ಮಂಗಳೂರಲ್ಲಿ ಅರೆಬರೆ ಕಾಮಗಾರಿ

ಪಿ.ಬಿ.ಹರೀಶ್ ರೈ ಮಂಗಳೂರು

ನಗರದಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಫುಟ್‌ಪಾತ್ ನಿರ್ಮಾಣ, ಒಳಚರಂಡಿ ಅಭಿವೃದ್ಧಿ… ಹೀಗೆ ಯಾವುದೇ ಕಾಮಗಾರಿ ಇದ್ದರೂ ಮಳೆಗಾಲಕ್ಕೆ ಮುನ್ನ ಮುಗಿಸುವುದು ಕ್ರಮ. ಆದರೆ ಮಂಗಳೂರು ಮಹಾನಗರ ಪಾಲಿಕೆ ಎಚ್ಚರಗೊಳ್ಳುವುದೇ ಮಳೆಗಾಲ ಶುರುವಾದ ಬಳಿಕ…

ಪ್ರಸ್ತುತ ಒಂದೆಡೆ ಸುರಿಯುವ ಮಳೆ, ಇನ್ನೊಂದೆಡೆ ಅರೆಬರೆ ಕಾಮಗಾರಿಗಳು. ಪಾಲಿಕೆಯ ಈ ಪ್ರವೃತ್ತಿಯಿಂದ ನಗರದ ಕೆಲವು ಪ್ರದೇಶದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಲಾಲ್‌ಬಾಗ್, ಲೇಡಿಹಿಲ್, ಜೈಲ್ ರೋಡ್, ಅಳಕೆ, ಉರ್ವಮಾರ್ಕೆಟ್ ರೋಡ್..ಹೀಗೆ ನಗರದಲ್ಲಿ ಹತ್ತಾರು ಕಡೆ ಫುಟ್‌ಪಾತ್ ಹಾಗೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಬದಿ ಮಣ್ಣು, ಮರಳು ರಾಶಿ ಬಿದ್ದಿದ್ದು ಮಳೆ ನೀರಿಗೆ ಚರಂಡಿ ಪಾಲಾಗುತ್ತಿದೆ. ಕೆಲವು ಕಡೆ ಫುಟ್‌ಪಾತ್ ಕಾಮಗಾರಿ ಅಪೂರ್ಣವಾಗಿದ್ದು ಇಲ್ಲಿ ನಡೆದಾಡುವುದು ಕೂಡ ಅಪಾಯಕಾರಿ.

ಅವೈಜ್ಞಾನಿಕ ಕಾಮಗಾರಿ:  ಲಾಲ್‌ಬಾಗ್‌ನಲ್ಲಿ ಅವೈಜ್ಞಾನಿಕವಾಗಿ ನಡೆದ ಫುಟ್‌ಪಾತ್ ಕಾಮಗಾರಿ ಇನ್ನೂ ಸರಿಪಡಿಸಲಾಗಿಲ್ಲ. ಇಲ್ಲಿ ಕಾಂಕ್ರೀಟ್ ರಸ್ತೆ ಎತ್ತರವಾಗಿದ್ದು ಬದಿಯಲ್ಲಿ ಒಂದು ಅಡಿಯಷ್ಟು ತಗ್ಗು ಇದೆ. ಭಾರಿ ವಾಹನಗಳಿಗೆ ಹಾದಿ ನೀಡಲು ದ್ವಿಚಕ್ರ ಸವಾರರು ಬದಿಗೆ ಸರಿದರೆ ಹೊಂಡಕ್ಕೆ ಬೀಳುವ ಅಪಾಯ. ಫುಟ್‌ಪಾತ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅವೈಜ್ಞಾನಿಕ ಫುಟ್‌ಪಾತ್ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರ ಪರಿಣಾಮ ಸಿಗ್ನಲ್ ಕಂಬ ಅಳವಡಿಸಿದ ವೃತ್ತವನ್ನು ಎರಡು ಕಡೆ ಅಗೆಯಲಾಗಿದೆ. ಅದರ ದುರಸ್ತಿ ಕಾರ್ಯವೂ ನಡೆದಿಲ್ಲ.

ಕಾಂಕ್ರೀಟ್ ಅಗೆತ
12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನ್ಯೂಚಿತ್ರಾ- ಮಣ್ಣಗುಡ್ಡೆ ಕಾಂಕ್ರೀಟ್ ರಸ್ತೆ ಉದ್ಘಾಟನೆಗೊಂಡು ಒಂದು ವರ್ಷವಾಗಿಲ್ಲ. ಈಗ ಇಡೀ ರಸ್ತೆಯನ್ನು ಅಲ್ಲಲ್ಲಿ ಕೊರೆಯಲಾಗುತ್ತಿದೆ. ಲೇಡಿಹಿಲ್ ಬಳಿ ಫುಟ್‌ಪಾತ್ ಕಾಮಗಾರಿ ನಡೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಕಡೆ ಮಳೆಯಲ್ಲೇ ಕಾಮಗಾರಿ ನಡೆಯುತ್ತಿದೆ. ನ್ಯೂ ಚಿತ್ರಾ-ಬಂದರು ರಸ್ತೆ, ಹ್ಯಾಟ್‌ಹಿಲ್ ರಸ್ತೆ, ಕುದ್ರೋಳಿ, ಬಂದರು ಮುಂತಾದ ಪ್ರದೇಶಗಳ ಒಳರಸ್ತೆಗಳು ಸಕಾಲದಲ್ಲಿ ದುರಸ್ತಿ ಕಾಣದೆ ಈಗ ಸಂಚಾರಕ್ಕೆ ಆಯೋಗ್ಯವಾಗಿವೆ.

ಲಾಲ್‌ಬಾಗ್ ಬಳಿ ಎಡ ಭಾಗದಿಂದ ವಾಹನಗಳ ನೇರ ಸಂಚಾರ ಹಾಗೂ ಫುಟ್‌ಪಾತ್ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎನ್‌ಐಟಿಕೆ ತಂಡವೊಂದು ಆಗಮಿಸಿ ಪರಿಶೀಲನೆ ನಡೆಸಿದೆ. 3-4 ದಿನಗಳಲ್ಲಿ ಅವರು ವರದಿ ನೀಡಬಹುದು. ವರದಿ ಆಧಾರದಲ್ಲಿ ಮುಂದಿನ ಕಾಮಗಾರಿ ನಡೆಯಲಿದೆ. 2-3ವಾರದಲ್ಲಿ ಕಾಮಗಾರಿ ಮುಗಿಯಲಿದೆ.
ಗುರುರಾಜ ಮರಳಹಳ್ಳಿ, ಇಇ, ಮನಪಾ

ಲೇಡಿಹಿಲ್ ಬಳಿ ರಸ್ತೆ ಬದಿ ಇರುವ ಮಣ್ಣು, ಮರಳು, ಜಲ್ಲಿ ಕಲ್ಲು ಶೀಘ್ರ ತೆರವುಗೊಳಿಸಲಾಗುವುದು. ಜೋರು ಮಳೆಗೆ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ. ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ಈಗ ಅಂತಿಮ ಹಂತದಲ್ಲಿದೆ. ಒಳರಸ್ತೆಗಳನ್ನು ತಾತ್ಕಾಲಿಕ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಮಳೆಗಾಲದ ಮುಗಿದ ಬಳಿಕ ಡಾಂಬರು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಲಿಂಗೇಗೌಡ, ಇಇ, ಮನಪಾ

Leave a Reply

Your email address will not be published. Required fields are marked *