ತಂಬಾಕು ಮುಕ್ತವಾಗಲಿದೆ ಮಂಗಳೂರು

ಹರೀಶ್ ಮೋಟುಕಾನ ಮಂಗಳೂರು
ಸಿಗರೇಟು, ತಂಬಾಕಿನ ಉತ್ಪನ್ನಗಳ ಬಳಕೆ ನಿಷೇಧ ಕಾಯ್ದೆ ಅನುಷ್ಠಾನ ಜಾರಿಯಾಗಿದ್ದರೂ, ಪರಿಣಾಮಕಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳೂರನ್ನು ‘ತಂಬಾಕು ಮುಕ್ತ ನಗರವನ್ನಾಗಿ’ ಮಾಡಲು ಯೋಜನೆ ರೂಪಿಸಿದೆ. ಜತೆಗೆ ತುಮಕೂರು, ಮೈಸೂರು ನಗರಗಳಲ್ಲೂ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ.
ಮೂರು ನಗರಗಳಲ್ಲಿರುವ ಪ್ರಮುಖ ಸರ್ಕಾರಿ ಇಲಾಖೆ/ಸಂಸ್ಥೆ/ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆ, ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ‘ಸಿಗರೇಟು ಸೇದುವಂತಿಲ್ಲ. ತಂಬಾಕು ಜಗಿಯುವಂತಿಲ್ಲ’ ಎನ್ನುವ ಕಟ್ಟುನಿಟ್ಟಿನ ನಿಯಮ ಅನುಷ್ಠಾನಕ್ಕೆ ಬರಲಿವೆ. ಶೀಘ್ರ ಈ ಯೋಜನೆಗೆ ಚಾಲನೆ ನೀಡಿ ನಾಲ್ಕು ತಿಂಗಳೊಳಗೆ ಮೂರು ನಗರವನ್ನು ಸಂಪೂರ್ಣ ತಂಬಾಕು ಮುಕ್ತ ನಗರವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಡಿ ಎನ್‌ಜಿಒ ಸಹಕಾರದೊಂದಿಗೆ ರಾಜ್ಯದ ಮೂರು ನಗರವನ್ನು ತಂಬಾಕು ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಸ್ತೆ ಸಾರಿಗೆ, ಶಿಕ್ಷಣ, ಅಬಕಾರಿ ಇಲಾಖೆ, ಸ್ಥಳೀಯಾಡಳಿತ ಸೇರಿದಂತೆ ಎಲ್ಲ ಇಲಾಖೆಗಳನ್ನು ಸೇರಿಸಿಕೊಂಡು ‘ತಂಬಾಕು ಮುಕ್ತ’ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಸರ್ಕಾರಿ ಇಲಾಖೆಗಳು, ಅಂಗಡಿ, ಮಾಲ್, ಶಿಕ್ಷಣ ಕೇಂದ್ರದಲ್ಲಿ ಹಾಗೂ ಪರಿಸರದಲ್ಲಿ ಬೀಡಿ ಸಿಗರೇಟು ಸೇದುವಂತಿಲ್ಲ. ತಂಬಾಕು ಜಗಿಯುವಂತಿಲ್ಲ. ಸರ್ಕಾರಿ/ಖಾಸಗಿ ಬಸ್‌ಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿಯೂ ಕೂಡ ಇದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಇನ್ನು ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲೂ ಬೀಡಿ ಸಿಗರೇಟು ಸೇದುವಂತಿಲ್ಲ. ಒಂದು ವೇಳೆ ಸೇದಿದರೆ ಸಂಬಂಧಪಟ್ಟವರ ಮೇಲೆ ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಎಲ್ಲ ಸರ್ಕಾರಿ ಇಲಾಖೆಗಳಿಗೆ ತೆರಳಿ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ.
ಈ ಸಂಬಂಧ ಮಂಗಳೂರಿನ ದ.ಕ ಜಿಲ್ಲಾಧಿಕಾರಿ, ಆರ್‌ಟಿಒ ಕಚೇರಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಂಗಳೂರು ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಅಧಿಕಾರಿಗಳು ಹಾಗೂ ಎನ್‌ಜಿಒ ಪ್ರಮುಖರು ತೆರಳಿ ಮಾಹಿತಿ ನೀಡುವ ಕಾರ್ಯ ಆರಂಭಿಸಿದ್ದಾರೆ.

ಸಂಬಂಧಿತ ಇಲಾಖೆಯಿಂದಲೇ ದಂಡ:  ‘ತಂಬಾಕು ಮುಕ್ತ’ ನಗರ ಪೂರ್ಣಗೊಂಡಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಸಂಸ್ಥೆಗಳಿಗೆ ಇದರ ಜವಾಬ್ದಾರಿ ವಹಿಸಬೇಕಾಗಿದೆ. ಅಂದರೆ, ನಿಗದಿತ ಇಲಾಖೆ/ ಸಂಸ್ಥೆ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು ಸೇದುವುದು, ಅಥವಾ ತಂಬಾಕು ಜಗಿದರೆ ಸಂಬಂಧಪಟ್ಟ ಇಲಾಖೆಗೆ ದಂಡ ವಿಧಿಸಲು ಅವಕಾಶವಿದೆ. ಪ್ರಸ್ತುತವೂ ಈ ರೀತಿಯಲ್ಲಿ ಅವಕಾಶಗಳಿದ್ದರೂ, ಪೂರ್ಣ ಮಟ್ಟದಲ್ಲಿ ದಂಡ ವಸೂಲಿ ನಡೆಯುತ್ತಿರಲಿಲ್ಲ. ಈ ಬಗ್ಗೆ ಮಾಹಿತಿ ಕೂಡ ಇಲಾಖೆಗಳಿಗೆ ಇರಲಿಲ್ಲ. ಮುಂದೆ ಇದು ಕಟ್ಟುನಿಟ್ಟಾಗಿ ಜಾರಿಯಾಗಲಿದೆ.

ನಾಮ ಫಲಕ ಕಡ್ಡಾಯ:  ಮಂಗಳೂರು ಸೇರಿದಂತೆ ಮೂರು ನಗರಗಳ ಪ್ರತಿ ಸರ್ಕಾರಿ ಇಲಾಖೆ, ಅಂಗಡಿ, ಮಾಲ್, ಶಿಕ್ಷಣ ಸಂಸ್ಥೆಗಳ ವ್ಯಾಪ್ತಿ, ಖಾಸಗಿ- ಸರ್ಕಾರಿ ಬಸ್‌ಗಳು, ಬಸ್ ನಿಲ್ದಾಣ, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳದಲ್ಲಿ ‘ತಂಬಾಕು ನಿಷೇಧಿತ ಪ್ರದೇಶ’ ಬೋರ್ಡ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಒಂದು ವೇಳೆ ಅಳವಡಿಸದಿದ್ದರೆ ಅದು ಕಾನೂನು ಬಾಹಿರವಾಗುತ್ತದೆ.

ಯೋಜನೆ ಬಗ್ಗೆ ಸರ್ಕಾರದಿಂದ ಸೂಚನೆ ಬಂದಿದೆ. ತಂಬಾಕು ನಿಯಂತ್ರಣ ಕೋಶದ ನೇತೃತ್ವದಲ್ಲಿ ಎನ್‌ಜಿಒ ನೆರವಿನಿಂದ ಮಂಗಳೂರಿನ ಸರ್ಕಾರಿ ಇಲಾಖೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ತಂಬಾಕು ಮುಕ್ತ ಪರಿಕಲ್ಪನೆಯ ಮಾಹಿತಿ ನೀಡಲಾಗುತ್ತಿದೆ. ಶೀಘ್ರದಲ್ಲಿ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆ ಇದೆ.
ಡಾ.ರಾಜೇಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಅಧಿಕಾರಿ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡಿದರೆ ಕೋಟ್ಪಾ ಕಾಯ್ದೆಯಡಿ ದಂಡ ವಿಧಿಸಲಾಗುವುದು. ತಂಬಾಕು ಮುಕ್ತ ನಗರ ಯೋಜನೆ ಜಾರಿಗೊಳ್ಳುವ ಕಾರಣ ಆಯಾ ಸ್ಥಳದಲ್ಲಿರುವ ಸರ್ಕಾರಿ ಇಲಾಖಾಧಿಕಾರಿಗಳು ದಂಡ ವಿಧಿಸಬಹುದು. ಇದರಿಂದ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಸಾಧ್ಯ.
ಟಿ.ಆರ್.ಸುರೇಶ್ ಮಂಗಳೂರು ನಗರ ಪೊಲೀಸ್ ಆಯುಕ್ತರು