ಐಪಿಎಲ್ ಬೆಟ್ಟಿಂಗ್ ನಾಲ್ವರ ಸೆರೆ

ಮಂಗಳೂರು: ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಬಿಜೈ ನ್ಯೂ ರೋಡ್‌ನ ಅಪಾರ್ಟ್‌ಮೆಂಟ್ ಮತ್ತು ಬಿಜೈ ವಸತಿಗೃಹವೊಂದರಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಿಜೈ ನ್ಯೂರೋಡ್‌ನಲ್ಲಿರುವ ಅಪಾರ್ಟ್‌ಮೆಂಟ್ ನಿವಾಸಿ ಇರ್ವಿನ್ ಜೆರಾಲ್ಡ್ ಡಿಸೋಜ(45), ವಿಜಯಪುರ ತಾಳಿಕೋಟೆ ನಿವಾಸಿ ಇಸ್ಮಾಯಿಲ್(26), ಅಡ್ಯಾರ್ ವಳಚ್ಚಿಲ್ ನಿವಾಸಿ ಇಸ್ಮಾಯಿಲ್(65), ಬೆಳ್ತಂಗಡಿ ಕಳಂಜೆ ಪಳ್ಳಿ ನಿವಾಸಿ ಜೋಸ್ೆ(27) ಬಂಧಿತರು.

ಏ.4ರಂದು ಬಿಜೈ ನ್ಯೂ ರೋಡ್ 4ನೇ ತಿರುವು ರಸ್ತೆಯಲ್ಲಿರುವ ಅಪಾರ್ಟಮೆಂಟ್ ಫ್ಲಾೃಟ್ ನಂ.3ರಲ್ಲಿ ಇರ್ವಿನ್ ಜೆರಾಲ್ಡ್ ಡಿಸೋಜ ಎಂಬಾತ ಸ್ಪೋರ್ಟ್ಸ್ 999, ಲೋಟಸ್ ಬುಕ್ ಹಾಗೂ ಬ್ರಿರೆ ಸ್ಪೋರ್ಟ್ಸ್ ಎಂಬ ಮೊಬೈಲ್ ಆ್ಯಪ್‌ನಲ್ಲಿ ಸನ್ ರೈಸ್ ಹೈದರಾಬಾದ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಮಧ್ಯೆ ನಡೆಯುತ್ತಿದ್ದ ಐಪಿಎಲ್ ಪಂದ್ಯಕ್ಕೆ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ. ಈ ಬಗ್ಗೆ ಖಚಿತ ಲಭಿಸಿದ ಮಾಹಿತಿಯನ್ವಯ ಉರ್ವ ಠಾಣಾ ಪೊಲೀಸ್ ನಿರೀಕ್ಷಕರ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ದಂಧೆಗೆ ಉಪಯೋಗಿಸುತ್ತಿದ್ದ ಮೂರು ಮೊಬೈಲ್, ಒಂದು ಲ್ಯಾಪ್‌ಟಾಪ್, ನಗದು 1450 ಸೇರಿದಂತೆ ಒಟ್ಟು 36,450 ರೂ. ವಶಪಡಿಸಿಕೊಳ್ಳಲಾಗಿದೆ.

ವಸತಿಗೃಹದಲ್ಲಿ ದಂಧೆ: ಏ.5ರಂದು ಬಿಜೈ ಲಾಡ್ಜ್‌ನ ಕೊಠಡಿಯಲ್ಲಿ ಬಿ.ಇಸ್ಮಾಯಿಲ್, ಇಸ್ಮಾಯಿಲ್ ಮತ್ತು ಜೋಸ್ೆ ಎಂಬುವರು ಕ್ರಿಕೆಟ್ ಲೈವ್ ಬಝ್ ಮೊಬೈಲ್ ಆ್ಯಪ್‌ನಲ್ಲಿ ಕೋಲ್ಕತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ನಡೆಯುತ್ತಿದ್ದ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಯುತ್ತಿದ್ದ ಕುರಿತ ಮಾಹಿತಿ ಮೇರೆಗೆ ಉರ್ವ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ ಬೆಟ್ಟಿಂಗ್‌ನಲ್ಲಿ ತೊಡಗಿದ ಆರೋಪಿಗಳನ್ನು ಬಂಧಿಸಿ 3 ಮೊಬೈಲ್, ನಗದು 11,620 ರೂ. ವಶಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಉರ್ವ ಪಿಐ ಗುರುಪ್ರಸಾದ್ ಎ,, ಎಸ್‌ಐ ವನಜಾಕ್ಷಿ ಕೆ., ಪ್ರೊಬೆಶನರಿ ಪಿಎಸ್‌ಐ ಹರೋನ್ ಅಖ್ತರ್ ಹಾಗೂ ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬಂಧಿತರ ಸಂಖ್ಯೆ 17ಕ್ಕೆ ಏರಿಕೆ: ಐಪಿಎಲ್ ಕ್ರಿಕೆಟ್ ಆರಂಭಗೊಳ್ಳುತ್ತಿದ್ದಂತೆ ಬೆಟ್ಟಿಂಗ್‌ನಲ್ಲಿ ತೊಡಗದಂತೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದರು. ಆದರೂ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಮಾ.26ರಂದು ಮೂವರನ್ನು ಮಂಗಳೂರು ನಗರ ಅಪರಾಧ ಪತ್ತೆದಳ ಪೊಲೀಸರು ಬಿಜೈ ಬಳಿ ಬಂಧಿಸಿ, 62,700 ರೂ. ನಗದು ಹಾಗೂ 4 ಮೊಬೈಲ್ ವಶಪಡಿಸಿಕೊಂಡಿದ್ದರು. ಮಾ.29ರಂದು ಪಣಂಬೂರು ಮೀನಕಳಿಯ ಸಮುದ್ರ ಕಿನಾರೆಯಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹದಳ ಪೊಲೀಸರು ಬಂಧಿಸಿ 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಮಾ.31ರಂದು ಗೋವಾ ಮೂಲಕ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 3.99 ಲಕ್ಷ ರೂ. ವಶಪಡಿಸಿಕೊಂಡಿದ್ದರು. ಏ.3ರಂದು ಬೆಟ್ಟಿಂಗ್ ನಿರತ ಮೂವರನ್ನು ಕಾವೂರು ಪೊಲೀಸರು ಬಂಧಿಸಿ 26 ಸಾವಿರ ರೂ. ಹಾಗೂ 4 ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು. ಏ.4ರಂದು ಮೂಡುಶೆಡ್ಡೆ ಗಾಲ್ಪ್ ಕ್ಲಬ್ ಬಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹದಳ ಹಾಗೂ ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಆರೋಪಿಗಳಿಂದ 26 ಸಾವಿರ ರೂ. ಸಹಿತ 66 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಈವರೆಗೆ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿದೆ.

Leave a Reply

Your email address will not be published. Required fields are marked *