ಮರದ ಮೌನ ರೋದನ, ಬುಡಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು

ಹರೀಶ್ ಮೋಟುಕಾನ, ಮಂಗಳೂರು

ಅದೆಷ್ಟೋ ಮಂದಿಗೆ ನೆರಳು ನೀಡಿದ್ದೇನೆ. ಪಕ್ಷಿಗಳಿಗೆ ಗೂಡು ಕಟ್ಟಲು ಆಶ್ರಯ ಒದಗಿಸಿದ್ದೇನೆ. ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಂಡು ಜೀವ ಸಂಕುಲಕ್ಕೆ ಅವಶ್ಯವಾಗಿರುವ ಆಮ್ಲಜನಕ ಬಿಡುಗಡೆ ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಆದರೂ ಕೆಲಸಮಯದ ಹಿಂದೆ ನನ್ನ ಅಂಗಾಂಗಳನ್ನು ಕಡಿದು ಕೊಲೆಗೆ ಯತ್ನಿಸಿದರು. ಆದರೂ ಚೇತರಿಸಿಕೊಂಡೆ. ಈ ಬಾರಿ ಬುಡಕ್ಕೇ ಬೆಂಕಿ ಕೊಟ್ಟರು. ದೇಹವೆಲ್ಲ ಒಣಗಿ ಹೋಗಿದೆ. ಇನ್ನು ಹೆಚ್ಚು ದಿನ ಬದುಕಲಾರೆ. ಅಯ್ಯೋ….ಅಯ್ಯಯ್ಯೋ…

ಇದು ನಗರದ ಸರ್ಕೀಟ್ ಹೌಸ್ ಎದುರಿನ ಉದ್ಯಾನವನದಲ್ಲಿರುವ ಮರವೊಂದರ ಮೂಕ ರೋದನ! ವಿಶಾಲವಾಗಿ ಬೆಳೆದು ತಣ್ಣನೆ ಗಾಳಿ, ನೆರಳು ನೀಡುತ್ತಿದ್ದ ಮರವನ್ನು ಕೊಲ್ಲುವ ಉದ್ದೇಶದಿಂದ ಅದರ ಬುಡಕ್ಕೆ ಬೆಂಕಿ ಹಾಕಿದ್ದಾರೆ. ಕಾಂಡ ಶೇ.80ರಷ್ಟು ಭಾಗ ಸುಟ್ಟು ಹೋಗಿದೆ. ಪರಿಣಾಮ ಕೊಂಬೆಗಳೆಲ್ಲ ಒಣಗಿವೆ. ಮರ ಕಡಿದರೆ ಅರಣ್ಯ ಇಲಾಖೆ ಕೇಸ್ ದಾಖಲಿಸುತ್ತದೆ ಎಂದು ಕಿಡಿಗೇಡಿಗಳು ಸದ್ದಿಲ್ಲದೆ ಬೆಂಕಿ ಹಾಕಿ ಮರವನ್ನು ಕೊಲ್ಲಲು ಯತ್ನಿಸಿದ್ದಾರೆ.

ಉದ್ದೇಶವೇನು?:ಈ ಹಿಂದೆ ಸರ್ಕೀಟ್ ಹೌಸ್ ಎದುರಿನ ಉದ್ಯಾನವನ ನಿರ್ಮಾಣ ಸಂದರ್ಭ ಮರದ ಬೃಹತ್ ಗೆಲ್ಲುಗಳನ್ನು ಕಡಿದಿದ್ದರು. ಅದರ ಕುರುಹು ಈಗಲೂ ಆ ಮರದಲ್ಲಿದೆ. ಆ ಸಂದರ್ಭ ನೋವು ಅನುಭವಿಸಿದ ಮರ ಚೇತರಿಸಿಕೊಂಡಿತ್ತು. ಮರದ ಬೆಳವಣಿಗೆ ಸಹಿಸದ ದುಷ್ಟರು ಈ ಬಾರಿ ಹಾಕಿದ ಬೆಂಕಿಗೆ ಮರ ಬದುಕುಳಿಯುವುದು ಸಂಶಯ ಹುಟ್ಟಿಸಿದೆ.

