ಆರಂಭವಾಗದ ಬಸ್ ನಿಲ್ದಾಣ!

ಪಿ.ಬಿ.ಹರೀಶ್ ರೈ ಮಂಗಳೂರು

ಜಾಗ ಸ್ವಾಧೀನಪಡಿಸಿ ಹತ್ತು ವರ್ಷ ಕಳೆದಿದೆ. ಆ ಜಾಗದಿಂದ ಇದುವರೆಗೆ ಒಂದು ಹಿಡಿ ಮಣ್ಣು ಎತ್ತುವ ಕಾಮಗಾರಿ ಕೂಡ ನಡೆದಿಲ್ಲ. ಇದು ಮಂಗಳೂರಿನ ಬಹುನಿರೀಕ್ಷಿತ ಪಂಪ್‌ವೆಲ್ ಬಸ್ ನಿಲ್ದಾಣ ಯೋಜನೆಯ ಅವಸ್ಥೆ. ನಮ್ಮ ರಾಜಕಾರಣಿಗಳಿಗೆ ಇಂತಹ ಒಂದು ಯೋಜನೆ ಆರಂಭವಾಗಿತ್ತು ಎನ್ನುವ ನೆನಪು ಕೂಡ ಉಳಿದಿಲ್ಲ!

ಈಗ ಚುನಾವಣೆ ಬಂದಿದೆ. ಕುಂಟುತ್ತಾ ಸಾಗಿರುವ ಪಂಪ್‌ವೆಲ್ ಫ್ಲೈ ಓವರ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಅಲ್ಲೇ ಪಕ್ಕದಲ್ಲಿ ಪಾಳುಬಿದ್ದಿರುವ ಪಂಪ್‌ವೆಲ್ ಬಸ್ ನಿಲ್ದಾಣ ಬಗ್ಗೆ ಆಡಳಿತ ಪಕ್ಷ ಚಕಾರ ಎತ್ತಿಲ್ಲ. ಪ್ರತಿಪಕ್ಷ ಕೂಡಾ ಮಾತನಾಡುತ್ತಿಲ್ಲ. ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಜಾಗ ನೀಡಿದವರು ವಿನಾಕಾರಣ ತಮ್ಮ ಜಾಗವನ್ನು ಕಳಕೊಂಡಂತಾಗಿದೆ.

2009ರಲ್ಲಿ ಭೂ ಸ್ವಾಧೀನ: ಪಂಪ್‌ವೆಲ್‌ನ 20 ಎಕರೆ ಪ್ರದೇಶದಲ್ಲಿ ಖಾಸಗಿ ಇಂಟರ್ ಸಿಟಿ, ಇಂಟ್ರಾಸಿಟಿ ಬಸ್‌ಗಳಿಗೆ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶಾಪಿಂಗ್ ಸೆಂಟರ್ ಹಾಗೂ ಕಚೇರಿಗಳನ್ನು ನಿರ್ಮಿಸುವ ಸಮಗ್ರ ಟ್ರಾನ್ಸ್‌ಪೋರ್ಟೆಶನ್ ಹಬ್ ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ಯೋಜನೆ ರೂಪಿಸಿತ್ತು. ಇದಕ್ಕೆ ಸಂಬಂಧಿಸಿ 2009ರಲ್ಲಿ 7.23 ಎಕರೆ ಖಾಸಗಿ ಜಮೀನು ಸ್ವಾಧೀನಪಡಿಸಲಾಗಿತ್ತು. ಇದರ ಸುತ್ತ ಇರುವ ಸರ್ಕಾರಿ ಜಾಗದ ಪರಂಬೋಕು ಹಾಗೂ ಖಾಸಗಿ ಸ್ವಾಮ್ಯದ ಸುಮಾರು 4 ಎಕರೆ ಜಮೀನು ಕೂಡ ಇದೇ ಉದ್ದೇಶಕ್ಕಾಗಿ ಕಾದಿರಿಸಲಾಗಿತ್ತು. ಹೆಚ್ಚುವರಿಯಾಗಿ 11.59 ಎಕರೆ ಖಾಸಗಿ ಜಮೀನು ಸ್ವಾಧೀನಪಡಿಸಲು ಕೂಡಾ ನಿರ್ಣಯ ಕೈಗೊಳ್ಳಲಾಗಿತ್ತು.

