ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಮೃತ್ಯು

ಮಂಗಳೂರು: ನಗರದ ಚಿಲಿಂಬಿ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಭಾರತಿ ಹೈಟ್ಸ್‌ನಲ್ಲಿ ಬುಧವಾರ ಮಧ್ಯಾಹ್ನ ಲಿಫ್ಟ್‌ನಲ್ಲಿ ಸಿಲುಕಿ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಗಾರ್ಡ್ ನೀಲಪ್ಪ ಅವರ ಪುತ್ರ ಮಂಜುನಾಥ್(8) ಮೃತಪಟ್ಟಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹೂವಿನಹಡಗಲಿ ನೀಲಪ್ಪ-ಪಾರ್ವತಿ ದಂಪತಿ ಪುತ್ರ ಮಂಜುನಾಥ್ ಉರ್ವ ಕೆನರಾ ಶಾಲೆ ವಿದ್ಯಾರ್ಥಿಯಾಗಿದ್ದನು. ತನ್ನ ಅಕ್ಕ ಭಾಗ್ಯಳೊಂದಿಗೆ ಗುರುವಾರ ನಡೆಯಲಿರುವ ಕೊನೆಯ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದನು. ನೆಲಮಹಡಿಯಲ್ಲಿದ್ದ ಬಾಲಕ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಬಳಿ ಹಳೇ ವಿನ್ಯಾಸದ ಲಿಫ್ಟ್‌ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಲಿಫ್ಟ್ ಸ್ಥಗಿತಗೊಂಡಿದೆ. ಹೊರಬರಲು ಯತ್ನಿಸಿದಾಗ ಆತನ ತಲೆ ಸಿಲುಕಿಕೊಂಡಿದೆ. ಇದನ್ನು ಗಮನಿಸಿದ ಭಾಗ್ಯ ಕಿರುಚಾಡಿದ್ದು, ಜನ ಸೇರಿ ಲಿಫ್ಟ್ ಆಪರೇಟರನ್ನು ಕರೆಸಿದ್ದಾರೆ. ಅವರು ಬಂದು ಬಾಲಕನನ್ನು ಹೊರ ತೆಗೆಯುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.

ಮಂಜುನಾಥ ಒಂದು ವರ್ಷದ ಮಗುವಾಗಿದ್ದಾಗ ಕುಟುಂಬ ಈ ಅಪಾರ್ಟ್‌ಮೆಂಟ್‌ಗೆ ಕೆಲಸಕ್ಕೆ ಬಂದಿದ್ದರು. ಘಟನೆಯಿಂದ ಬಾಲಕನ ಹೆತ್ತವರು ಆಘಾತಗೊಂಡಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *