ಹೆಗ್ಗಡೆಯವರಿಂದ ಹತ್ತು ಪೀಳಿಗೆಯ ಸಾಧನೆ

ಮಂಗಳೂರು: ದೇವರ ಪೂಜೆಯಂತೆ ಸಣ್ಣ-ಪುಟ್ಟ ಕೆಲಸವನ್ನೂ ಶ್ರದ್ಧೆಯಿಂದ ಮಾಡುವವರು ದೊಡ್ಡ ಸಾಧಕರಾಗುತ್ತಾರೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಗುರುವಾರ ಸಾಹಿತ್ಯ ಸಮ್ಮೇಳನದ 86ನೇ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. 50 ವರ್ಷಗಳಿಂದ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಗಮನಿಸುತ್ತ ಬಂದಿದ್ದೇನೆ. ಅವರನ್ನು ತಿಳಿದುಕೊಳ್ಳುವುದು ಸಾಧ್ಯವಾಗಿಲ್ಲ. ಸಾಹಿತ್ಯ, ಕಲಾಸೇವೆ, ಶೈಕ್ಷಣಿಕವಾಗಿ ಆಯುರ್ವೆದ, ಇಂಜಿನಿಯರಿಂಗ್, ಡೆಂಟಲ್ ಕಾಲೇಜು ಹುಟ್ಟುಹಾಕಿದ್ದರಿಂದ ತೊಡಗಿ ವಸ್ತು ಸಂಗ್ರಹಾಲಯ ಇರಬಹುದು, ಕಾರುಗಳ ಅಪಾರ ಸಂಗ್ರಹ ಇರಬಹುದು, ಫೋಟೋಗ್ರಫಿ ಹವ್ಯಾಸದವರೆಗೂ ಹೆಗ್ಗಡೆಯವರ ಆಸಕ್ತಿ ವಿಸ್ತಾರವಾಗುತ್ತಲೇ ಇದೆ. ಅವರ ಬಗ್ಗೆ ಸಾಕಷ್ಟು ಮಂದಿ ಬರೆದಿರಬಹುದಾದರೂ ಅದರಲ್ಲಿ ಅವರನ್ನು ಸಮಗ್ರವಾಗಿ ಕಟ್ಟಿಕೊಡಲು ಸಾಧ್ಯವಾಗದು. 10 ಪೀಳಿಗೆಯವರ ಸಾಧನೆಯನ್ನು ಏಕಾಂಗಿಯಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಸರ್ಕಾರಗಳ ಯೋಜನೆಗಳು ಹಲವೆಡೆ ದುರುಪಯೋಗ ಆಗುತ್ತಿರುವ ಕಾಲದಲ್ಲಿ ಧರ್ಮಸ್ಥಳದಲ್ಲಿ ಅನಕ್ಷರಸ್ಥರಿಗೂ ಸಾಲ ಕೊಟ್ಟು ಅವರನ್ನು ಸ್ವಾವಲಂಬಿ ಆಗಿ ರೂಪಿಸುವ ಮಹತ್ಕಾರ್ಯ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರು ವಿದೇಶಿ ಪದ್ಧತಿಯಲ್ಲಿ ವ್ಯವಸಾಯ ಮಾಡುವುದಕ್ಕೆ ಹೋಗಿ ಕಷ್ಟಕ್ಕೀಡಾಗಿದ್ದಾರೆ, ರಾಸಾಯನಿಕ ಬಳಕೆಯಿಂದ ವಿಷಯುಕ್ತ ಆಹಾರವನ್ನು ಜನರಿಗೆ ನೀಡುವ ಜತೆಗೆ ಅವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಷಾದನೀಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇನ್ನೊಂದೆಡೆ ಸಮಾಜದಲ್ಲಿ ವ್ಯಸನಗಳಿಂದಾಗಿ ಜನ ದಾರಿ ತಪ್ಪುತ್ತಿದ್ದಾರೆ. ಇಂತಹವರಿಗೆ ಮಾರ್ಗದರ್ಶನ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಡುವಲ್ಲಿ ಡಾ.ಹೆಗ್ಗಡೆ ಅವರು ಅಭಿನಂದನಾರ್ಹ ಸಾಧನೆ ಮಾಡಿದ್ದಾರೆ. ಧರ್ಮಸ್ಥಳಕ್ಕೆ ಬರುವ ಯಾತ್ರಿಗಳು ಕೇವಲ ಬಂದು ಹೋಗುವುದಲ್ಲ. ಇಲ್ಲಿಂದ ಕಲಿತು ಬದುಕು ಬದಲಾಯಿಸಿಕೊಂಡು ಜೀವನ ಸುಂದರಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭ ಡಾ.ಹೆಗ್ಗಡೆಯವರ ಬದುಕು-ಸಾಧನೆ ಪರಿಚಯಿಸುವ ಸುವರ್ಣ-ಸಂಚಯ ಪುಸ್ತಕವನ್ನು ಡಾ.ವಿಜಯ ಸಂಕೇಶ್ವರ ಬಿಡುಗಡೆ ಮಾಡಿದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು.

