ವಿಜ್ಞಾನ ಜತೆಗೆ ಪ್ರಕೃತಿಗೂ ಮಹತ್ವ: ಶ್ರೀ ಮಾತಾ ಅಮೃತಾನಂದಮಯಿ

ಮಂಗಳೂರು: ಇಂದು ನಾವು ವೇಗದ ಯುಗದಲ್ಲಿದ್ದೇವೆ. ಜೀವನವೆಂಬ ಓಟದಲ್ಲಿ ಯಾರಿಗೂ ಸಮಯವೇ ಇಲ್ಲ. ಬಾಹ್ಯದಲ್ಲಿ ಮಾತ್ರವಲ್ಲದೆ, ಅಂತರಂಗದಲ್ಲಿಯೂ ವೇಗದ ಹೊಡೆತಕ್ಕೆ ಸಿಲುಕಿದ್ದೇವೆ. ವೇಗಕ್ಕೆ ಕಾರಣವಾಗಿರುವ ವಿಜ್ಞಾನ ತಂತ್ರಜ್ಞಾನದ ಜತೆಗೆ ಪ್ರಕೃತಿ ಹಾಗೂ ಸಂಸ್ಕೃತಿಗೂ ಸಮಾನ ಮಹತ್ವ ನೀಡಿ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಹೇಳಿದರು.

ಬೋಳೂರು ಅಮೃತಾ ವಿದ್ಯಾಲಯದಲ್ಲಿ ಶುಕ್ರವಾರ ಅಮೃತ ಸಂಗಮ-2019 ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ಪ್ರಕೃತಿ ದುರಂತ ತಡೆಯುವುದು ನಮ್ಮ ಮಿತಿಯುಳ್ಳ ಬುದ್ಧಿಶಕ್ತಿಗೆ ಸಾಧ್ಯವಿಲ್ಲ. ಆದರೆ, ಅದೇ ಬುದ್ಧಿಶಕ್ತಿಯನ್ನು ದುಃಖಿತರಿಗೆ ಸಹಾಯಹಸ್ತ ನೀಡಲು ಬಳಸಬಹುದು. ಒಂದೊಂದು ಪ್ರಕೃತಿ ವಿಕೋಪದಲ್ಲಿಯೂ ಒಂದೊಂದು ಎಚ್ಚರಿಕೆಯ ಸಂದೇಶ ಅಡಗಿದೆ. ಪ್ರಕೃತಿ ನಮಗೆ ನೀಡಿರುವ ಧಾರಾಳತನವನ್ನು ಹಿಂಪಡೆಯಲು ಒಂದೇ ಕ್ಷಣ ಸಾಕು. ಈ ವಾಸ್ತವ ಅರ್ಥ ಮಾಡಿಕೊಂಡರೆ ನಮ್ಮ ನಡೆ ನುಡಿಯಲ್ಲಿ ಪ್ರಕೃತಿ ಕುರಿತು ಪ್ರೀತಿ ಮೂಡುತ್ತದೆ ಎಂದು ತಿಳಿಯುತ್ತದೆ ಎಂದರು.

ನಾವಿಂದು ರಾಸಾಯನಿಕಗಳ ಮೂಲಕ ಪ್ರಕೃತಿಯನ್ನು ಕಲುಷಿತಗೊಳಿಸುತ್ತಿದ್ದೇವೆ. ಹಿಂದೆ ಗೋವಿನ ಸಗಣಿಯನ್ನು ಆ್ಯಂಟಿಸೆಪ್ಟಿಕ್ ಆಗಿ ಬಳಲಾಗುತ್ತಿತ್ತು. ಆದರೆ ಇಂದು ಗಾಯಕ್ಕೆ ಹಚ್ಚಿದರೆ ಸೆಪ್ಟಿಕ್ ಆಗುವ ಸಾಧ್ಯತೆಯಿದೆ. ನಾವಿಂದು ಉಸಿರಾಡುವುದು, ಕುಡಿಯುವುದು, ತಿನ್ನುವುದು ಎಲ್ಲವೂ ವಿಷ. ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಮನುಕುಲಕ್ಕೆ ಸಂಚಕಾರ ಬರಲಿದೆ ಎಂದರು.

ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕಾರ್ಪೋರೇಶನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಪಿ.ವಿ.ಭಾರತಿ, ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ಬಿ.ಚಂದ್ರಶೇಖರ್, ಎಂಆರ್‌ಪಿಎಲ್-ಒಎನ್‌ಜಿಸಿ ಮಹಾಪ್ರಬಂಧಕ ಬಿ.ಎಚ್.ವಿ.ಪ್ರಸಾದ್, ಕರ್ಣಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ ದೇಶಪಾಂಡೆ, ಪತ್ರಕರ್ತೆ ಸಂಧ್ಯಾ ಎಸ್. ಪೈ, ಉದ್ಯಮಿ ಟಿ.ಎ.ಅಶೋಕನ್ ಉಪಸ್ಥಿತರಿದ್ದರು.

ಮಂಗಳೂರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಸ್ವಾಗತಿಸಿದರು. ಅಮೃತಾ ವಿದ್ಯಾಲಯ ವಿದ್ಯಾರ್ಥಿ ಸ್ನೇಹಿತ್ ಸುರೇಂದ್ರನ್ ಪ್ರಾರ್ಥಿಸಿದರು. ಸುರೇಶ್ ಅರವಿಂದ್ ವಂದಿಸಿದರು.

ಗೋವುಗಳಿಗೆ ಯಜಮಾನ ಸ್ಥಾನ: ಗೋವುಗಳಿಗೆ ನಾವು ನೀಡುವುದಕ್ಕಿಂತ ಹೆಚ್ಚು ಅವು ನಮಗೆ ಸಹಾಯ ಮಾಡುತ್ತವೆ. ಆರ್ಥಿಕ ವಿಚಾರದಲ್ಲಿ ಗೋವುಗಳು ಕುಟುಂಬದ ಯಜಮಾನನ ಸ್ಥಾನದಲ್ಲಿ ನಿಲ್ಲುತ್ತದೆ. ಒಂದು ಹಸುವನ್ನು ಸಾಕಿ ಜೀವನ ನಿರ್ವಹಣೆ ಮಾಡುವವರು ಹಲವು ಮಂದಿ ಸಿಗುತ್ತಾರೆ. ಹಸುಗಳು, ಮರಗಿಡಗಳು ಈ ಭೂಮಿಯಿಂದ ತಾವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಭೂಮಿಗೆ ನೀಡುತ್ತದೆ. ಮರಗಳು ವಾತಾವರಣ ಮಾತ್ರ ಅಲ್ಲ ಭೂಮಿಯನ್ನೂ ಶುದ್ಧ ಮಾಡುತ್ತದೆ. ಪ್ರಕೃತಿಯ ಪ್ರತಿಯೊಂದು ವಸ್ತುವಿನಿಂದಲೂ ನಮಗೆ ಕಲಿಯಲು ಬಹಳಷ್ಟಿದೆ ಎಂದು ‘ಅಮ್ಮ’ ಹೇಳಿದರು.

