ವಿ.ವಿ.ಹಗರಣ 3 ತಿಂಗಳಲ್ಲಿ ತನಿಖೆ

<ಅಧಿವೇಶನದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ>

ಬೆಳಗಾವಿ: ಮಂಗಳೂರು ವಿ.ವಿ.ಯಲ್ಲಿ ನಡೆದಿವೆ ಎನ್ನಲಾದ ಹಗರಣಗಳ ಕುರಿತು ತನಿಖೆ ನಡೆಸಿ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಸಚಿವರು ಮಂಗಳವಾರ ಉತ್ತರಿಸಿದರು.

ಪರೀಕ್ಷಾ ನಿರ್ವಹಣೆ ಗುತ್ತಿಗೆ, ಸೋಲಾರ್ ಉಪಕರಣ, ಕಂಪ್ಯೂಟರ್ ಹಾಗೂ ಸಿಸಿ ಟಿವಿ ಖರೀದಿ, ಅಕ್ರಮ ನೇಮಕಾತಿ ಬಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಕ್ರಮದ ಆರೋಪ ಮಾಡಿದೆ. ಅದರ ಬಗ್ಗೆ ವಿ.ವಿಯಿಂದ ವರದಿ ಪಡೆಯಲಾಗಿದೆ. ಆದರೆ, ಆರೋಪ ಬಗ್ಗೆ ಲಿಖಿತ ದೂರು ಬಂದಿಲ್ಲ ಎಂದರು. ಮಧ್ಯಪ್ರವೇಶ ಮಾಡಿದ ಬಿಜೆಪಿ ಶಾಸಕ ಸಿ.ಟಿ.ರವಿ, ವಿವಿ ಮೇಲಿರುವ ಆರೋಪದ ಬಗ್ಗೆ 3ನೇ ವ್ಯಕ್ತಿಯಿಂದ ವರದಿ ಪಡೆಯಬೇಕು ಎಂದು ಆಗ್ರಹಿಸಿದರು. ಆಗ ಸಭಾಧ್ಯಕ್ಷರು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ವಿ.ವಿ ಮೇಲಿರುವ ಆರೋಪದ ಬಗ್ಗೆ ಯಾವ ರೀತಿ ವಿಚಾರಣೆಗೆ ಒಳಪಡಿಸಬೇಕು. ಕಾನೂನಿನಲ್ಲಿ ಯಾವ ರೀತಿ ಅವಕಾಶಗಳಿವೆ ಎಂಬುದನ್ನು ಸಮಾಲೋಚಿಸಿ ಎಂದು ಸಲಹೆ ನೀಡಿದರು.

ಮಂಗಳೂರು, ಉಡುಪಿ, ಒಲಾ, ಉಬರ್ ಸೇವೆಗೆ ತಡೆ: ಮಂಗಳೂರು, ಉಡುಪಿಯಲ್ಲಿ ಒಲಾ, ಉಬರ್ ಕಂಪನಿ ಟ್ಯಾಕ್ಸಿ ಸೇವೆಗೆ ಕೋರ್ಟ್ ತೀರ್ಪಿನ ಅನ್ವಯ ತಡೆ ನೀಡಿರುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ವಿಧಾನಸಭೆಯಲ್ಲಿ ಶೂನ್ಯ ವೇಳೆ ಬಿಜೆಪಿಯ ರಘುಪತಿ ಭಟ್ ವಿಷಯ ಪ್ರಸ್ತಾಪಿಸಿ, ಒಲಾ, ಉಬರ್ ಕಂಪನಿ 2016ರ ಜೂನ್ 20 ರಂದು ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆ ಒದಗಿಸಲು 50 ಸಾವಿರ ಠೇವಣಿ ಇಟ್ಟು ಅನುಮತಿ ಪಡೆದುಕೊಂಡಿದೆ. ಇನ್ನು ಬೇರೆ ಯಾವುದೇ ನಗರದಲ್ಲಿ ಸೇವೆ ಒದಗಿಸಬೇಕಾದರೂ ಸ್ಥಳೀಯ ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಆದರೆ ಮಂಗಳೂರು, ಉಡುಪಿ ನಗರಗಳಲ್ಲಿ ಅನುಮತಿ ಪಡೆಯದೆ ಸೇವೆ ಆರಂಭಿಸಲು ಮುಂದಾಗಿದೆ. ಬೆಂಗಳೂರಿಗೆ ಪಡೆದ ಅನುಮತಿಯನ್ನೇ ವಿಸ್ತರಣೆ ಮಾಡಲಾಗುತ್ತಿದೆ.

ಸ್ಥಳೀಯ ಟ್ಯಾಕ್ಸಿ ಚಾಲಕರು ಒಲಾ, ಉಬರ್ ಕಂಪನಿ ಸೇವೆ ವಿರೋಧಿಸಿ ಪ್ರತಿಭಟಿಸಿದ್ದಾರೆ. ನ್ಯಾಯಾಲಯ ಕೂಡ ಇದಕ್ಕೆ ತಡೆಯಾಜ್ಞೆ ನೀಡಿದೆ ಎಂದು ಗಮನ ಸೆಳೆದರು. ಆಗ ಉತ್ತರಿಸಿದ ಸಚಿವರು, ನ್ಯಾಯಾಲಯದ ತಡೆಯಾಜ್ಞೆ ಇದೆ. ವಿವಾದ ಇತ್ಯರ್ಥವಾಗುವವರೆಗೂ ಟ್ಯಾಕ್ಸಿ ಸೇವೆ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *