ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅಧಿಕಾರ ಸ್ವೀಕಾರ

ಮಂಗಳೂರು: ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಸಂದೀಪ್ ಪಾಟೀಲ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಮಧ್ಯಾಹ್ನ ಗೌರವ ವಂದನೆ ಸ್ವೀಕರಿಸಿ ಕಚೇರಿಗೆ ಆಗಮಿಸಿದ ಅವರನ್ನು ನಿರ್ಗಮನ ಕಮಿಷನರ್ ಟಿ.ಆರ್.ಸುರೇಶ್ ಹೂಗುಚ್ಛ ನೀಡಿ ಸ್ವಾಗತಿಸಿದ ಬಳಿಕ ಅಧಿಕಾರ ಹಸ್ತಾಂತರಿಸಿದರು.

ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿರುವುದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೊಂದು ಬಹಳ ಜವಾಬ್ದಾರಿ ಹುದ್ದೆಯಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸಂದೀಪ್ ಪಾಟೀಲ್ ಹೇಳಿದರು.

ಇಲ್ಲಿಯ ಕಾನೂನು ಸುವ್ಯವಸ್ಥೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿ ತಿಳಿಯಲು ಸ್ವಲ್ಪ ಸಮಯ ಬೇಕಾಗಿದೆ. ಆ ಬಳಿಕ ಇಲಾಖೆಯಲ್ಲಿ ಹಮ್ಮಿಕೊಳ್ಳುವ ಮುಂದಿನ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಡಿಸಿಪಿ ಹನುಮಂತರಾಯ, ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಉಮಾಪ್ರಶಾಂತ್, ಎಸಿಪಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಉಪಸ್ಥಿತರಿದ್ದರು.

ನಗರದಲ್ಲಿ ಶಾಂತಿ ಸುವ್ಯವಸ್ಥೆ, ಸಂಚಾರ ಸಮಸ್ಯೆ, ಮಹಿಳಾ ಸುರಕ್ಷತೆ, ಡ್ರಗ್ಸ್ ಹಾವಳಿ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಮುಂಬರುವ ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ರೂಪುರೇಷೆ ರಚಿಸಲಾಗುವುದು.
|ಸಂದೀಪ್ ಪಾಟೀಲ್, ನಗರ ಪೊಲೀಸ್ ಆಯುಕ್ತ