ಪದವಿಗೂ ಆಯ್ಕೆ ಆಧರಿತ ಶ್ರೇಯಾಂಕ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿಗೆ ಅಳವಡಿಸಲಾಗಿರುವ ಆಯ್ಕೆ ಆಧರಿತ ಶ್ರೇಯಾಂಕ ಪದ್ಧತಿಯನ್ನು(ಸಿಬಿಸಿಎಸ್)ಮುಂದಿನ ಶೈಕ್ಷಣಿಕ ಸಾಲಿನಿಂದ ಪದವಿ ಮಟ್ಟದಲ್ಲೂ ಅಳವಡಿಸಲು ವಿವಿ ಮುಂದಾಗಿದೆ ಎಂದು ಕುಲಸಚಿವ ಡಾ.ಎ.ಎಂ.ಖಾನ್ ಮಾಹಿತಿ ನೀಡಿದರು.
ಮಂಗಳೂರು ವಿವಿ ಹೊಸ ಸೆನೆಟ್ ಸದನದಲ್ಲಿ 2018-19ರ ಸಾಲಿನ ಶೈಕ್ಷಣಿಕ ಮಂಡಳಿಯ ದ್ವಿತೀಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಮಂಗಳೂರು ವಿವಿಯಲ್ಲಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ಸೂಚನೆ ಪ್ರಕಾರ 2019-20ರ ಸಾಲಿನಿಂದ ಪದವಿ ಮಟ್ಟದಲ್ಲಿ ಬಿ.ಎಡ್, ಬಿ.ಎ.ಎಸ್.ಎಲ್.ಪಿ.ಬಿ.ಎಚ್.ಎಂ, ಹೊರತುಪಡಿಸಿ ಇತರ ಎಲ್ಲ ಕಾರ್ಯಕ್ರಮಗಳಿಗೆ ಆಯ್ಕೆ ಆಧರಿತ ಶ್ರೇಯಾಂಕ ಪದ್ಧತಿ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದರು.

ಅಭಿಪ್ರಾಯ ಕ್ರೋಡೀಕರಣ: ನೂತನ ಪರಿನಿಯಮಕ್ಕೆ ಪ್ರೊ.ಜೆ.ಈಶ್ವರ ಭಟ್ ಅಧ್ಯಕ್ಷತೆಯ ಸಮಿತಿಯಲ್ಲಿ ವಿವಿಗಳ ಅನುದಾನ ಆಯೋಗದ ಮಾರ್ಗಸೂಚಿಗಳ ಪ್ರಕಾರ ವಿನಿಮಯ ತಯಾರಿಸಿದ್ದು, ಸೆ.15ರಂದು ಕಾರ್ಯಾಗಾರ ನಡೆಸಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಹಾಗೂ ಪದವಿ ಮಟ್ಟದ ಅಧ್ಯಯನ ಮಂಡಳಿಗಳ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ. ಕಾರ್ಯಾಗಾರದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ವಿನಿಮಯದಲ್ಲಿ ವಿಜ್ಞಾನ ವಿಷಯದ ವ್ಯಾಪ್ತಿಯಲ್ಲಿ ಬರುವ ಪದವಿಗಳಿಗೆ ಪದವಿಪೂರ್ವ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿ ನಿಗದಿಪಡಿಸಲಾಗಿದೆ ಎಂದರು.
ಆಯ್ಕೆ ಆಧರಿತ ಶ್ರೇಯಾಂಕ ಪದ್ಧತಿ ಬಗ್ಗೆ ತಯಾರಿಸಲಾದ ಮಾರ್ಗಸೂಚಿ ಬಗ್ಗೆ ಪ್ರೊ.ಜೆ.ಈಶ್ವರ್ ಭಟ್ ವಿವರ ನೀಡಿದರು.
ವಿವಿಯ ಪ್ರಭಾರ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ.ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ರವೀಂದ್ರಾಚಾರಿ ಹಾಗೂ ಹಣಕಾಸು ಅಧಿಕಾರಿ ದಯಾನಂದ ನಾಯಕ್ ಉಪಸ್ಥಿತರಿದ್ದರು.

ಮುಂದಿನ ವರ್ಷ ಪದವಿ ಶಿರೋನಾಮೆ ಬದಲಾವಣೆ:  ಮಂಗಳೂರು ವಿವಿಯಲ್ಲಿ ಬಿ.ಎ(ಎಚ್‌ಆರ್‌ಡಿ) ಮಾಡಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಬಂದಾಗ ಎಂಕಾಂ(ಎಚ್‌ಆರ್‌ಡಿ) ಸೀಟಿಗಾಗಿ ಬೇಡಿಕೆ ಸಲ್ಲಿಸುತ್ತಾರೆ. ವಾಸ್ತವದಲ್ಲಿ ಬಿಎ ಪದವಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕಲಿಯದೆ ಎಂಕಾಂ(ಬಿ.ಎ ಎಚ್‌ಆರ್‌ಡಿ)ಗೆ ಬಂದಾಗ ತೊಂದರೆಯಾಗಲಿದೆ. ಮಂಗಳೂರು ವಿವಿಯಲ್ಲಿ ಬಿಎ(ಎಚ್‌ಆರ್‌ಡಿ) ಅಧ್ಯಯನ ಮಾಡಿದರೂ ಎಂಎ(ಎಚ್‌ಆರ್‌ಡಿ) ಕಲಿಯಲು ಅವಕಾಶ ಇಲ್ಲ. ಹಾಗಾಗಿ ಯಜಿಸಿ ನಿಯಮದಂತೆ ಮುಂದುವರಿಯಲು ಶಿರೋನಾಮೆ ಬದಲಾವಣೆ ಕಾರ್ಯ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅನುಷ್ಠಾನಕ್ಕೆ ಬರಲಿದೆ. ಯುಜಿಸಿ ನಿಯಮದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯ ವಾಣಿಜ್ಯ ವಿಭಾಗದಡಿ ಬರುವುದರಿಂದ ಈಗಿರುವ ಬಿಎ(ಎಚ್‌ಆರ್‌ಡಿ) ಶೀರ್ಷಿಕೆಯನ್ನು ಬಿಕಾಂ(ಎಚ್‌ಆರ್‌ಡಿ) ಎಂದು ಬದಲಿಸಬೇಕಿದೆ ಎಂದು ಡಾ.ಎ.ಎಂ.ಖಾನ್ ಹೇಳಿದರು.

ಅನುಮೋದನೆಗೊಂಡ ಇತರ ವಿಷಯಗಳು:  ಮಂಗಳೂರು ವಿವಿಯಲ್ಲಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ಸೂಚನೆ ಪ್ರಕಾರ 2019-20ರ ಸಾಲಿನಿಂದ ಪದವಿ ಮಟ್ಟದಲ್ಲಿ ಬಿ.ಎಡ್, ಬಿ.ಎ.ಎಸ್.ಎಲ್.ಪಿ.ಬಿ.ಎಚ್.ಎಂ, ಹೊರತು ಪಡಿಸಿ ಇತರ ಎಲ್ಲ ಕಾರ್ಯಕ್ರಮಗಳಿಗೆ ಆಯ್ಕೆ ಆಧರಿತ ಶ್ರೇಯಾಂಕ ಪದ್ಧತಿ ಜಾರಿಗೆ ತರಲು ಹಾಗೂ ಹೆಚ್ಚುವರಿ ಬೋಧನಾವಧಿಯನ್ನು ಅಧ್ಯಾಪಕರ ಕಾರ್ಯಭಾರದೊಂದಿಗೆ ಸೇರ್ಪಡೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ 2007-08ರ ಶೈಕ್ಷಣಿಕ ಸಾಲಿನಲ್ಲಿ ನೀಡಲಾದ ಸ್ವಾಯತ್ತ ಸ್ಥಾನಮಾನ ಮುಂದುವರಿಕೆ, ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿಗೆ 2007-08ರ ಶೈಕ್ಷಣಿಕ ಸಾಲಿನಲ್ಲಿ ನೀಡಲಾದ ಸ್ವಾಯತ್ತ ಸ್ಥಾನಮಾನ ಮುಂದುವರಿಕೆ, ಮಂಗಳೂರಿನ ಸಂತ ಆವ್ಯನ್ಸ್ ಕಾಲೇಜ್ ಆಫ್ ಎಜುಕೇಶನ್‌ಗೆ 2007-08ರ ಶೈಕ್ಷಣಿಕ ಸಾಲಿನಲ್ಲಿ ನೀಡಲಾದ ಸ್ವಾಯತ್ತ ಸ್ಥಾನಮಾನ ಮುಂದುವರಿಕೆ, ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 2019-20ರ ಸಾಲಿನಲ್ಲಿ ಎಂಎಸ್ಸಿ ರಸಾಯನ ಶಾಸ್ತ್ರ ಕೋರ್ಸ್ ಸಂಯೋಜನೆಗೆ ಅನುಮೋದನೆ, ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿಗೆ 2018-19ರ ಸಾಲಿನಿಂದ ಎಂಎಸ್ಸಿ ಸೈಕಾಲಜಿ ಕೋರ್ಸಿಗೆ ಹೆಚ್ಚುವರಿ ವಿದ್ಯಾರ್ಥಿ ಪರಿಮಿತಿಗೆ ಮಂಜೂರು, ಮಂಗಳೂರು ವಿವಿಯಲ್ಲಿ ನೆಹರು ಚಿಂತನಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದ ಪರಿನಿಯಯಮದಲ್ಲಿ ಕೆಲ ಬದಲಾವಣೆ, ಮಂಗಳೂರು ವಿವಿಯ ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲಯದಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹುದ್ದೆಗಳ ಸೃಸೃಜನೆಗೆ ಸಂಬಂಧಿಸಿ ಪರಿನಿಯಮ ತಿದ್ದುಪಡಿ ಹಾಗೂ ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲಯದ ಹೆಸರನ್ನು ‘ದೂರ ಶಿಕ್ಷಣ ಕೇಂದ್ರ’ ಎಂದು ಶೀರ್ಷಿಕೆ ಬದಲಾವಣೆ.