ಮಂಗಳೂರಿಗೆ ನೀರು ರೇಷನಿಂಗ್ ಬಿಸಿ

< ಪಂಪಿಂಗ್ ಆರಂಭವಾದರೂ ಎತ್ತರ ಪ್ರದೇಶ ತಲುಪದೆ ಸಮಸ್ಯೆ>

ಮಂಗಳೂರು: ನಗರಕ್ಕೆ ನೀರಿನ ರೇಷನಿಂಗ್ ಶುರುವಾಗಿ ಎರಡೇ ದಿನಕ್ಕೆ ಜನರಿಗೆ ಬಿಸಿ ತಟ್ಟಿದೆ.
ಎರಡು ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಳಿಸಿದ ಬಳಿಕ, ಶನಿವಾರ ಬೆಳಗ್ಗೆ 10 ಗಂಟೆಗೆ ತುಂಬೆ ಡ್ಯಾಂನಿಂದ ಮತ್ತೆ ನೀರು ಪಂಪಿಂಗ್ ಪ್ರಾರಂಭಿಸಲಾಗಿದೆ. ಆದರೆ ಇಡೀ ವಿತರಣಾ ಜಾಲದಲ್ಲಿ ನೀರು ಖಾಲಿಯಾಗಿರುವುದರಿಂದ ಅದು ತುಂಬಿ, ಜನರ ಮನೆಗಳಿಗೆ ತಲುಪಲು, ಅದರಲ್ಲೂ ಎತ್ತರ ಪ್ರದೇಶ ತಲುಪುವಾಗ ಭಾನುವಾರವೇ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಚಿತವಾಗಿಯೇ ನೀರು ರೇಷನಿಂಗ್ ಮಾಡುವ ಬಗ್ಗೆ ತಿಳಿಸಲಾಗಿತ್ತು, ಆದರೂ ಇದನ್ನು ಗಮನಿಸದ ಕೆಲವು ಮಂದಿಗೆ ನೀರಿಲ್ಲದೆ ಸಮಸ್ಯೆಯಾಗಿದೆ. ನೀರಿನ ತೊಂದರೆ ಕುರಿತು ಅಧಿಕಾರಿಗಳು ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದರೂ ಅನೇಕರು ಫೋನ್ ಮಾಡಿದಾಗ ಸ್ವೀಕರಿಸುತ್ತಿಲ್ಲ ಎಂದೂ ನಾಗರಿಕರು ದೂರಿದ್ದಾರೆ.

 ರೇಷನಿಂಗ್ ಅಗತ್ಯ: ಇತರ ನಗರಗಳಲ್ಲಿ ಬೇಸಿಗೆಯಲ್ಲಿ ಹಲವು ದಿನಗಳಿಗೊಮ್ಮೆ ನೀರು ಬಿಡುವ ವ್ಯವಸ್ಥೆ ಇದೆ. ಆದರೆ ನಾವು ನಾಲ್ಕು ದಿನ ನೀರು ಬಿಟ್ಟು 2 ದಿನ ಮಾತ್ರ ಸ್ಥಗಿತಗೊಳಿಸುತ್ತೇವೆ. ನಮಗೆ ಬೇಸಿಗೆ ಮುಗಿಯವವರೆಗೆ ನೀರಿನ ಸಂಗ್ರಹ ಇರಬೇಕಾದರೆ ರೇಷನಿಂಗ್ ಅತ್ಯಗತ್ಯ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

ಮನಪಾದ ಕೆಲವು ಅಧಿಕಾರಿಗಳು ದಾರಿ ತಪ್ಪಿಸಿದ್ದಾರೆ. ಎಎಂಆರ್ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದೆ ಎಂದು ಹಿಂದೆ ತಿಳಿಸಿದ್ದರು. ಆದರೆ ನೀರು ಬಿಟ್ಟಾಗ ಇಡೀ ಡ್ಯಾಂ ಖಾಲಿಯಾದರೂ ತುಂಬೆ ಡ್ಯಾಂ ಪೂರ್ತಿ ತುಂಬಲಿಲ್ಲ. ಹೀಗಾಗಿ ಲೆಕ್ಕಾಚಾರ ತಪ್ಪಿದೆ. ಈಗ 48 ದಿನ ನೀರು ಬರಲಿದೆ ಎಂಬ ಲೆಕ್ಕ ಕೊಡುತ್ತಾರೆ. ಅದನ್ನು ನಂಬಿ ಪ್ರತಿದಿನ ನೀರು ಕೊಡುವಂತಿಲ್ಲ. ಒಂದು ವೇಳೆ ಮೇ ಅಂತ್ಯಗೊಂಡಾಗಲೂ ಮಳೆ ಶುರುವಾಗದಿದ್ದರೆ ನಗರಕ್ಕೆ ನೀರು ಕೊಡುವುದು ಎಲ್ಲಿಂದ ಎನ್ನುವುದು ಅವರ ಪ್ರಶ್ನೆ.