ವೀರೇಂದ್ರ ಹೆಗ್ಗಡೆ ಅವರು ಉತ್ತರ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೆಗ್ಗಡೆಯವರ ಒಳ್ಳೆಯತನವನ್ನು ನಾವೂ ಕಲಿಯಬೇಕು. ಪ್ರಧಾನಿ ಮೋದಿ ಮತ್ತು ಹೆಗ್ಗಡೆ ಅವರ ಅವಿರತ ಕೆಲಸ ನೋಡಿ ಆಶ್ಚರ್ಯವಾಗುತ್ತದೆ.

| ಡಾ.ವಿಜಯ ಸಂಕೇಶ್ವರ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್

ಮಾತುಗಳೇ ಹಿಂಸೆಯಾಗಿರುವ ಕಾಲಘಟ್ಟವಿದು. ವಿದ್ಯುನ್ಮಾನ ಮಾಧ್ಯಮಗಳ ಚರ್ಚೆಯಲ್ಲಿ, ಪತ್ರಿಕೆಗಳ ಲೇಖನಗಳಲ್ಲಿ ಗಮನಿಸಿದರೆ ಹಿಂಸೆ ಕಾಣುತ್ತದೆ. ಆಧುನಿಕ ಪತ್ರಿಕೋದ್ಯಮ ನಮ್ಮ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಳ್ಳುತ್ತಿದೆ. ಪರರ ನಿಂದೆಯಲ್ಲಿ ವಿಕೃತ ಸಂತೋಷ ಪಡೆಯುತ್ತಿದೆ. ಸಾಹಿತ್ಯ ಆ ಹಾದಿಯಲ್ಲಿ ಸಾಗಬಾರದು.

| ಪ್ರೊ.ಟಿ.ಪಿ.ಅಶೋಕ ಹಿರಿಯ ವಿಮರ್ಶಕ

ದೇವರ ದರ್ಶನ ಪಡೆದ ವಿಜಯ ಸಂಕೇಶ್ವರ

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಗುರುವಾರ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಶ್ರೀಮತಿ ಲಲಿತಾ ಸಂಕೇಶ್ವರ, ಕೃಷ್ಣ ಸಿಂಗ್, ಪಾರ್ಶ್ವನಾಥ್, ಪ್ರೊ.ಡಾ.ಜಯಕುಮಾರ್ ಶೆಟ್ಟಿ, ಲಕ್ಷ್ಮೀನಾರಾಯಣ ಮೊದಲಾದವರಿದ್ದರು.

