ಮಂಗಳೂರು ಜಂಕ್ಷನ್ ರಸ್ತೆ ಕಾಮಗಾರಿಗೆ ನೂರೆಂಟು ವಿಘ್ನ!

ಪ್ರಕಾಶ್ ಮಂಜೇಶ್ವರ ಮಂಗಳೂರು

ಎಪ್ಪತ್ತರ ದಶಕದ ಕೊನೆಯಲ್ಲಿ ಆರಂಭವಾದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಬಳಕೆಗೆ ಇಂದಿಗೂ ಜನ ಹಿಂಜರಿಯಲು ಮುಖ್ಯ ಕಾರಣ ಇಲ್ಲಿನ ಪ್ರಮುಖ ಸಂಪರ್ಕ ರಸ್ತೆ.

ಮಂಗಳೂರು-ಬೆಂಗಳೂರು ಹೆದ್ದಾರಿ (ಹಳೇ ರಾ.ಹೆ.48)ಯಿಂದ ಸುಲಭ ಸಂಪರ್ಕ ಒದಗಿಸುವ ನಾಗುರಿ-ಮಂಗಳೂರು ಜಂಕ್ಷನ್ ನಡುವೆ ರಸ್ತೆ ಅಭಿವೃದ್ಧಿ ಯೋಜನೆ ಇನ್ನೂ ಆಮೆಗತಿಯಲ್ಲಿ ಸಾಗಿದೆ.
ಕೇವಲ 10 ಅಡಿಯಷ್ಟು ಇರುವ ಈ ರಸ್ತೆಯನ್ನು 40 ಅಡಿಗೆ ಅಗಲಗೊಳಿಸಿ ಕಾಂಕ್ರೀಟ್ ಹಾಕಲು ಒಂದೂವರೆ ವರ್ಷದ ಹಿಂದೆಯೇ ಪಾಲಿಕೆ ಪರಿಷತ್ತಿನ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಿದ್ದರೂ, ಪೂರ್ಣಗೊಳಿಸಲು ಎದುರಾಗುತ್ತಿರುವ ವಿಘ್ನಗಳಿಗೆ ಕೊನೆಯಿಲ್ಲ.

ಭೂಸ್ವಾಧೀನವೇ ಸಮಸ್ಯೆ: ರಸ್ತೆ ವಿಸ್ತರಣೆಗೆ ಇನ್ನೂ ಪರಿಸರದ ಮೂವರು ಭೂ ಮಾಲೀಕರು ಒಪ್ಪದಿರುವುದು ಕಾಮಗಾರಿ ಪೂರ್ಣಗೊಳಿಸಲು ಮುಖ್ಯ ಸಮಸ್ಯೆ. ಈ ಮಾರ್ಗದ ಇಕ್ಕೆಲ ಅಧಿಕ ಜಮೀನು ಹೊಂದಿದ್ದ ಕೊಯಿಲೋ ಕುಟುಂಬ ಮನವೊಲಿಸುವ ಪ್ರಯತ್ನ ಯಶಸ್ವಿಯಾದ ಕಾರಣ ವಿಸ್ತರಣೆಗೆ ಹೆಚ್ಚಿನ ಅನುಕೂಲ ಉಂಟಾಗಿದೆ. ಇನ್ನೂ ಜಮೀನು ಬಿಟ್ಟುಕೊಡದ ಮೂರು ಕುಟುಂಬದ ಜಮೀನು ಹೊರತುಪಡಿಸಿ ಉಳಿದ ಭಾಗದ ಕಾಮಗಾರಿ ನಡೆಯುತ್ತಿದೆ (ಇದು ರಸ್ತೆ ಮತ್ತು ಫುಟ್‌ಪಾತ್ ಸೇರಿ ಒಟ್ಟು 4.5 ಕೋಟಿ ರೂ. ಕಾಮಗಾರಿ).

ಜಮೀನು ಒದಗಿಸಲು ನಿರಾಕರಿಸಿರುವ ಕುಟುಂಬ ನ್ಯಾಯಾಲಯದ ಮೊರೆ ಹೋದರೆ ಕಾಮಗಾರಿ ಮತ್ತಷ್ಟು ವಿಳಂಬವಾದೀತು ಎನ್ನುವ ಆತಂಕದಿಂದ ಕಾನೂನು ಅವಕಾಶ ಬಳಸಿ ಬಾಕಿ ಜಮೀನು ಸ್ವಾಧೀನ ಪ್ರಕ್ರಿಯೆಗೆ ಪಾಲಿಕೆ ಹಿಂದೇಟು ಹಾಕುತ್ತಿದೆ. ರಸ್ತೆ ವಿಸ್ತರಿಸಲು ಜಮೀನು ಬಿಟ್ಟುಕೊಡುವವರಿಗೆ ಟಿಡಿಆರ್ ಸೌಲಭ್ಯವನ್ನು ಪಾಲಿಕೆ ಒದಗಿಸುತ್ತಿದೆ.

