ವಿವಿ ಕುಲಪತಿ ನೇಮಕ ಶೀಘ್ರ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕ ನವೆಂಬರ್ ಅಂತ್ಯದ ಒಳಗೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಈ ಸಂಬಂಧ ಬೆಂಗಳೂರಿನ ಉನ್ನತ ಶಿಕ್ಷಣ ಆಡಳಿತ ಸೌಧದಲ್ಲಿ ನ.9 ಮತ್ತು 10ರಂದು ಆಯ್ಕೆ ಸಮಿತಿ ಸಭೆ ನಡೆದಿದೆ. ಮುಂದಿನ ಹಾಗೂ ಅಂತಿಮ ಸಭೆ ನ.23ಕ್ಕೆ ಮುಂದೂಡಲಾಗಿದೆ. ಅಂದು ನೂತನ ಕುಲಪತಿಯ ಹೆಸರು ಅಂತಿಮಗೊಳ್ಳಲಿದೆ. ಆ ಬಳಿಕ ಮುಖ್ಯಮಂತ್ರಿಗೆ ಸಲ್ಲಿಕೆಯಾಗಲಿದೆ. ಅಂತಿಮವಾಗಿ ರಾಜ್ಯಪಾಲರು ನೇಮಕ ಆದೇಶ ಹೊರಡಿಸಲಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿದೆ.
ಈ ಹಿಂದಿನ ಕುಲಪತಿ ಕೆ.ಬೈರಪ್ಪ ಅವರ ಆಡಳಿತ ಅವಧಿ 2018 ಜೂನ್‌ನಲ್ಲಿ ಪೂರ್ಣಗೊಂಡಿತ್ತು. ಆ ಬಳಿಕ ಸೇವಾ ಹಿರಿತನದ ಆಧಾರದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಕಿಶೋರ್ ಕುಮಾರ್ ನ.7ರ ತನಕ ಹಂಗಾಮಿ ಕುಲಪತಿಯಾಗಿದ್ದರು. ಪ್ರಸ್ತುತ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಈಶ್ವರ ಪಿ. ಹಂಗಾಮಿ ಕುಲಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆಯ್ಕೆ ಸಮಿತಿ: ತುಮಕೂರು ವಿವಿ ಕುಲಪತಿ ಪ್ರೊ.ತಿಪ್ಪೇಗೌಡ, ಕರ್ನಾಟಕ ರಾಜ್ಯ ಮುಕ್ತ ವಿವಿ ಉಪಕುಲಪತಿ ಪ್ರೊ.ರಾಮೇಗೌಡ, ಜಾನಪದ ವಿವಿ ಉಪಕುಲಪತಿ ಪ್ರೊ.ಡಿ.ಬಿ.ನಾಕ್, ಯುಜಿಸಿ ಪ್ರತಿನಿಧಿ ಪ್ರೊ.ತಿವಾರಿ ಅವರನ್ನೊಳಗೊಂಡ ನಾಲ್ಕು ಮಂದಿ ಸಮಿತಿಯಲ್ಲಿದ್ದಾರೆ.