ಸಾಹಿತ್ಯ ಒಲವು ಇರುವವರಲ್ಲಿ ಸಮತೂಕದ ವ್ಯಕ್ತಿತ್ವ

ಹೆಚ್ಚು ಧಾರ್ವಿುಕನಾದವ, ಕಲೆ-ಸಾಹಿತ್ಯ, ವಿಜ್ಞಾನದ ಬಗ್ಗೆ ಹೆಚ್ಚು ಒಲವು ಹೊಂದಿರುವವನಲ್ಲಿ ಸಮತೂಕದ ವ್ಯಕ್ತಿತ್ವ ನಿರ್ವಣಗೊಂಡಿರುತ್ತದೆ. ಅದಕ್ಕಾಗಿ ಧರ್ಮ-ವಿಜ್ಞಾನ- ಸಾಹಿತ್ಯಗಳ ಸಂಗಮ ಮಹತ್ವ ಪಡೆದುಕೊಂಡಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮ ಕೂಡ ಸಾಹಿತ್ಯವನ್ನು ತನ್ನ ಪ್ರಸಾರದ ಮಾಧ್ಯಮವಾಗಿ ಬಳಸಿಕೊಂಡಿತ್ತು ಹಾಗೂ ಸಾಹಿತ್ಯದ ಮೂಲಕ ಧರ್ಮ ಜನರ ಮನೆ ಮನಗಳನ್ನು ಪ್ರವೇಶಿಸಲು ಸಾಧ್ಯವಾಯಿತು ಎಂದರು. ಒಂದು ಮರ ಸೊಗಸಾಗಿ ಕಾಣಲು ಬೇರು ಆಳವಾಗಿ ಹೋಗಿರಬೇಕು. ಆಗ ಅದರಲ್ಲಿ ಹೊಸ ಚಿಗುರು ಮೊಳೆಯುತ್ತದೆ. ಅದೇ ರೀತಿ ಹಿರಿಯರಿಂದ ಬಂದ ತತ್ವಗಳನ್ನು ಇಂದಿನ ಜಗತ್ತಿಗೆ ಹೊಂದಿಸಿಕೊಂಡರೆ ಅದೇ ಧರ್ಮ ಎನಿಸಿಕೊಳ್ಳುತ್ತದೆ. ಅನಾದಿ ಕಾಲದಿಂದ ಬಂದ ಋಷಿಗಳ ದಿಕ್ಕುಗಳನ್ನು ನಮ್ಮ ಇಂದಿನ ವಿಜ್ಞಾನ ಕಲೆಗಳಿಗೆ ಹೊಂದಿಸಿಕೊಂಡರೆ ಜನಜೀವನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಸಂಕೇಶ್ವರ ಸಾಧನೆಗೆ ಶ್ಲಾಘನೆ

ಪತ್ರಿಕೆಗಳು ಸಾಹಿತ್ಯ, ವಿಜ್ಞಾನ ಮತ್ತು ಧರ್ಮದ ಮಧ್ಯೆ ಕೊಂಡಿಯಾಗಿರಬೇಕು. ಡಾ. ವಿಜಯ ಸಂಕೇಶ್ವರ ಅವರು ವಿಜಯವಾಣಿ ಮೂಲಕ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ. ಸದಭಿರುಚಿಯ ಪತ್ರಿಕೆಯನ್ನಾಗಿ ರೂಪಿಸಿದ್ದಾರೆ ಎಂದು ಡಾ.ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು.

ಕೊಡಗಿಗೆ -ಠಿ;10 ಕೋಟಿ

ರಾಜ್ಯದ ಹಲವೆಡೆ ಅತಿವೃಷ್ಟಿ ಆಗಿರುವುದು ಒಂದೆಡೆಯಾದರೆ, 24 ಕಡೆಗಳಲ್ಲಿ ಬರಗಾಲ ಇರುವುದು ಬೇಸರದ ವಿಚಾರ. ನಾವು ಶ್ರೀಕ್ಷೇತ್ರ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಗಿಗೆ 2 ಕೋಟಿ ರೂ. ಅನುದಾನ ನೀಡಿದ್ದು, ಕೊಡಗಿನಲ್ಲಿ ಮನೆಗಳ ಪುನರ್ ನಿರ್ವಣಕ್ಕೆ ಮತ್ತೆ 8 ಕೋಟಿ ರೂ. ನೆರವು ನೀಡಲಾಗುವುದು ಎಂದು ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದರು. ಕೊಡಗಿನಲ್ಲಿ ಹಾನಿಗೀಡಾಗಿರುವ 1044 ಮನೆಗಳ ಮರು ನಿರ್ವಣಕ್ಕೆ ಸಹಕಾರ ನೀಡುತ್ತಿದ್ದೇವೆ. ಕೊಡಗಿಗೆ ಪೂರ್ಣ ನೆರವು ನೀಡುತ್ತಿದ್ದೇವೆ ಎಂದರು.