚಿವ ಖಾದರ್

ಪುತ್ತೂರು: ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟಕ್ಕೂ ವಿಸ್ತರಿಸುವ ಚಿಂತನೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಶುಕ್ರವಾರ ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಬಳಿಕ ನಗರಸಭೆ ಮತ್ತು ಕೆ.ಯು.ಐ.ಡಿ.ಎಫ್.ಸಿ. ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿ ಶಿಲಾನ್ಯಾಸದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಕ್ಯಾಂಟೀನ್ ಆರಂಭಿಸುವ ಇಂಗಿತ ವ್ಯಕ್ತಪಡಿಸಿದಾಗ ಅದರ ಅಧ್ಯಯನ ಜವಾಬ್ದಾರಿ ನನಗೆ ನೀಡಲಾಗಿತ್ತು. ನಾನು ಚೆನ್ನೈಗೆ ತೆರಳಿ ಅಧ್ಯಯನ ನಡೆಸಿದ್ದೆ. ಬಳಿಕ ಒಂದಷ್ಟು ಬದಲಾವಣೆ ನಿಟ್ಟಿನಲ್ಲಿ ಆಗಿನ ಸಚಿವ ಕೆ.ಜೆ.ಜಾರ್ಜ್ ಹಾಗೂ ಬೆಂಗಳೂರಿನ ಮೇಯರ್ ಸೇರಿ ಚರ್ಚೆ ನಡೆಸಿ ಯೋಜನೆ ಸಿದ್ಧಪಡಿಸಿದ್ದೆವು ಎಂದು ಮಾಹಿತಿ ಹಂಚಿಕೊಂಡರು.
ಸರ್ಕಾರದ ಸಂಪತ್ತು ಸರ್ವರ ಪಾಲು ಎನ್ನುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಪ್ರಸನ್ನ ಕುಮಾರ್, ಎಡಿಬಿ ಗುತ್ತಿಗೆದಾರ ನಿಕೋಲೊಸ್, ಕೆ.ಯು.ಐ.ಡಿ.ಎಫ್.ಸಿ. ಎಕ್ಸಿಕ್ಯೂಟಿವ್ ಇಂಜಿನಿಯರ್ ಸೂರಜ್, ನಗರಸಭಾ ಸದಸ್ಯರಾದ ರಿಯಾಝ್, ವಿದ್ಯಾಗೌರಿ, ಪದ್ಮನಾಭ, ಶಕ್ತಿ ಸಿನ್ಹಾ, ಫೌಝಿಯಾ ಉಪಸ್ಥಿತರಿದ್ದರು.

ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು.

ಮನೆ ಲೈಸನ್ಸ್ ಪಡೆಯುವಾಗಲೇ ನೀರಿನ ಸಂಪರ್ಕಕ್ಕೂ ಅರ್ಜಿ: ನೆಕ್ಕಿಲಾಡಿಯಿಂದ ಪುತ್ತೂರು ನಗರಕ್ಕೆ 67 ಕೋಟಿ ರೂ. ಮೊತ್ತದ ಎರಡನೇ ಹಂತದ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಗೆ ಶುಕ್ರವಾರ ಶಂಕುಸ್ಥಾಪನೆ ನಡೆಸಲಾಗಿದೆ. ಕೆ.ಯು.ಐ.ಡಿ.ಎಫ್.ಸಿ. ಸಹಯೋಗದಲ್ಲಿ ನಗರಸಭೆ ವ್ಯಾಪ್ತಿಯ ಸುಮಾರು 14 ಸಾವಿರ ಮಂದಿಗೆ ನೀರು ಪೂರೈಸುವ ಎಡಿಬಿ ಯೋಜನೆ ಜಾರಿಗೊಳ್ಳುತ್ತಿದೆ. 30 ವರ್ಷದ ದೂರದೃಷ್ಟಿಯ ಯೋಜನೆಯಿದು ಎಂದು ನಗರಾಭಿವೃದ್ಧಿ ಸಚಿವ ಖಾದರ್ ಹೇಳಿದರು. ಯೋಜನೆಯನ್ನು ಪುತ್ತೂರಿಗೆ ತರುವಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಶಕುಂತಳಾ ಟಿ. ಶೆಟ್ಟಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಹಿಂದೆ ಜನರಿಗೆ ನೀರು ಪೂರೈಕೆಗೆ ಸಂಬಂಧಪಟ್ಟಂತೆ ನಿರ್ದಿಷ್ಟ ಅಥಾರಿಟಿ ಇರಲಿಲ್ಲ. ಈಗ ಸರ್ಕಾರ ಆ ವ್ಯವಸ್ಥೆ ಇದೆ. ಮುಂದೆ ಮನೆ ಕಟ್ಟಿ ಲೈಸನ್ಸ್ ಪಡೆಯುವ ಸಂದರ್ಭದಲ್ಲೇ ನೀರಿನ ಸಂಪರ್ಕಕ್ಕೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.