ಮಂಗಳೂರು ಕಪ್ಪೆಗೆ ಕೊಡಿಯಾಲ್ ಹೆಸರು

– ಸುಶ್ಮಿತಾ ಕೋಟ್ಯಾನ್ ಮಂಗಳೂರು
ಸಾಮಾನ್ಯವಾಗಿ ಗ್ರಾಮೀಣ, ಕಾಡು ಪ್ರದೇಶದಲ್ಲಿ ಕಪ್ಪೆಗಳ ಸಂಖ್ಯೆ ಜಾಸ್ತಿ. ಹೊಸ ಪ್ರಭೇದಗಳು ಪತ್ತೆಯಾಗುವುದಿದ್ದರೂ ಅಂಥ ಸ್ಥಳಗಳಲ್ಲೇ ಹೆಚ್ಚು ಅವಕಾಶ. ಆದರೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕಪ್ಪೆಯ ಹೊಸ ಪ್ರಭೇದವೊಂದು ಪತ್ತೆಯಾಗಿದ್ದು, ಇದಕ್ಕೆ ‘ಕೊಡಿಯಾಲ್’ (ಕೊಂಕಣಿಯಲ್ಲಿ ಮಂಗಳೂರು) ಎಂದು ಹೆಸರಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯ ಮತ್ತು ಎಟಿಆರ್‌ಇಇ (ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಆಂಡ್ ದಿ ಎನ್ವಿರಾನ್ಮೆಂಟ್) ಸಂಶೋಧಕರು ದತೆಯಾಗಿ ನಗರದ ಹೊರವಲಯದ ಬೈಕಂಪಾಡಿ ಪ್ರದೇಶದಲ್ಲಿ ಪತ್ತೆ ಮಾಡಿರುವ ಕಪ್ಪೆಯ ಈ ಪ್ರಭೇದಕ್ಕೆ ‘ಮಂಗಳೂರಿನ ಸಣ್ಣ ಬಾಯಿಯ ಕಪ್ಪೆ’ (Mangaluru narrow & mouthed frog) ಎಂದು ಹೆಸರಿಡಲಾಗಿದೆ. ಮೈಕ್ರೋಹೈಲಾ ಕೊಡಿಯಾಲ್ (Microhyla Kodial)) ಎಂಬುದು ವೈಜ್ಞಾನಿಕ ಹೆಸರು. ಮಂಗಳೂರಿನ ಜೀವ ವೈವಿಧ್ಯತೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಿಂದ ಈ ಹೆಸರನ್ನು ಇಡಲಾಗಿದೆ.
2016 ಜುಲೈ ತಿಂಗಳಿನಲ್ಲಿ ಕಪ್ಪೆಯ ಈ ಪ್ರಭೇದ ಪತ್ತೆಯಾಗಿದ್ದು, ಸಂಶೋಧನಾ ವಿದ್ಯಾರ್ಥಿ ವಿನೀತ್ ಕುಮಾರ್ ಬೈಕಂಪಾಡಿ ಪ್ರದೇಶದಲ್ಲಿ ನಗರ ಪ್ರದೇಶದ ಕಪ್ಪೆಗಳ ಜಾತಿಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾಗ ಗಮನಕ್ಕೆ ಬಂದಿದೆ. ಈ ಕಪ್ಪೆಯ ಸ್ವರ ತುಂಬಾ ಕ್ಷೀಣವಾಗಿದ್ದು, ಗಾತ್ರವು ಸಣ್ಣದಾಗಿದ್ದುದರಿಂದ ಪತ್ತೆ ಹಚ್ಚುವುದು ಕಷ್ಟವಾಯಿತು. ಬಳಿಕ ಈ ಬಗ್ಗೆ ಸಂಶೋಧನೆ ನಡೆಸಲು ತಂಡ ರಚಿಸಲಾಯಿತು ಎಂದು ವಿನೀತ್ ಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
2 ಸೆಂ.ಮೀ.ನಷ್ಟು ಉದ್ದವಿರುವ ಕಪ್ಪೆಯ ಬಾಯಿ ಸಣ್ಣದಾಗಿದ್ದು, ಇತರ ಪ್ರಭೇದಗಳಿಗಿಂತ ಭಿನ್ನ. ಇತರ ಕಪ್ಪೆಗಳಂತೆ ಪಾರ್ಶ್ವಗಳಲ್ಲಿ ದಪ್ಪ ಪಟ್ಟೆಗಳಂಥ ರಚನೆಗಳಿಲ್ಲ. ಚರ್ಮವು ಮೃದುವಾಗಿಲ್ಲದೆ ಗಟ್ಟಿಯಾಗಿದೆ. ಗಂಡು ಕಪ್ಪೆಗಳಲ್ಲಿ ಗಂಟಲು ಚೀಲ ಗಾಢ ಬೂದು ಬಣ್ಣದಲ್ಲಿದ್ದು, ಅದರ ಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿದೆ. ಹಾಗೆಯೇ ಇದರ ಧ್ವನಿಯೂ ಇತರ ವರ್ಗದ ಕಪ್ಪೆಗಳಿಗಿಂತ ಭಿನ್ನವಾಗಿದೆ.

ಅನ್ವೇಷಣಾ ತಂಡ: ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ವಿನೀತ್ ಕುಮಾರ್, ಎಂಎಸ್ಸಿ ವಿದ್ಯಾರ್ಥಿಯಾಗಿದ್ದ ರಾಧಾಕೃಷ್ಣ ಉಪಾಧ್ಯಾಯ, ವಿವಿ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಚೇರ್ಮನ್ ಪ್ರೊ.ರಾಜಶೇಖರ್ ಪಾಟೀಲ್, ಎಟಿಆರ್‌ಇಇ ಪರಿಸರ ವಿಜ್ಞಾನ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಡಾ.ಅರವಿಂದ್ ಮಧ್ಯಸ್ಥ, ಸಂಶೋಧನಾ ವಿದ್ಯಾರ್ಥಿನಿ ಅನ್ವೇಷಾ ಸಾಹ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನ ಬೋಧನೇತರ ಸಿಬ್ಬಂದಿ ಗೋಡ್ವಿನ್ ಡಿಸೋಜ ಸಂಶೋಧನಾ ತಂಡದಲ್ಲಿದ್ದರು.

ಬಂದರು ಮೂಲಕ ಪ್ರವೇಶ?: ಡಾ.ಎನ್.ಎ. ಅರವಿಂದ ಮಧ್ಯಸ್ಥರ ಪ್ರಕಾರ ಈ ಅನ್ವೇಷಣೆ ತುಂಬಾ ರೋಚಕವಾಗಿತ್ತು. ಕಪ್ಪೆಯ ಅನುವಂಶೀಯ ವಿಶ್ಲೇಷಣೆ ನಡೆಸಿದಾಗ ಇದರ ಅತ್ಯಂತ ಹತ್ತಿರದ ಪ್ರಭೇದದ ಕಪ್ಪೆಗಳು ಆಗ್ನೇಯ ಏಷ್ಯಾದಲ್ಲಿ ಇರುವುದನ್ನು ಅಂದಾಜಿಸಲಾಗಿದೆ. ಈ ಕಪ್ಪೆ ಆಗ್ನೇಯ ಏಷ್ಯಾದಿಂದ ಮರ ಸಾಗಾಣಿಕೆಯ ಮೂಲಕ ಮಂಗಳೂರಿನ ಬಂದರಿನ ಪ್ರದೇಶ ಪ್ರವೇಶಿಸಿರಬಹುದು. ಬಂದರು ಪ್ರದೇಶವಾಗಿರುವ ಬೈಕಂಪಾಡಿಯಲ್ಲಿ ಮಾತ್ರ ಈ ಕಪ್ಪೆ ಪ್ರಭೇದ ಕಾಣಸಿಗುತ್ತಿದೆ. ಆದರೂ ಇದುವರೆಗೆ ವಿಶ್ವದ ಎಲ್ಲೂ ಈ ಕಪ್ಪೆ ಪ್ರಭೇದವನ್ನು ಗುರುತಿಸದ ಕಾರಣ ಮಂಗಳೂರಿನ ಹೆಸರನ್ನು ಇಡಲಾಗಿದೆ.

2016ರಿಂದ ನಡೆದ ಅನ್ವೇಷಣಾ ಕಾರ್ಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ನನಗೆ ಅಧ್ಯಯನಕ್ಕೆ ಅನುಕೂಲವಾಯಿತು. ಅಂತೆಯೇ ತಜ್ಞರಿಂದ ದೊರೆತ ಹೆಚ್ಚಿನ ಮಾಹಿತಿ, ಸಲಹೆಗಳು ಸಂಶೋಧನಾ ಪ್ರತಿಯನ್ನು ಇನ್ನಷ್ಟು ಸುಧಾರಿಸಲು ನೆರವಾಯಿತು. ಈ ಪ್ರತಿಯನ್ನು ಇಂಟರ್‌ನ್ಯಾಷನಲ್ ಜರ್ನಲ್ ಝೂಟಾಕ್ಸಾ ಪ್ರಕಟಿಸಿದ್ದು, ಇದು ಹೆಮ್ಮೆಯ ಸಂಗತಿ.
– ವಿನೀತ್ ಕುಮಾರ್, ಸಂಶೋಧನಾ ವಿದ್ಯಾರ್ಥಿ, ಮಂಗಳೂರು

Leave a Reply

Your email address will not be published. Required fields are marked *