ಕಂಬಳ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಅಬ್ದುಲ್ ನಜೀರ್

ವಿಜಯವಾಣಿ ಸುದ್ದಿಜಾಲ ನವದೆಹಲಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಆಚರಣೆಗೆ ಅನುಮತಿ ನೀಡುವ ರಾಜ್ಯ ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾ.ಅಬ್ದುಲ್ ನಜೀರ್ ಹಿಂದೆ ಸರಿದಿದ್ದಾರೆ.
ಪ್ರಾಣಿಹಿಂಸೆ ಮಾಡುವ ಕಂಬಳಕ್ಕೆ ಅನುಮತಿ ನೀಡಿರುವುದು ಆಕ್ಷೇಪಾರ್ಹ. ಈ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಪೇಟಾ ಸುಪ್ರೀಂಕೋಟ್‌ಗೆ ಅರ್ಜಿ ಸಲ್ಲಿಸಿತ್ತು. ಸೋಮವಾರಕ್ಕೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಆದರೆ ವಿಚಾರಣೆಗೆ ಹಿಂದೇಟು ಹಾಕಿದ ನ್ಯಾ. ನಜೀರ್, ಈ ಹಿಂದೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಾನು ಕಂಬಳಕ್ಕೆ ಅನುಮತಿ ನೀಡಿದ ತೀರ್ಪು ನೀಡಿದ್ದೆ. ಅದು ನಿಮ್ಮ ಈಗಿನ ಬೇಡಿಕೆಗೆ ವಿರುದ್ಧವಾಗಿದೆ. ಹೀಗಾಗಿ ನಾನು ಪ್ರಕರಣದ ವಿಚಾರಣೆ ನಡೆಸಲಾರೆ. ಬೇರೊಂದು ನ್ಯಾಯಪೀಠಕ್ಕೆ ಪ್ರಕರಣ ವರ್ಗಾಯಿಸಬೇಕು ಎಂದು ತಿಳಿಸಿದರು. ಸದಸ್ಯ ನ್ಯಾ. ಕುರಿಯನ್ ಜೋಸೆಫ್ ಅವರು ಇದಕ್ಕೆ ದನಿಗೂಡಿಸಿ, ವಿಚಾರಣೆಯನ್ನು ಮುಂದೂಡಿದರು.
ಕಂಬಳ, ಹೋರಿ ಮತ್ತು ಎತ್ತಿನಗಾಡಿ ಓಟಗಳಿಗೆ ರಾಜ್ಯದಲ್ಲಿ ಕಾನೂನು ಮಾನ್ಯತೆ ನೀಡಲು ರಾಜ್ಯ ಸರ್ಕಾರ ಪ್ರಾಣಿ ಹಿಂಸೆ ತಡೆ ಕಾಯ್ದೆ 2017(ಕರ್ನಾಟಕ ಎರಡನೇ ತಿದ್ದುಪಡಿ) ರೂಪಿಸಿತ್ತು. ಈ ತಿದ್ದುಪಡಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಪೆಟಾ ವಾದಿಸುತ್ತಿದ್ದು, ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದೆ.