ಅಖಿಲಭಾರತ ವಿವಿ ಅಥ್ಲೆಟಿಕ್ಸ್ ಆತಿಥೇಯ ಮಂಗಳೂರು ವಿವಿ ಮುನ್ನಡೆ

«ಆಳ್ವಾಸ್‌ನ ಪೂನಂ, ಮುಂಬೈಯ ಜಯ್ ಷಾ ನೂತನ ಕೂಟ ದಾಖಲೆ * ಡೆಕತ್ಲಾನ್‌ನಲ್ಲಿ ಆಳ್ವಾಸ್‌ಗೆ ಚಿನ್ನ»

– ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ವಿವಿ 79ನೇ ಅಥ್ಲೆಟಿಕ್ಸ್‌ನ ಮೂರನೇ ದಿನವೂ ಆತಿಥೇಯ ಮಂಗಳೂರು ವಿವಿ ಮುನ್ನಡೆ ಸಾಧಿಸಿದೆ.
ಆತಿಥೇಯ ವಿವಿಯ ಆಳ್ವಾಸ್ ಕ್ರೀಡಾಪಟು ಪೂನಂ ರಾಣಿ ಜಾವೆಲಿನ್ ತ್ರೋ (ಭರ್ಚಿ ಎಸೆತ)ನಲ್ಲಿ ನೂತನ ಕೂಟ ದಾಖಲೆ (53.67 ಮೀಟರ್) ನಿರ್ಮಿಸಿದರು. ಈ ಮೂಲಕ 2013ರಲ್ಲಿ ಸಿಸಿಎಸ್‌ಯು ಮೀರತ್‌ನ ಅನ್ನು ರಾಣಿ(52.64 ಮೀಟರ್) ನಿರ್ಮಿಸಿದ್ದ ದಾಖಲೆ ಹಿಂದಿಕ್ಕಿದ್ದಾರೆ.
ಡೆಕಾತ್ಲಾನ್ ಸ್ಪರ್ಧೆಯಲ್ಲಿ ಆಳ್ವಾಸ್‌ಗೆ ಚಿನ್ನ: ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್‌ನ ಕೃಷ್ಣ ಕುಮಾರ್ ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದರು. ಡೆಕಾತ್ಲಾನ್ ಸ್ಪರ್ಧೆಯಲ್ಲಿ 6906 ಅಂಕ ಗಳಿಸಿದ ಅವರು ಕುರುಕ್ಷೇತ್ರ ವಿವಿಯ ಭರತೀಂದ್ರ ಸಿಂಗ್ (6877 ಅಂಕ) ಹೆಸರಲ್ಲಿದ್ದ ದಾಖಲೆ ಹಿಮ್ಮೆಟ್ಟಿಸಿದರು. ಈ ವಿಭಾಗದಲ್ಲಿ ವಿಕಾಸ್ ಕೌಶಿಕ್(ಕುರುಕ್ಷೇತ್ರ ವಿವಿ- 6525 ಅಂಕ) ಎರಡನೇ ಸ್ಥಾನ ಪಡೆದರೆ, ಅನುಜ್ ಸಾಂಘ್ವಾನ್ (ಪಂಜಾಬಿ ವಿವಿ, ಪಟಿಯಾಲ- 6354 ಅಂಕ) ತೃತೀಯ ಸ್ಥಾನಿಯಾದರು.
ಮುಂಬೈ ವಿವಿಯ ಜಯ್ ಷಾ ಟ್ರಿಪಲ್ ಜಂಪ್‌ನಲ್ಲಿ 16.36 ಮೀಟರ್ ಜಿಗಿದು, 2017ರಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕ್ರೀಡಾಪಟು ಶ್ರೀಜಿತ್ ಮೋಹನ್ ಸ್ಥಾಪಿಸಿದ್ದ 16.05 ಮೀಟ. ದಾಖಲೆಯನ್ನು ಹಿಂದಿಕ್ಕಿದರು. ಭಾನುವಾರ ಮೂರು ಕೂಟ ದಾಖಲೆಗಳಾಗಿದ್ದು, ಮೂರನೇ ದಿನ ಎರಡು ಕೂಟ ದಾಖಲೆಯಾಗುವುದರೊಂದಿಗೆ ಎರಡು ದಿನಗಳಲ್ಲಿ ಒಟ್ಟು ಐದು ಕೂಟ ದಾಖಲೆಯಾಗಿವೆ.
ಆಳ್ವಾಸ್‌ನ ಇಲಕ್ಯಾದಾಸನ್ 100 ಮೀ. ಓಟದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿ ‘ವೇಗದ ಓಟಗಾರ’ ಗೌರವಕ್ಕೆ ಪಾತ್ರರಾಗಿದ್ದರು. ಸೋಮವಾರ ಆಳ್ವಾಸ್‌ನ ಮತ್ತೊಬ್ಬ ಕ್ರೀಡಾಪಟು ದಾಖಲೆ ನಿರ್ಮಿಸುವುದರೊಂದಿಗೆ ಐದು ಕೂಟ ದಾಖಲೆಗಳಲ್ಲಿ ಆಳ್ವಾಸ್ ಕ್ರೀಡಾಪಟುಗಳು ಎರಡು ಹೊಸ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ. 400 ಮೀಟರ್ ಓಟದಲ್ಲಿ ಆಳ್ವಾಸ್‌ನ ರೋಹನ್ ಡಿ.ಕುಮಾರ್ ದ್ವಿತೀಯ ಸ್ಥಾನ ಪಡೆದರು. ಆಳ್ವಾಸ್‌ನ ವನಮ್ ಶರ್ಮ 51.76 ಮೀಟರ್ ಚಕ್ರ ಎಸೆಯುವ ಮುಖೇನ ರಜತ ಪದಕ ತಮ್ಮದಾಗಿಸಿಕೊಂಡರು. ಪ್ರವೀಣ್ ಟ್ರಿಪಲ್ ಜಂಪ್‌ನಲ್ಲಿ 16.05 ಮೀಟರ್ ಜಿಗಿಯುವ ಮೂಲಕ ದ್ವಿತೀಯ ಸ್ಥಾನ ಪಡೆದರು.

ಫಲಿತಾಂಶ ವಿವರ
*ಜಾವೆಲಿನ್ ತ್ರೋ- (ಮಹಿಳೆಯರ ವಿಭಾಗ)
1.ಪೂನಂ ರಾಣಿ- ಮಂಗಳೂರು ವಿವಿ- 53.67 ಮೀ.- ನೂತನ ಕೂಟ ದಾಖಲೆ.
2.ಸಲೋನಿ- ಎಂ.ಜೆ.ಪಿ.ಆರ್. ವಿವಿ, ಬರೇಲಿ- 48.25 ಮೀ.
3.ಪುಷ್ಪ ಜಕಾರ್- ಎಂ.ಇ.ಎಸ್ ವಿವಿ, ಬಿಕನೇರ್- 47.44 ಮೀ.

*ಟ್ರಿಪಲ್ ಜಂಪ್(ಪುರುಷರ ವಿಭಾಗ)
1. ಜಯ್ ಷಾ- ಮುಂಬೈ ವಿವಿ- 16.36 ಮೀಟರ್- ನೂತನ ಕೂಟ ದಾಖಲೆ.
2.ಪ್ರವೀಣ್- ಮಂಗಳೂರು ವಿವಿ- 16.05 ಮೀ.
3.ಜಿ.ಕಿರುಬ- ಅಣ್ಣಾ ವಿವಿ- 15.78 ಮೀ.

*20 ಕಿ.ಮೀ. ನಡಿಗೆ (ಮಹಿಳೆಯರ ವಿಭಾಗ)
1.ರವೀನಾ -ಮಹರ್ಷಿ ದಯಾನಂದ ವಿವಿ, ರೋಹ್ಟಕ್- 1:43:58.64.
2.ಸೋನಲ್ ಸುಖ್‌ವಾಲ್- ಮೋಹನ್‌ಲಾಲ್ ಸುಖಾಡಿಯಾ ವಿವಿ, ಉದಯ್‌ಪುರ್- 1:47:14.53.
3.ಕೆ.ಎಂ.ಪ್ರಿಯಾಂಕಾ- ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ- 1:49:21.85.

*ಡಿಸ್ಕಸ್ ತ್ರೋ (ಪುರುಷರ ವಿಭಾಗ)
1.ಬೆನಕೆ ಕೀರ್ತಿಕುಮ್- ಶಿವಾಜಿ ವಿವಿ- 52.59 ಮೀಟರ್.
2.ವನಮ್ ಶರ್ಮ- ಮಂಗಳೂರು ವಿವಿ- 51.76 ಮೀ.
3.ಪರಮ್‌ಜೀತ್- ಕಳಿಂಗ ವಿವಿ- 49.22 ಮೀ.

*400 ಮೀಟರ್ ಓಟ(ಪುರುಷರ ವಿಭಾಗ)
1.ಆರ್.ರಾಜೇಶ್- ಮದ್ರಾಸ್ ವಿವಿ- 47.68 ಸೆಕೆಂಡ್ಸ್.
2.ರೋಹನ್ ಡಿ.ಕುಮಾರ್- ಮಂಗಳೂರು ವಿವಿ- 48.02 ಸೆಕೆಂಡ್ಸ್.
3.ಕದಮ್ ರಾಹುಲ್- ಮುಂಬೈ ವಿವಿ- 48.12 ಸೆಕೆಂಡ್ಸ್.

*400 ಮೀಟರ್ ಓಟ(ಮಹಿಳೆಯರ ವಿಭಾಗ)
1.ಶಾಲಿನಿ ವಿ.ಕೆ.- ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ- 54.21 ಸೆಕೆಂಡ್ಸ್.
2.ಜೆರಿನ ಜೋಸೆಫ್- ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ- 54.45 ಸೆಕೆಂಡ್ಸ್.
3.ಆರ್.ವಿತ್ಯ- ಭಾರತಿಯಾರ್ ವಿವಿ- 54.48 ಸೆಕೆಂಡ್ಸ್.