ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಳಿಗೆಗೆ ದಾಳಿ

ಮಂಗಳೂರು: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ನಡೆಸುತ್ತಿದ್ದ ವ್ಯಾಪಾರ ಮಳಿಗೆಗಳಿಗೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಸುಮಾರು 425 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದೆ.

ಪಾಲಿಕೆ ಉಪಆಯುಕ್ತೆ(ಕಂದಾಯ) ಗಾಯತ್ರಿ ನಾಯಕ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪರಿಸರ ಇಂಜಿನಿಯರ್ ಮಧು ಎಸ್., ಆರೋಗ್ಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ ಮುಂತಾದವರು ಭಾಗವಹಿಸಿದರು.
ನಗರದ ಬೀಬಿ ಅಲಾಬಿ ರಸ್ತೆ, ಮೈದಾನ್ ಕ್ರಾಸ್, ಸೆಂಟ್ರಲ್‌ಮಾರ್ಕೆಟ್ ಮುಂತಾದ ಕಡೆ ವ್ಯಾಪಾರ ಮಳಿಗೆಗಳಿಗೆ ಅಧಿಕಾರಿಗಳು ದಾಳಿ ನಡೆಸಿದರು. ಮೂರು ಮಳಿಗೆಗಳಲ್ಲಿ ಅಪಾರ ಪ್ರಮಾಣದಲ್ಲಿ ಇತರ ಮಳಿಗೆಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಪ್ಲಾಸ್ಟಿಕ್‌ವಸ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಪ್ಲಾಸ್ಟಿಕ್ ಕಪ್, ಪ್ಲೇಟ್, ಬ್ಯಾಗ್ ಮುಂತಾದ ವಸ್ತುಗಳು ಸೇರಿವೆ ಎಂದು ಗಾಯತ್ರಿ ನಾಯಕ್ ದಾಳಿ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಕಠಿಣ ಕ್ರಮಕ್ಕೆ ಸೂಚನೆ: ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ನಡೆಸುತ್ತಿದ್ದ ವ್ಯಾಪಾರ ಮಳಿಗೆ ಹಾಗೂ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ದಂಡ ಪಾವತಿ ಬಳಿಕವೂ ಅನಧಿಕೃತ ವ್ಯಾಪಾರ ನಡೆಸುವ ವ್ಯಕ್ತಿಗಳ ಉದ್ಯಮ ಪರವಾನಗಿ ರದ್ದು ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದವರು ಹೇಳಿದರು.

ಕೆಲ ಉತ್ಪನ್ನಗಳಿಗೆ ವಿನಾಯಿತಿ: ವಿಶೇಷ ಆರ್ಥಿಕ ವಲಯ(ಎಸ್‌ಇಝೆಡ್) ಮತ್ತು ರಫ್ತು ಉದ್ದೇಶಿತ ಘಟಕಗಳಲ್ಲಿ ಸ್ಥಾಪಿಸಲಾದ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನಾ ಘಟಕದಲ್ಲಿ ರಫ್ತು ಮಾಡುವ ಉದ್ದೇಶದಿಂದ ಹಾಗೂ ರಫ್ತು ಬೇಡಿಕೆ ಆಧರಿಸಿ ಉತ್ಪಾದಿಸಲಾಗುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ವಿನಾಯಿತಿ ಒದಗಿಸಲಾಗಿದೆ. ಆದರೆ ಮಾರ್ಗಸೂಚಿ ಪಾಲಿಸದ ಕಂಪನಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಲ್ಲ ಭಾಗಗಳಲ್ಲಿ ಕಾರ್ಯಾಚರಣೆ: ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಸಂಬಂಧಿಸಿ ಪಾಲಿಕೆ ಅಧಿಕಾರಿಗಳ ತಂಡದ ಕಾರ್ಯಾಚರಣೆ ವಿವಿಧ ಗುಂಪುಗಳಾಗಿ ಪಾಲಿಕೆಯ ಎಲ್ಲ ಭಾಗಗಳಲ್ಲಿ ನಡೆಯಲಿದೆ ಎಂದು ಕಚೇರಿ ಮೂಲ ತಿಳಿಸಿದೆ. ಪ್ಲಾಸ್ಟಿಕ್ ಉತ್ಪನ್ನಗಳ ಸಂಪೂರ್ಣ ನಿಷೇಧ ಸಂಬಂಧಿಸಿ ಪಾಲಿಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಬಗ್ಗೆ ‘ವಿಜಯವಾಣಿ’ ಜೂ.25ರಂದು ವಿಶೇಷ ವರದಿ’ ಪ್ರಕಟಿಸಿತ್ತು.

Leave a Reply

Your email address will not be published. Required fields are marked *