ತ್ರಾಸದಾಯಕ ಪ್ರಯಾಣ: ಕಾಂಕ್ರೀಟ್ ಬೆಡ್, ಅಲ್ಲಲ್ಲಿ ಡ್ರೈನೇಜ್ ಬಾಕಿ ಕಾಮಗಾರಿ ರಸ್ತೆ, ಕಾಂಕ್ರೀಟ್, ಮಣ್ಣಿನ ಧೂಳು ನಡುವೆ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವವರು ಕಾಯಿಲೆ ಬೀಳುವುದು ಗ್ಯಾರಂಟಿ. ಭೂಸ್ವಾಧೀನ ನಡೆಯದೆ ರಸ್ತೆ ವಿಸ್ತರಣೆಯಾಗದ ಕಡೆಗಳಲ್ಲಿ ಎದುರುಬದುರಾಗಿ ಎರಡು ಕಾರುಗಳು ಬಂದರೂ ನಡುವೆ ಸಿಕ್ಕಿ ಹಾಕಿಕೊಳ್ಳುತ್ತವೆ. ಒಂದು ಹಾದುಹೋದ ಬಳಿಕ ಇನ್ನೊಂದು ಕಾರು ಹೋಗಬೇಕು. ಬಸ್, ಲಾರಿಯಂತಹ ವಾಹನಗಳು ಚಲಿಸುವುದೇ ಅಸಾಧ್ಯ.

ಜಿಲ್ಲಾಡಳಿತ ಕ್ರಮ ಬೇಕು: ಕರಾವಳಿ ಭಾಗದಲ್ಲಿ ರೈಲು ಸೇವೆ ಜನಪ್ರಿಯಗೊಳಿಸಲು ಜಂಕ್ಷನ್ ರೈಲು ನಿಲ್ದಾಣಕ್ಕೆ ಸುಲಭ ಸಂಪರ್ಕ ವ್ಯವಸ್ಥೆ ಒದಗಿಸುವುದು ಅನಿವಾರ್ಯ. ಆದ್ದರಿಂದ ರೈಲ್ವೆ ಇಲಾಖೆ ಸೌಲಭ್ಯಗಳನ್ನು ಪಡೆಯಲು ಈ ನಿಲ್ದಾಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಗತ್ಯ ಮೂಲಸೌಕರ್ಯ ಒದಗಿಸಬೇಕು.

ಯಾಕೆ ಮುಖ್ಯ ?: ಮಂಗಳೂರು ಹೆದ್ದಾರಿಯಿಂದ ಮಂಗಳೂರು ಜಂಕ್ಷನ್ ಸಂಪರ್ಕಿಸಲು ನಾಗುರಿಯಿಂದ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಕೇವಲ ಅರ್ಧ ಕಿ.ಮೀ ಪ್ರಯಾಣ. ಪಡೀಲ್ ಮೂಲಕ ಸುತ್ತು ಬಳಸಿ ಸಾಗುವ ರಸ್ತೆಯಲ್ಲಿ ಎರಡು ಕಿ.ಮೀ. ಪ್ರಯಾಣಿಸಬೇಕು. ಮಂಗಳೂರು ಮಹಾನಗರ ಕಡೆಯಿಂದ ಆಗಮಿಸುವ ಪ್ರಯಾಣಿಕರಿಗೆ ನಾಗುರಿ ಮೂಲಕ ಇರುವ ರಸ್ತೆಯೇ ಸುಲಭ ಹಾಗೂ ಸಮೀಪ. ಸಮರ್ಪಕ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು ಜಂಕ್ಷನ್ ನಿಲ್ದಾಣದ ಮುಖ್ಯ ಸಮಸ್ಯೆ. ಬಸ್ ವ್ಯವಸ್ಥೆ ಇಲ್ಲ. ಓಲಾ, ಉಬರ್ ಟ್ಯಾಕ್ಸಿಗಳಿಗೆ ಅವಕಾಶ ಒದಗಿಸಲಾಗುತ್ತಿಲ್ಲ. ರಿಕ್ಷಾ ನಿರ್ವಾಹಕರ ಯದ್ವತದ್ವಾ ಬಾಡಿಗೆ ಜಂಕ್ಷನ್‌ನಿಂದ ಜನರು ದೂರ ನಿಲ್ಲುವಂತೆ ಮಾಡಿದೆ. ಪ್ರಸ್ತುತ ರೈಲ್ವೆ ನಿಲ್ದಾಣಕ್ಕೆ ನೇರ ಬಸ್ ಸಂಚಾರವಿಲ್ಲ. ಮಂಗಳೂರು ನಗರದಿಂದ ಬಜಾಲ್‌ಗೆ ತೆರಳುವ ಬಸ್‌ನಲ್ಲಿ ಪ್ರಯಾಣಿಸಿ ಅರ್ಧದಲ್ಲಿ ಇಳಿದು ರೈಲ್ವೆ ನಿಲ್ದಾಣ ತಲುಪಬೇಕು. ನಾಗುರಿ ಮೂಲಕ ಸಾಗುವ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡರೆ ಬಜಾಲ್ ಕಡೆಗೆ ಹೋಗುವ ಎಲ್ಲ ಬಸ್‌ಗಳು ರೈಲ್ವೆ ನಿಲ್ದಾಣದ ಮುಂದೆಯೇ ನಿರಂತರ ಸಾಗುವಂತೆ ಮಾಡಬಹುದು.

ರಸ್ತೆಗೆ ಜಮೀನು ಬಿಟ್ಟುಕೊಡಲು ಬಾಕಿ ಇರುವ ಮೂರು ಕುಟುಂಬಗಳ ಮನವೊಲಿಕೆಗೆ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ನಡೆಯುತ್ತಿರುವ ಉಳಿದ ಭಾಗದ ಕಾಮಗಾರಿ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
| ಪ್ರವೀಣ್‌ಚಂದ್ರ ಆಳ್ವ ಮನಪಾ ಸದಸ್ಯ