ಮರದಿಂದ ಯಾರಿಗೂ ತೊಂದರೆ ಆಗುತ್ತಿರಲಿಲ್ಲ. ಅದರ ಸುತ್ತಲೂ ಕಟ್ಟೆಯನ್ನು ಕಟ್ಟಲಾಗಿತ್ತು. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅವಕಾಶವಿತ್ತು. ಆದರೆ ಇದನ್ನು ಕೊಲ್ಲುವ ಉದ್ದೇಶ ಏನೆಂದು ಅರ್ಥವಾಗಿಲ್ಲ. ಉದ್ಯಾನವನ ನಿರ್ವಹಣೆ ಇಲ್ಲದೆ ಒಣಗಿ ಹೋಗಿದೆ. ಸುತ್ತಲೂ ಕಾಡು ಬೆಳೆದಿದೆ. ನೆರಳಿಗಿದ್ದ ಮರವನ್ನೂ ಕೊಂದು ಉದ್ಯಾನವನದ ಅಂದ ಕೆಡಿಸುವ ಹುನ್ನಾರ ನಡೆಸಿದಂತಿದೆ. ಕೆಲವು ವರ್ಷಗಳ ಹಿಂದೆ ಲಕ್ಷಾಂತರ ರೂ. ವ್ಯಯಿಸಿ ಉದ್ಯಾನವನ ನಿರ್ಮಿಸಲಾಗಿತ್ತು. ನಡೆದಾಡಲು ಇಂಟರ್‌ಲಾಕ್ ಅಳವಡಿಸಿ ನಡಿಗೆ ಪಥ ನಿರ್ಮಿಸಲಾಗಿತ್ತು. ಈಗ ಯಾರು ಕೂಡಾ ಅಲ್ಲಿ ಭೇಟಿ ನೀಡದೆ ಪಾಳು ಬಿದ್ದಿದೆ.

ಬೆಂಕಿ ಹಾಕಿದವರಾರು?: ಸರ್ಕೀಟ್ ಹೌಸ್ ಆವರಣದಲ್ಲಿ 24 ಗಂಟೆಯೂ ಸಿಬ್ಬಂದಿ ಇದ್ದು, ಮರಕ್ಕೆ ಬೆಂಕಿ ಹಾಕಿದವರು ಯಾರು? ಎನ್ನುವ ಪ್ರಶ್ನೆ ಎದುರಾಗಿದೆ. ರಾತ್ರಿ ವೇಳೆ ಇಲ್ಲಿ ಕೆಲವರು ಮದ್ಯಪಾನ, ಗಾಂಜಾ ಸೇವನೆಗೆ ಬರುತ್ತಿದ್ದು, ಎದುರಿನಲ್ಲೇ ಇರುವ ಕದ್ರಿ ಪೊಲೀಸರು ಈ ಬಗ್ಗೆ ಗಮನ ವಹಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರೀನ್ ಸಿಟಿ-ಕ್ಲೀನ್ ಸಿಟಿ ಎನ್ನುವ ಜನಪ್ರತಿನಿಧಿಗಳು ಪ್ರತಿನಿತ್ಯ ಭೇಟಿ ನೀಡುವ ಸರ್ಕೀಟ್ ಹೌಸ್ ಆವರಣದೊಳಗಡೆ ಮರವನ್ನು ಸುಟ್ಟು ಹಾಕುತ್ತಾರೆ ಎಂದರೆ ಇತರ ಕಡೆಗಳಲ್ಲಿ ಪ್ರಕೃತಿಯ ಸಂರಕ್ಷಣೆ ಎಷ್ಟರ ಮಟ್ಟಿಗೆ ಸಾಧ್ಯ? ಇಲ್ಲಿನ ಸಿಬ್ಬಂದಿಯನ್ನು ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಅರಣ್ಯ ಇಲಾಖೆ ತಕ್ಷಣ ಕ್ರಮ ಜರುಗಿಸಬೇಕು.
|ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