ಸೇವಾ ಕಾರ್ಯಕ್ರಮಗಳು: ಮಾತಾಮೃತಾನಂದಮಯಿ ಮಠದ ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬಿ ಯೋಜನೆಯಾದ ಅಮೃತಶ್ರೀ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸೀರೆ ಮತ್ತು ಕಾರ್ಯವಾಹ ಬಂಡವಾಳ ವಿತರಿಸಲಾಯಿತು. 40 ಅಂಗವಿಕಲ ಫಲಾನುಭವಿಗಳಿಗೆ ವೀಲ್‌ಚೇರ್, ವಿದ್ಯಾಮೃತ ಯೋಜನೆಯಲ್ಲಿ 22 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದಾರ್ಥಿವೇತನ, 30 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬಾಳೆಯ ನಾರು-ಹತ್ತಿಯ ಬಟ್ಟೆಯಿಂದ ತಯಾರಿಸಲಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಮಹಿಳೆಯರಿಗೆ ವಿತರಿಸಲಾಯಿತು. ಅಮೃತ ಸಂಗಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಅಮಲ ಭಾರತ ಸ್ವಚ್ಛತಾ ಅಭಿಯಾನದ ಭಾಗವಾಗಿ ಸುಲ್ತಾನ್ ಬತ್ತೇರಿಯಲ್ಲಿ ಸಾರ್ವಜನಿಕ ಶೌಚಗೃಹ ಹಾಗೂ ಸ್ನಾನಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಎಲ್ಲರಿಗೂ ದರ್ಶನ: ಅಮ್ಮನವರ ಅಮೃತ ಸಂಗಮ ಕಾರ್ಯಕ್ರಮ ಎರಡು ದಿನ ನಡೆಯಲಿದ್ದು, ಮೊದಲ ದಿನ ಭಾಗವಹಿಸಿದ ಎಲ್ಲರಿಗೂ ಅಮ್ಮ ಜಾತಿ, ಮತ, ಪಂಥಗಳ ಭೇದವಿಲ್ಲದೆ ದರ್ಶನವಿತ್ತು ಅನುಗ್ರಹಿಸಿದರು. ಅಮ್ಮನವರ ಸತ್ಸಂಗ-ಭಜನೆ, ಪ್ರವಚನ, ಮಾನಸ ಪೂಜೆ, ಧ್ಯಾನ ಮತ್ತು ವೈಯುಕ್ತಿಕ ದರ್ಶನ, ಅಮ್ಮನ ಅಪ್ಪುಗೆ ಭಕ್ತರಿಗೆ ಲಭ್ಯವಾಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಅಮೃತಸಂಗಮ ಯಜ್ಞಶಾಲೆಯಲ್ಲಿ ಶ್ರೀ ಲಲಿತಾ ಸಹಸ್ರನಾಮ ಅರ್ಚನೆ, ರಾಹುದೋಷ ನಿವಾರಣಾ ಪೂಜೆ, ಶ್ರೀ ಲಲಿತಾ ತ್ರಿಶತಿ ನಡೆಯಿತು. ಬ್ರಹ್ಮಸ್ಥಾನದಲ್ಲಿ ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಸಾಯಂಕಾಲ ಅಲಂಕಾಕ ಪೂಜೆ, ರಾತ್ರಿ ಭಗವತಿ ಪೂಜೆ, ಮಹಾ ಸುದರ್ಶನ ಹೋಮ ನಡೆಯಿತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೊಡಗು ಮತ್ತು ಕೇರಳದಲ್ಲಾದ ಅತಿವೃಷ್ಟಿ, ವಿಜ್ಞಾನ ತಂತ್ರಜ್ಞಾನ ವಿದ್ಯೆ ಮುಖ್ಯವಾಗಿದ್ದರೂ ಅವು ಮನುಷ್ಯತ್ವಕ್ಕೆ ಪರ್ಯಾಯವಾಗಿ ನಿಲ್ಲಲಾರವು ಎಂಬ ಪಾಠ ಕಲಿಸಿದೆ. ಜನರ ಬಳಿ ಎಲ್ಲ ಸೌಕರ್ಯಗಳಿದ್ದರೂ ಬಳಸಲಾಗಲಿಲ್ಲ. ಉಪಕರಣಗಳನ್ನು ಅವಲಂಬಿಸಿ ಮನುಷ್ಯನು ಎಂದಿಗೂ ಪೂರ್ಣ ಸುರಕ್ಷಿತನಾಗಿರಲಾರ. ನಿಜವಾದ ಸುರಕ್ಷತೆಯನ್ನು ನಾವು ನಮ್ಮೊಳಗೇ ಕಂಡುಕೊಳ್ಳಬೇಕಾಗಿದೆ.
|ಮಾತಾ ಅಮೃತಾನಂದಮಯಿ ದೇವಿ