ಮಂಗಳೂರು ಪೊಲೀಸ್ ಕಮಿಷನರ್, ಉಡುಪಿ ಎಸ್‌ಪಿ ವರ್ಗ

ಮಂಗಳೂರು/ಉಡುಪಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಧಿಕಾರಿಗಳ ವರ್ಗಾವರ್ಗಿ ಮುಂದುವರಿದಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ನೂತನ ಆಯುಕ್ತರಾಗಿ ಸಂದೀಪ್ ಪಾಟೀಲ್ ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಸಂದೀಪ್ ಪಾಟೀಲ್ 2004ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ದಾವಣಗೆರೆ, ಬೆಳಗಾವಿ, ಮಂಡ್ಯ ಮೊದಲಾದ ಕಡೆ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಡಿಐಜಿ ಹುದ್ದೆಗೆ ಬಡ್ತಿ ಹೊಂದಿದ್ದರು. ಪ್ರಸ್ತುತ ಬೆಂಗಳೂರು ಸಿಎಆರ್ ಘಟಕದಲ್ಲಿ ಡಿಐಜಿ ಹಾಗೂ ಜಂಟಿ ಆಯುಕ್ತರಾಗಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.

2017ರ ಜೂನ್ 12ರಂದು ಟಿ.ಆರ್.ಸುರೇಶ್ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಎಂ.ಚಂದ್ರಶೇಖರ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು.

ಉಡುಪಿಗೆ ನಿಶಾ ಜೇಮ್ಸ್ ಎಸ್‌ಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ.ನಿಂಬರಗಿ ಅವರನ್ನು ಬೆಂಗಳೂರು ನಿಸ್ತಂತು ವಿಭಾಗ (ವೈರ್‌ಲೆಸ್) ಎಸ್‌ಪಿಯನ್ನಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ನೂತನ ಎಸ್‌ಪಿಯಾಗಿ ಬೆಂಗಳೂರು ರಾಜ್ಯ ಸಶಸ್ತ್ರ ಮೀಸಲು ಪಡೆಯ ಕಮಾಂಡೆಂಟ್ ಆಗಿದ್ದ ನಿಶಾ ಜೇಮ್ಸ್ ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ.

ನಿಶಾ ಜೇಮ್ಸ್ 2013ರ ಐಪಿಎಸ್ ಬ್ಯಾಚ್‌ನ ಅಧಿಕಾರಿಯಾಗಿದ್ದಾರೆ. 2012ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ನಿಶಾ 179ನೇ ರ‌್ಯಾಂಕ್ ಪಡೆದು ಕರ್ನಾಟಕ ಕೇಡರ್‌ಗೆ ನಿಯುಕ್ತಿಗೊಂಡಿದ್ದರು. ಕೇರಳ ಮೂಲದ ಇವರು ದೆಹಲಿ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿದ್ದಾರೆ. ತಂದೆ ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದು, ತಾಯಿ ಆರೋಗ್ಯ ಇಲಾಖೆ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಡಾ.ಅನೂಪ್ ಶೆಟ್ಟಿ ಕೂಡ ಐಪಿಎಸ್ ಅಧಿಕಾರಿ. ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಲ್ಲಿ ಎಎಸ್‌ಪಿ ಆಗಿದ್ದ ನಿಶಾ ಬೆಂಗಳೂರು ಗುಪ್ತಚರ, ರಾಯಚೂರು ಎಸ್‌ಪಿಯಾಗಿ ಕಾರ್ಯನಿರ್ವಹಿಸಿ ಕೆಎಸ್‌ಆರ್‌ಪಿ ಕಮಾಂಡೆಂಟ್ ಹುದ್ದೆಗೆ ವರ್ಗಗೊಂಡಿದ್ದರು.

ಲಕ್ಷ್ಮಣ ಬಿ.ನಿಂಬರಗಿ ಎಸ್‌ಪಿಯಾಗಿ 2018 ಜ.1ರಂದು ಅಧಿಕಾರ ಸ್ವೀಕರಿಸಿದ್ದರು. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ, ಅಪರಾಧ ಪತ್ತೆ ಕಾರ್ಯಾಚರಣೆ ಚಾಕಚಕ್ಯತೆೆಯಿಂದ ನಿರ್ವಹಿಸಿದ್ದರು. ಅಕ್ರಮ ಮದ್ಯ, ಜುಗಾರಿ, ಗಾಂಜಾ ಸೇವನೆ, ಅಕ್ರಮ ಮರಳುಗಾರಿಕೆ, ಗಣಿಗಾರಿಕೆಗಳಿಗೆ ಸ್ವಲ್ಪಮಟ್ಟಿಗೆ ಬ್ರೇಕ್ ಬಿದ್ದಿತ್ತು. ಶಿರೂರು ಸ್ವಾಮೀಜಿ, ಹುಸೇನಬ್ಬ ಸಾವು ಪ್ರಕರಣ, ಕೋಟ ಅವಳಿ ಕೊಲೆ ಕೇಸ್‌ನಂತಹ ಹೈ ಪ್ರೊಫೈಲ್, ಅತೀ ಸೂಕ್ಷ್ಮ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಅವರು ಕಳೆದ ವರ್ಷ ತೈಲಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರ ವೇಳೆ ಕಾಂಗ್ರೆಸ್ -ಬಿಜೆಪಿ ಗುಂಪುಗಳ ನಡುವಿನ ಗಲಾಟೆ ನಿಯಂತ್ರಿಸಲು ಸ್ವತಃ ಲಾಠಿ ಕೈಗೆತ್ತಿಕೊಂಡಿದ್ದರು. ಹಲವು ಪ್ರಕರಣಗಳಲ್ಲಿ ಪೊಲೀಸರ ವಿರುದ್ಧವೂ ಕಠಿಣ ಕ್ರಮ ಕೈಗೊಂಡು, ಜೈಲಿಗಟ್ಟಿದ್ದರು.

ಆಡಳಿತದಲ್ಲಿ ಉಡುಪಿ ಮಹಿಳಾ ಸಾಮ್ರಾಜ್ಯ!: ಉಡುಪಿ ಎಸ್‌ಪಿಯಾಗಿ ನಿಶಾ ಜೇಮ್ಸ್ ನೇಮಕಗೊಳ್ಳುವ ಮೂಲಕ ಉಡುಪಿ ಜಿಲ್ಲೆ ಆಡಳಿತ ಸಂಪೂರ್ಣ ಮಹಿಳಾ ಪಾರಮ್ಯ ಸಾಧಿಸಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ಇದ್ದಾರೆ. ರಾಜಕೀಯ, ಆಡಳಿತಾತ್ಮಕ ವಿಭಾಗದಲ್ಲಿ ಮಹಿಳೆಯರೇ ಪ್ರಮುಖ ಸ್ಥಾನಗಳಿಗೆ ಬಂದಿರುವುದು ವಿಶೇಷ. ಉಡುಪಿ ಜಿಲ್ಲೆ ಸಂಪೂರ್ಣ ಮಹಿಳಾ ಆಡಳಿತಕ್ಕೆ ಒಳಪಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ಬಹುಚರ್ಚಿತ ವಿಷಯ.