ಬಿಜೆಪಿಯ ಅಪಪ್ರಚಾರದಿಂದ ದ.ಕ.ದಲ್ಲಿ ಕಾಂಗ್ರೆಸ್​ಗೆ ಸೋಲು: ರಮನಾಥ ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯವರು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್​ ಪಕ್ಷಕ್ಕೆ ಸೋಲಾಗಿದೆ ಎಂದು ಮಾಜಿ ಸಚಿವ ರಮನಾಥ ರೈ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆ ನಂತರವೂ ಬಿಜೆಪಿ ನನ್ನ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿದೆ. ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಾಲಯದ ಹುಂಡಿಯ ಹಣ ಹೋಗುವುದನ್ನು ನಿಲ್ಲಿಸಿದರು. ಶಿಕ್ಷಣ ಇಲಾಖೆ ಬಿಸಿಯೂಟ ವ್ಯವಸ್ಥೆ ಮಾಡುವುದಾಗಿ ಹೇಳಿದರೂ ಅದನ್ನು ತೆಗೆದುಕೊಳ್ಳದೆ ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಇದೀಗ ಮತ್ತೆ ಶಿಕ್ಷಣ ‌ಇಲಾಖೆಯ ಬಿಸಿಯೂಟ ಪಡೆದಿದ್ದಾರೆ ಎಂದು ಕಿಡಿಕಾರಿದರು.

ಕೋಮು ಸಂಘರ್ಷದ ಹತ್ಯೆ
ಶರತ್ ಮಡಿವಾಳ ಹತ್ಯೆಯಲ್ಲಿ ಎಸ್​ಡಿಪಿಐನವರು ಬಂಧನವಾಗಿದ್ದರೂ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಜಿಲ್ಲೆಯಲ್ಲಿ ನಡೆದ ಐದು ಕೋಮು ಸಂಘರ್ಷದ ಹತ್ಯೆಯಲ್ಲಿ‌ ಬಿಜೆಪಿ ‌ಮತ್ತು ಎಸ್​ಡಿಪಿಐನವರು ಇದ್ದಾರೆ. ಎಸ್​ಡಿಪಿಐನವರು ಚುನಾವಣೆಯಲ್ಲಿ ನಿಲ್ಲದಿರುವುದಕ್ಕೆ ನಾನು ಜವಾಬ್ದಾರಿಯಲ್ಲ. ಅವರ ಜತೆ ಹೊಂದಾಣಿಕೆ ನಡೆದಿಲ್ಲ ಎಂದು ತಿಳಿಸಿದರು.

ಹಿಂದೊಮ್ಮೆ ಭಾರತಿ ಹತ್ಯೆಯಲ್ಲಿಯು ನನ್ನ ಹೆಸರನ್ನು ತಂದಿದ್ದರು. ಅಲ್ಲದೆ, ಈ ಹಿಂದೆ ಕಾಂಗ್ರೆಸ್​ನಲ್ಲಿದ್ದ ಹರಿಕೃಷ್ಣ ಬಂಟ್ವಾಳ ಹಾಗೂ ನನ್ನ ಹೆಸರನ್ನು ತಳಕು ಹಾಕಿದ್ದರು. ಆದರೆ, ಇದೀಗ ಬಿಜೆಪಿ ಸೇರಿರುವ ಹರಿಕೃಷ್ಣ ಬಂಟ್ವಾಳ, ಅವರೊಂದಿಗೆ ಸೇರಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಷಡ್ಯಂತ್ರ
ಇತ್ತೀಚೆಗೆ ಬಂಟ್ವಾಳದಲ್ಲಿ ತುಳು ಚಿತ್ರದ ನಟ ಸುರೇಂದ್ರ ಎಂಬಾತ ತಲ್ವಾರ್​ ಹಿಡಿದು ದಾಳಿ ಮಾಡಿದಾಗ ಆತ ರಮನಾಥ ರೈ ಬೆಂಬಲಿಗ ಎಂದು ಮಾಧ್ಯಮದಲ್ಲಿ ಅಪಪ್ರಚಾರ ನಡೆಯಿತು. ಈ ಹಿಂದೆ ಸುರೇಂದ್ರ ಬಿಜೆಪಿಯಲ್ಲಿದ್ದರು. ಇದೀಗ ಬಿಜೆಪಿ ಬಿಟ್ಟಿದ್ದಾರೆ. ಆತ ನನ್ನ ಬೆಂಬಲಿಗನಲ್ಲ. ಇದು ಕೂಡ ಬಿಜೆಪಿ ಷಡ್ಯಂತ್ರ ಎಂದು ಹೇಳಿದರು.

Leave a Reply

Your email address will not be published. Required fields are marked *