ಸೋಲು ಕಾಣುವಿರಿ, ಸೋತರೆ ಅದಕ್ಕೆ ಯು.ಟಿ.ಖಾದರ್ ಕಾರಣ: ಮುಜಗರಕ್ಕೀಡುಮಾಡಿದ ಪೂಜಾರಿ ಹೇಳಿಕೆ

ಮಂಗಳೂರು: ದಿನದ ಹಿಂದೆಯಷ್ಟೇ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್‌ಗೆ ಆಶೀರ್ವಾದ ಮಾಡಿ ಗೆಲ್ಲುತ್ತೀರಿ ಎಂದಿದ್ದ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ, ಇಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ‘ಅವಸರ ಮಾಡಿದ್ದಾರೆ…ಸೋಲುತ್ತಾರೆ’ ಎನ್ನುವ ಮೂಲಕ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.

ನಾಮಪತ್ರ ಸಲ್ಲಿಕೆಗೆ ಮೊದಲು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಪ್ರಾರ್ಥಿಸುವುದಕ್ಕೆ ಮಿಥುನ್ ರೈ ಹಾಗೂ ಕಾಂಗ್ರೆಸ್ ಮುಖಂಡರಾದ ಯು.ಟಿ.ಖಾದರ್ ಮತ್ತಿತರರು ಆಗಮಿಸಿದ್ದರು. ಇದೇ ವೇಳೆ ದೇವಸ್ಥಾನದ ತಮ್ಮ ಕಚೇರಿಯಲ್ಲಿದ್ದ ಪೂಜಾರಿ ಅವರನ್ನೂ ಭೇಟಿಯಾದರು. ಮೊದಲು ಮಿಥುನ್ ರೈ ಅವರಿಗೆ ಆಶೀರ್ವದಿಸಿ, ಗೆಲ್ಲುವ ಅಭ್ಯರ್ಥಿಯನ್ನು ನಿಲ್ಲಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೇರೆ ಕಡೆಗೂ ಭೇಟಿ ನೀಡುವ ಒತ್ತಡವಿದ್ದುದರಿಂದ ಈ ವೇಳೆ ಹೊರಡುವುದಕ್ಕೆ ಮಿಥುನ್ ರೈ ಮುಂದಾದಾಗ ಪೂಜಾರಿ ಸಿಟ್ಟಿಗೆದ್ದರು. ಅವಸರ ಮಾಡಿದ್ದಾರೆ, ಸೋಲ್ತಾರೆ…ಎಂದು ಸಿಡಿಮಿಡಿಗೊಂಡರು. ನಾನು ಶಾಪ ಕೊಡ್ತಾ ಇದ್ದೇನೆ, ಒಳಗೆ ಹೋಗಿ ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಕೋರಿ, ಅಷ್ಟೇ ಅಲ್ಲ, ಚರ್ಚ್, ಮಸೀದಿಗೂ ಹೋಗಿ ಕ್ಷಮೆ ಯಾಚಿಸುವಂತೆ ಪೂಜಾರಿ ಸೂಚನೆ ಕೊಟ್ಟರು.

ಆದರೆ ಯಾವುದೇ ಕಾಂಗ್ರೆಸ್ ನಾಯಕರೂ ಇದಕ್ಕೆ ಮರು ಉತ್ತರ ಕೊಡದೆ ಸಂಯಮ ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು. ಇಷ್ಟಾದರೂ ಬಳಿಕ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಪೂಜಾರಿ ಮತ್ತಷ್ಟು ಅಚ್ಚರಿಮೂಡಿಸಿದರು.

ನಳಿನ್ ಕುಮಾರ್ ಕಟೀಲ್ ನಾಮಪತ್ರ ಸಲ್ಲಿಕೆ
ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿಯಾಗಿರುವ ನಳಿನ್​ ಕುಮಾರ್​ ಕಟೀಲ್​ ಅವರು ಸೋಮವಾರ ಮಂಗಳೂರಿನ ಡಿಸಿ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು. ಈ ವೇಳೆ ಬಿಜೆಪಿಯ ಪ್ರಮುಖ ಮುಖಂಡರು ಅವರಿಗೆ ಸಾಥ್​ ನೀಡಿದರು. (ದಿಗ್ವಿಜಯ ನ್ಯೂಸ್​)