ಪ್ಲಾಸ್ಟಿಕ್ ಮುಕ್ತವಾಗಲಿದೆ ಮಂಗಳೂರು

ಪಿ.ಬಿ.ಹರೀಶ್ ರೈ ಮಂಗಳೂರು

ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಶೀಘ್ರದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಲಿದೆ.
2016ರಿಂದ ಪ್ಲಾಸ್ಟಿಕ್ ನಿಷೇಧ ಜಾರಿ ಇದ್ದರೂ ಪರಿಣಾಮಕಾರಿ ಅನುಷ್ಠಾನವಾಗಿರಲಿಲ್ಲ. ಈಗ ಪಾಲಿಕೆ ವತಿಯಿಂದ ನೈರ್ಮಲೀಕರಣ ಹಾಗೂ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಬೈಲಾ ಜಾರಿಯಾಗಲಿದ್ದು, ಇದರಲ್ಲಿ ಸರ್ಕಾರದ ಆದೇಶದನ್ವಯ ಪ್ಲಾಸ್ಟಿಕ್ ನಿಷೇಧ ಪರಿಣಮಕಾರಿಯಾಗಿ ಜಾರಿ ಮಾಡುವ ಅಂಶ ಉಲ್ಲೇಖವಾಗಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮನಪಾ ಸಾಮಾನ್ಯ ಸಭೆಯಲ್ಲಿ ನೈರ್ಮಲೀಕರಣ ಹಾಗೂ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಬೈಲಾ -2018 ಮಂಡನೆಯಾಗಿದ್ದು, ಪರಿಷತ್ ಅನುಮೋದನೆ ನೀಡಿತ್ತು. ಈಗ ಗಜೆಟ್ ನೋಟಿಫಿಕೇಶನ್ ಹಂತದಲ್ಲಿದ್ದು, ಶೀಘ್ರ ಅನುಷ್ಠಾನವಾಗಲಿದೆ. ಕಳೆದ ವಾರ ನಡೆದ ಜಿಲ್ಲಾ ನಗರಾಭಿವೃದ್ದಿ ಕೋಶದ ಸಭೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾರಾಟ ಮಾಡುವುದನ್ನು ಗುರುತಿಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಮಾರಾಟ ಮಾಡುತ್ತಿರುವ ಪ್ಲಾಸ್ಟಿಕ್ ಸಂಪೂರ್ಣ ವಶಕ್ಕೆ ಪಡೆಯುವಂತೆಯೂ ಪಾಲಿಕೆಗೆ ಸೂಚನೆ ನೀಡಲಾಗಿದೆ.

ಜಾರಿಯಾಗದ ನಿಷೇಧ: ಪರಿಸರಕ್ಕೆ ಹಾನಿ ಹಾಗೂ ಆರೋಗ್ಯಕ್ಕೆ ಅಪಾಯವನ್ನು ಪರಿಗಣಿಸಿ ರಾಜ್ಯ ಸರ್ಕಾರ 2016ರಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಿತ್ತು. ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ನಗರಗಳ ಮೋರಿ ಮತ್ತು ಒಳಚರಂಡಿಗಳಲ್ಲಿ ನೀರಿನ ಸರಾಗ ಹರಿವಿಗೆ ತೊಂದರೆಯಾಗುವುದನ್ನು ಕೂಡ ಪರಿಗಣಿಸಿ ಈ ನಿಷೇಧ ಹೇರಲಾಗಿತ್ತು. ಮಂಗಳೂರು ನಗರದಲ್ಲೂ ಆರಂಭದಲ್ಲಿ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಿತ್ತು. ಬಳಿಕ ಜನಪ್ರತಿನಿಧಿಗಳೇ ಫ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್ ತೆರವಿಗೆ ಅಡ್ಡಿಪಡಿಸಿದ ಕಾರಣ ಅಧಿಕಾರಿಗಳು ಸುಮ್ಮನಾಗಬೇಕಾಯಿತು.

ಹೀಗಿದೆ ಅಧಿಸೂಚನೆ: ಯಾವುದೇ ಸಗಟು ಮಾರಾಟಗಾರ, ಚಿಲ್ಲರೆ ವ್ಯಾಪಾರಿ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ ರೋಲ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಬೀಡ್ಸ್‌ನಿಂದ ತಯಾರಾದ ವಸ್ತುಗಳನ್ನು ನಿಷೇಧಿಸಲಾಗಿದೆ. ಯಾವುದೇ ಕೈಗಾರಿಕೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸಂಗ್ರಹ, ಸಾಗಾಟ, ಮಾರಾಟ ಮಾಡುವಂತಿಲ್ಲ.

ಯಾವುದಕ್ಕೆ ವಿನಾಯಿತಿ?
ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್, ವಿಶೇಷ ಆರ್ಥಿಕ ವಲಯದಲ್ಲಿ ರಫ್ತು ಮಾಡುವ ಉದ್ದೇಶಕ್ಕಾಗಿ ಉತ್ಪಾದಿಸಲ್ಪಡುವ ಪ್ಲಾಸ್ಟಿಕ್ ವಸ್ತುಗಳು, ಉತ್ಪಾದನಾ ಮತ್ತು ಸಂಸ್ಕರಣಾ ಘಟಕಗಳಲ್ಲಿ ಪ್ಯಾಕ್ ಮಾಡಿ ಸೀಲ್ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಚೀಲಗಳಿಗೆ ಅಧಿಸೂಚನೆಯಿಂದ ವಿನಾಯಿತಿ ನೀಡಲಾಗಿದೆ.

ಪ್ಲಾಸ್ಟಿಕ್ ನಿಷೇಧ ಹಿಂದಿನಿಂದಲೂ ಜಾರಿಯಲ್ಲಿದೆ. ಇನ್ನು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರ ಪಾಲಿಕೆಯ ಅಧಿಕಾರಿಗಳು ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯಾಗದಂತೆ ನಿಗಾ ವಹಿಸಲಿದ್ದಾರೆ.
– ಬಿ.ಎಚ್.ನಾರಾಯಣಪ್ಪ , ಆಯುಕ್ತರು, ಮನಪಾ

ಮಂಗಳೂರು ನಗರವನ್ನು ಇತರ ನಗರಗಳಿಗೆ ಮಾದರಿಯಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮಂಗಳೂರು ಮಹಾ ನಗರ ಪಾಲಿಕೆಗೆ ಸೂಚಿಸಲಾಗಿದೆ.
-ಪ್ರಸನ್ನ ಕುಮಾರ್, ಯೋಜನಾ ನಿರ್ದೇಶಕರು, ದ.ಕ.ಜಿಲ್ಲಾ ನಗರಾಭಿವೃದ್ದಿ ಕೋಶ

Leave a Reply

Your email address will not be published. Required fields are marked *