ನಡೆದದ್ದು ಸಭೆ ಮಾತ್ರ: ಬಸ್ ನಿಲ್ದಾಣ ಯೋಜನೆ ಸಂಬಂಧಿಸಿ ಕಳೆದ 10 ವರ್ಷದಲ್ಲಿ ನಡೆದದ್ದು ಸಭೆಗಳು ಮಾತ್ರ. ಯಾವುದೇ ಪ್ರಗತಿಯಾಗಿರಲಿಲ್ಲ. ಬಸ್ ಟರ್ಮಿನಲ್ ನಿರ್ಮಾಣ ಕಾಮಗಾರಿಯ ಯೋಜನಾ ವರದಿ ತಯಾರಿಸಲು ಸರ್ಕಾರಿ ಸ್ವಾಮ್ಯದ ಐಡೆಕ್ ಸಂಸ್ಥೆಗೆ ವಹಿಸಿ ಕೊಡಲಾಗಿತ್ತು. ಐಡೆಕ್ ಸಲ್ಲಿಸಿದ ಯೋಜನಾ ವರದಿಯಲ್ಲಿ ಲೋಪ ಕಂಡುಬಂದ ಕಾರಣ ಈ ಜವಾಬ್ದಾರಿಯನ್ನು ಕೆಯುಐಡಿಎಫ್‌ಸಿಗೆ ವಹಿಸಲಾಗಿತ್ತು. ಈಗ ಪ್ರಶ್ನಿಸಿದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಬಸ್ ನಿಲ್ದಾಣ ನಿರ್ಮಿಸುತ್ತೇವೆ ಎನ್ನುವ ಉತ್ತರ ಅಧಿಕಾರಿಗಳು ನೀಡುತ್ತಿದ್ದಾರೆ.

ಪಿಪಿಪಿ ಮಾದರಿ: ಹಿಂದಿನ ಶಾಸಕರಾದ ಜೆ.ಆರ್.ಲೋಬೊ ಅವರು ವಿಧಾನಸಭಾ ಚುನಾವಣೆ ಸಂದರ್ಭ ಹೊರತಂದ ಸಾಧನೆಯ ಹಾದಿಯಲ್ಲಿ ಪುಸ್ತಕದಲ್ಲಿ ಪಂಪ್‌ವೆಲ್ ಬಸ್ ನಿಲ್ದಾಣ 5 ವರ್ಷದ ನನ್ನ ಪ್ರಯತ್ನದಲ್ಲಿ ಒಂದು ಹಂತಕ್ಕೆ ಬಂದು ತಲುಪಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ)ಇದನ್ನು ಅನುಷ್ಠಾನಗೊಳಿಸಲು ಟೆಂಡರ್ ಕರೆಯುವ ಪ್ರಕ್ರಿಯೆ ಮುಂದುವರಿದಿದೆ. 3 ವರ್ಷದಲ್ಲಿ ಪಂಪ್‌ವೆಲ್ ಬಸ್ ನಿಲ್ದಾಣ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಾಲುದಾರಿಕೆಯ ಮೈತ್ರಿ ಸರ್ಕಾರವಿದೆ. ಆದರೆ ಇದುವರೆಗೆ ಯಾವುದೇ ಟೆಂಡರ್ ಪ್ರಕ್ರಿಯೆ ನಡೆದಿಲ್ಲ.

ಪಂಪ್‌ವೆಲ್ ಬಸ್ ನಿಲ್ದಾಣ ಕೇವಲ ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದ ಯೋಜನೆ ಅಲ್ಲ. ಇದು ಇಡೀ ಜಿಲ್ಲೆಗೆ ಅಗತ್ಯ ಇರುವ ಯೋಜನೆ. ನಗರದ ಬಹುತೇಕ ಮುಖ್ಯ ನಗರಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದೆ. ಆದರೆ ಮಂಗಳೂರಿನ ನೆಹರು ಮೈದಾನದಲ್ಲಿ ಹಾಕಿ ಕ್ರೀಡಾಂಗಣಕ್ಕಾಗಿ ಮೀಸಲಿರಿಸಿದ ಜಾಗದಲ್ಲಿ ದಶಕಗಳಿಂದ ಖಾಸಗಿ ಬಸ್ ನಿಲ್ದಾಣ ಕಾರ್ಯಾಚರಿಸುತ್ತಿದೆ. ಪಂಪ್‌ವೆಲ್‌ನಲ್ಲಿ 10 ವರ್ಷದ ಹಿಂದೆ ಸ್ವಾಧೀನಪಡಿಸಿದ ಜಾಗದಲ್ಲಿ ಇದುವರೆಗೆ ಯಾವುದೇ ಕಾಮಗಾರಿ ನಡೆಯದಿರುವುದು ರಾಜ್ಯ ಸರ್ಕಾರದ ವೈಫಲ್ಯವನ್ನು ಸಾರುತ್ತಿದೆ.
|ಹನುಮಂತ ಕಾಮತ್, ಅಧ್ಯಕ್ಷ, ನಾಗರಿಕ ಹಿತರಕ್ಷಣಾ ಸಮಿತಿ