ಈ ಸಮಿತಿ ಎಲ್ಲ ಆಕಾಂಕ್ಷಿಗಳ ಅರ್ಹತೆಯನ್ನು ಪರಿಶೀಲನೆ ನಡೆಸಿ, ಅಂತಿಮ ಹೆಸರು ಮುಖ್ಯಮಂತ್ರಿಗೆ ಸಲ್ಲಿಕೆಯಾದ ಬಳಿಕ ರಾಜ್ಯಪಾಲರಲ್ಲಿಗೆ ಬರುತ್ತದೆ. ರಾಜ್ಯಪಾಲರು ಪರಿಶೀಲನೆ ನಡೆಸಿ ಅವರಿಗೆ ಸರಿ ಎಂದು ಮನವರಿಕೆಯಾದರೆ ಆಯ್ಕೆ ಮಾಡಿ ಆದೇಶ ಹೊರಡಿಸುತ್ತಾರೆ. ತಿರಸ್ಕೃತ ಮಾಡುವ ಅಧಿಕಾರವನ್ನೂ ರಾಜ್ಯಪಾಲರು ಹೊಂದಿದ್ದಾರೆ. ಇದಕ್ಕೂ ಮೊದಲು ಕುಲಪತಿಯಾಗುವ ಆಕಾಂಕ್ಷಿಗಳು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಅರ್ಜಿ ಸಲ್ಲಿಸಬೇಕು. ಅಲ್ಲಿ ಪಡೆದ ಪದವಿ, ಸೇವಾನುಭವ, ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಯೇ ಮೊದಲಾದ ಅಂಶಗಳನ್ನು ಪರಿಶೀಲನೆ ನಡೆಸುವುದರ ಜತೆಗೆ ಆಂತರಿಕ ವರದಿಯನ್ನು ಸಂಗ್ರಹಿಸಿದ ಬಳಿಕವೇ ಅವರ ಹೆಸರನ್ನು ಆಯ್ಕೆ ಸಮಿತಿಗೆ ಕಳುಹಿಸಲಾಗುತ್ತದೆ.

ರೇಸ್‌ನಲ್ಲಿರುವ ಪ್ರಮುಖರು:  ಮಂಗಳೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಪಿ.ಎಲ್. ಧರ್ಮ, ಪ್ರೊ.ಪಿ.ಎಸ್.ಯಡಪಡಿತ್ತಾಯ, ಪ್ರೊ.ಧರ್ಮಪ್ರಕಾಶ್, ಪ್ರೊ.ನಾರಾಯಣ ಸೇರಿದಂತೆ 13 ಮಂದಿ ಹಾಗೂ ಬೆಂಗಳೂರು ವಿವಿ ರಿಜಿಸ್ಟ್ರಾರ್ ಪ್ರೊ.ರವಿ, ಇನ್ನೋರ್ವ ರಿಜಿಸ್ಟ್ರಾರ್ ಡಾ.ರಾಮಚಂದ್ರ ಗೌಡ ಸೇರಿದಂತೆ ಮೈಸೂರು, ತುಮಕೂರು ವಿಶ್ವವಿದ್ಯಾಲಯಗಳಿಂದಲೂ ಕುಲಪತಿ ಹುದ್ದೆಯ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪ್ರೊ.ಪಿ.ಎಲ್.ಧರ್ಮ ಹಾಗೂ ಪ್ರೊ.ಪಿ.ಎಸ್.ಯಡಪಡಿತ್ತಾಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ವಿಸಿ ಇಲ್ಲದೆ 5 ತಿಂಗಳು: ಉಪಕುಲಪತಿ ಹುದ್ದೆ ತೆರವಾಗಿ ಐದು ತಿಂಗಳಾಗಿದೆ. ಸರ್ಕಾರ ವಿಳಂಬ ಧೋರಣೆ ಅನುಸರಿಸಿದ ಕಾರಣ ಹೊಸ ಕುಲಪತಿ ನೇಮಕ ಮಾಡುವಲ್ಲಿ ವಿಳಂಬವಾಗಿದೆ. ಆದರೆ ಹಂಗಾಮಿ ಕುಲಪತಿ ನೇಮಕ ಮಾಡಿರುವುದರಿಂದ ವಿಶ್ವವಿದ್ಯಾಲಯದ ದೈನಂದಿನ ಕೆಲಸಗಳಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಮಹತ್ವದ ನಿರ್ಧಾರ ಕೈಗೊಳ್ಳಲು ಹಂಗಾಮಿ ಕುಲಪತಿಗಳಿಗೆ ಅವಕಾಶ ಇಲ್ಲ.

ಕರಾವಳಿಯವರೇ ಉಪಕುಲಪತಿ ಆಗಲಿ
ಮಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ 38 ವರ್ಷ ಕಳೆದರೂ ಮಂಗಳೂರು ವಿವಿ ವ್ಯಾಪ್ತಿಯವರು ಈ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿಲ್ಲ. ಪ್ರತಿಬಾರಿ ಮೈಸೂರು ಮೂಲದವರೇ ಕುಲಪತಿಗಳಾಗುತ್ತಿದ್ದಾರೆ. ಮಂಗಳೂರು ವಿವಿಯ ಉಪಕುಲಪತಿ ಹುದ್ದೆಯಲ್ಲಿ ಇದುವರೆಗೆ ಕರ್ತವ್ಯ ನಿರ್ವಹಿಸಿದವರು ಹೊರ ಜಿಲ್ಲೆಯವರೇ. ಈ ಬಾರಿ ಕರಾವಳಿ ಜಿಲ್ಲೆಯ ಅರ್ಹರಿಗೆ ಅವಕಾಶ ಕಲ್ಪಿಸಬೇಕು. ಆಯ್ಕೆ ಸಮಿತಿ ಯಾವುದೇ ಒತ್ತಡಕ್ಕೆ ಮಣಿಯದೆ ಅರ್ಹ ಸಮರ್ಥರನ್ನು ಆಯ್ಕೆ ಮಾಡಬೇಕು. ನಮ್ಮ ನೆಲ, ಜಲ ಮತ್ತು ಸಂಸ್ಕೃತಿಯ ಅರಿವು ಇರುವ ಸಾಂಘಿಕ ನಾಯಕನನ್ನು ಉಪಕುಲಪತಿ ಮಾಡಬೇಕು. ನಮ್ಮಲ್ಲೇ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಜನರ ಸಾಮರ್ಥ್ಯ, ಕೌಶಲ್ಯಗಳನ್ನು ಬಳಸಿಕೊಳ್ಳುವ ದಕ್ಷ ನಾಯಕನ ಅಗತ್ಯವಿದೆ. ವಿದ್ಯಾರ್ಜನೆ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಇತರ ಪ್ರಸಿದ್ದ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ವಿವಿ ಸಾಧನೆ ಕನಿಷ್ಠ. ಈ ಬಗ್ಗೆ ಹೆಚ್ಚಿನ ಒತ್ತು ನೀಡುವ, ಎಲ್ಲ ವರ್ಗದ ಜನರನ್ನು, ಜನ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ, ಪಾರದರ್ಶಕವಾಗಿ ದುಡಿಯುವ ಹುಮ್ಮಸ್ಸಿನ ನಾಯಕ ಉಪಕುಲಪತಿಯಾಗಿ ನೇಮಕ ಆಗಬೇಕಾಗಿದೆ ಎನ್ನುವ ಅಭಿಪ್ರಾಯ ಕರಾವಳಿಯ ಶಿಕ್ಷಣ ಪ್ರೇಮಿಗಳಿಂದ ವ್ಯಕ್ತವಾಗಿದೆ.

 

ಮಂಗಳೂರು ವಿಶ್ವವಿದ್ಯಾಲಯಕ್ಕೆ ಕರಾವಳಿಯ ಶಿಕ್ಷಣ ತಜ್ಞರು ಅಥವಾ ಈ ವಿಶ್ವವಿದ್ಯಾಲಯದ ಅರ್ಹ ಹಳೇ ವಿದ್ಯಾರ್ಥಿಯನ್ನು ಉಪಕುಲಪತಿಯನ್ನಾಗಿ ನೇಮಕ ಮಾಡಬೇಕು. ಆಗ ಮಾತ್ರ ಇಲ್ಲಿನ ಸಮಾಜ, ವಿದ್ಯಾರ್ಥಿಗಳು, ಶಿಕ್ಷಕ ಸಮುದಾಯದ ಬೇಡಿಕೆಗಳಿಗೆ ಸ್ಪಂದನೆ ಸಿಗಲು ಸಾಧ್ಯ. ಮಂಗಳೂರು ಹಳೇ ವಿದ್ಯಾರ್ಥಿ ಸಂಘ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ದಿನೇಶ್ ಕುಮಾರ್ ಆಳ್ವ, ಮಂಗಳೂರು ವಿವಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