ಎಎಂಆರ್‌ನಲ್ಲಿ 1.5 ಮೀ. ನೀರು: ಎಎಂಆರ್ ಡ್ಯಾಂ ಒಮ್ಮೆ ಖಾಲಿಯಾದ ಬಳಿಕ ಮತ್ತೆ ಡ್ಯಾಂ ಮುಚ್ಚಲಾಗಿದ್ದು, ಕ್ಷೀಣವಾಗಿ ನೇತ್ರಾವತಿಯಲ್ಲಿ ಒಳಹರಿವು ಶುರುವಾಗಿದೆ. ಅದು ಕನಿಷ್ಠ 2 ಮೀಟರ್ ತುಂಬಿದ ಬಳಿಕವಷ್ಟೇ ತುಂಬೆ ಡ್ಯಾಂಗೆ ಬಿಡಬಹುದು. ಸದ್ಯ ಡ್ಯಾಂನಲ್ಲಿ 1.5 ಮೀಟರ್‌ನಷ್ಟು ನೀರು ಸಂಗ್ರಹವಿದೆ. ಎಂಆರ್‌ಪಿಎಲ್ ಹಾಗೂ ಎಸ್‌ಇಝಡ್‌ಗಳಿಗೆ ಈಗಾಗಲೇ ಸರಪಾಡಿಯಿಂದ ನೀರೆತ್ತದಂತೆ ಸೂಚಿಸಲಾಗಿದೆ. ಅವುಗಳು ವಾರ್ಷಿಕ ಶಟ್‌ಡೌನ್‌ಗೆ ಮುಂದಾಗಿರುವುದರಿಂದ ನೀರಿನ ಬಳಕೆ ಕಡಿಮೆಯಾಗಲಿದೆ.

ಶಾಸಕ ಕಾಮತ್ ಡಿಸಿಗೆ ಸೂಚನೆ: ನಗರದಲ್ಲಿ ನೀರಿನ ರೇಷನಿಂಗ್‌ನಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಸಮರ್ಪಕ ಕ್ರಮ ಜರುಗಿಸುವಂತೆ ಶಾಸಕ ವೇದವ್ಯಾಸ ಕಾಮತ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಮರ್ಪಕ ರೀತಿಯಲ್ಲಿ ನೀರು ಒದಗಿಸುವುದು ಪಾಲಿಕೆ ಕರ್ತವ್ಯ. ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಶನಿವಾರ ಮಾತನಾಡಿದ್ದು, ನಗರದಲ್ಲಿ ಏಲ್ಲಿಯೂ ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸುವಂತೆ ಸೂಚಿಸಿರುವುದಾಗಿ ಶಾಸಕರು ತಿಳಿಸಿದ್ದಾರೆ.

ನಗರದಲ್ಲಿ ಈ ಹಿಂದೆ ನೀರಿನ ಅಭಾವ ಸೃಷ್ಟಿಯಾದ ಸಂದರ್ಭದಲ್ಲಿ ಟ್ಯಾಂಕರ್‌ಗಳು ಮೂಲಕ ಖಾಸಗಿ ಬಾವಿಗಳಿಂದ ನೀರನ್ನು ಪಡೆದು ಅಗತ್ಯವಿರುವ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಈ ಪರ್ಯಾಯ ವ್ಯವಸ್ಥೆ ಬಗ್ಗೆಯೂ ಗಮನಹರಿಸಿ, ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಸುವ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಸಹಾಯವಾಣಿ: ನೀರಿನ ಕುರಿತು ಜನರ ದೂರು ಸ್ವೀಕರಿಸಲು ಪ್ರತ್ಯೇಕ ಸಹಾಯವಾಣಿ ಕೇಂದ್ರ ಆರಂಭಿಸುವ ಅಗತ್ಯವಿದೆ. ಶಾಸಕರ ಕಚೇರಿಯಲ್ಲಿಯೂ ಸಹಾಯವಾಣಿ ಆರಂಭಿಸಲಾಗುವುದು. ದೂರುಗಳನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಯತ್ನಿಸಲಾಗುವುದು ಎಂದು ಕಾಮತ್ ಹೇಳಿದ್ದಾರೆ.

ನಾವು ಪ್ರತಿದಿನ ಡ್ಯಾಂನಿಂದ ನೀರು ಬಿಟ್ಟರೆ, ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೆ ನಗರದಲ್ಲಿ ತೀವ್ರ ಸಂಕಷ್ಟ ತಲೆದೋರಬಹುದು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ದಿನ ನೀರು ಬಿಟ್ಟು, ಎರಡು ದಿನ ಸ್ಥಗಿತಗೊಳಿಸಲಾಗುತ್ತಿದೆ, ಸದ್ಯಕ್ಕೆ ನೀರಿನ ರೇಷನಿಂಗ್ ಅನಿವಾರ್ಯ, ಜನರು ಸಹಕರಿಸಬೇಕು.
– ಶಶಿಕಾಂತ್ ಸೆಂಥಿಲ್, ದ.ಕ ಜಿಲ್ಲಾಧಿಕಾರಿ