ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ

<ಬಾನಂಗಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಹೊಸ ವರ್ಷಾಚರಣೆ ಸಂಭ್ರಮಾಚರಣೆ ಸೋಮವಾರ ರಾತ್ರಿ ಮಂಗಳೂರು, ಉಡುಪಿ ನಗರ ಹಾಗೂ ಹೊರವಲಯದ ವಿವಿಧೆಡೆಗಳಲ್ಲಿ ಭರ್ಜರಿಯಾಗಿಯೇ ನಡೆಯಿತು. ಯುವ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ರಾತ್ರಿ 12 ಗಂಟೆ ವೇಳೆಗೆ ಬಾನಂಗಳಕ್ಕೆ ಪಟಾಕಿಗಳನ್ನು ಹಾರಿ ಬಿಡುವ ಮೂಲಕ 2019ನೇ ವರ್ಷವನ್ನು ಬರ ಮಾಡಿಕೊಳ್ಳಲಾಯಿತು.

ಮಂಗಳೂರು, ಉಡುಪಿ, ಮಣಿಪಾಲದ ವಿವಿಧ ಹೋಟೆಲ್, ರೆಸ್ಟೋರೆಂಟ್, ಪಬ್, ಸಂಘ ಸಂಸ್ಥೆಗಳಿಂದ ವಿಶೇಷ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು, ಟಿಕೆಟ್ ವ್ಯವಸ್ಥೆ ಮಾಡಿದ್ದರಿಂದ ಎಲ್ಲ ಭರ್ತಿಯಾಗಿದ್ದವು. ಡಾನ್ಸ್, ಡಿಜೆ, ಮ್ಯಾಜಿಕ್ ಶೋ, ವಿವಿಧ ಆಟಗಳು ಆಯೋಜಿಸಲ್ಪಟ್ಟವು. ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನೂ ನೀಡಲಾಗಿತ್ತು. ಬೀಚ್‌ಗಳಲ್ಲಿಯೂ ಜನರು ಸೇರಿ ಹೊಸ ವರ್ಷದ ಆಚರಣೆಯಲ್ಲಿ ತೊಡಗಿದ್ದರು. ಮಲ್ಪೆ, ಕಾಪು, ಮರವಂತೆ, ಕೋಡಿ ಬೀಚ್‌ನಲ್ಲಿ ಯುವಜನರು ಪಾರ್ಟಿ ಮಾಡಿ ಸಂಭ್ರಮಿಸಿದರು. ಮನೆ, ಫಾರ್ಮ್‌ಹೌಸ್ ಮತ್ತು ರೆಸಾರ್ಟ್‌ಗಳಲ್ಲಿ ಕುಟುಂಬ ಸಮೇತರಾಗಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೋರಿದರು.

ನಗರದ ಬಹುತೇಕ ಮದ್ಯದಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಮಣಿಪಾಲ, ಉಡುಪಿ ರಸ್ತೆಗಳಲ್ಲಿ ಯುವಕರು ಬೈಕ್, ಕಾರುಗಳಲ್ಲಿ ಕೇಕೆ ಹಾಕಿ ಸಂಭ್ರಮಿಸಿ ಹೊಸ ವರ್ಷವನ್ನು ಸಂಭ್ರಮಿಸಿದರು. ಗಾಳಿಪಟ ಉತ್ಸವ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಆಯೋಜಿಸಲಾಗಿದ್ದ ಸುಡುಮದ್ದು ಪ್ರದರ್ಶನ ಮತ್ತು ಎಲ್‌ಇಡಿ ಗಾಳಿಪಟ ಪ್ರದರ್ಶನಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.

ಪೊಲೀಸ್ ಬಿಗು ಬಂದೋಬಸ್ತ್:
ಯಾವುದೇ ಅಹಿತಕರ ಘಟನೆ ನಡೆಯದಂತೆ ದ.ಕ, ಉಡುಪಿ ಜಿಲ್ಲೆಯಾದ್ಯಂತ ಪೊಲೀಸರನ್ನು ನಿಯೋಜಿಸಿ ಬಿಗು ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ಮಂಗಳೂರು ನಗರದ ಎಲ್ಲೆಡೆ ಚಾಲನೆಯಲ್ಲಿತ್ತು. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ತಡ ರಾತ್ರಿ ತನಕ ವ್ಯಾಪಾರ ಜೋರಾಗಿತ್ತು. ತಡರಾತ್ರಿವರೆಗೂ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಮದ್ಯ ಸೇವನೆಗೈದು ವಾಹನ ಚಾಲನೆ ಮಾಡುವವರನ್ನು ತಪಾಸಣೆ ಪೊಲೀಸರು ತಪಾಸಣೆ ನಡೆಸಿದರು. ಹೋಟೆಲ್, ರೆಸ್ಟೋರೆಂಟ್, ಕ್ಲಬ್‌ಗಳ ಒಳಾಂಗಣದಲ್ಲಿ ನಡೆಸುವ ಮನೋರಂಜನಾ ಪಾರ್ಟಿಗಳನ್ನು ರಾತ್ರಿ 12 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು ಎಂದು ಪೊಲೀಸ್ ನಿರ್ದೇಶನವಿದ್ದರೂ ಕೆಲವು ಕಡೆಗಳಲ್ಲಿ ನಿಗದಿತ ಸಮಯದ ಬಳಿಕವೂ ಮುಂದುವರಿದಾಗ ಪೊಲೀಸರು ಪಾರ್ಟಿ ಮುಗಿಸುವಂತೆ ಸೂಚನೆ ನೀಡಿದರು.