ಮಂಗಳೂರಿನಲ್ಲಿ ಮಹಿಳೆಯ ಭೀಕರ ಹತ್ಯೆ ಆರೋಪಿ ದಂಪತಿ ಅಂದರ್

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ಮಂಗಳಾದೇವಿ ಬಳಿ ಅಮರ್ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ(35) ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮೂರು ದಿನಗಳೊಳಗೆ ನಗರ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವೆಲೆನ್ಸಿಯಾದ ಸೂಟರ್‌ಪೇಟೆ 8ನೇ ಅಡ್ಡರಸ್ತೆ ನಿವಾಸಿಗಳಾದ ಜೋನಸ್ ಜೂಲಿನ್ ಸ್ಯಾಮ್ಸನ್(36) ಮತ್ತು ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್(46) ಆರೋಪಿಗಳು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈ ಕೊಲೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 11ರಂದು ಕದ್ರಿ ಬಳಿ ಮಹಿಳೆಯ ಶವ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಲೆ ಹಾಗೂ ದೇಹದ ಭಾಗಗಳನ್ನು ಮೂರು ತುಂಡು ಮಾಡಿ ಮೂರು ಕಡೆ ಎಸೆಯಲಾಗಿದ್ದು, ಈ ಬಗ್ಗೆ ಕದ್ರಿ ಹಾಗೂ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಶವ ಶ್ರೀಮತಿ ಶೆಟ್ಟಿಯದ್ದು ಎಂದು ಅದೇ ದಿನ ಗುರುತಿಸಲಾಗಿತ್ತು. ಪ್ರಕರಣ ಬೇಧಿಸಲು 30 ಮಂದಿಯ 3 ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವೇಳೆ ಶ್ರೀಮತಿ ಶೆಟ್ಟಿ ಕೊಲೆಯಾದ ದಿನ ಸಂಚರಿಸಿದ ದ್ವಿಚಕ್ರ ವಾಹನ ಪತ್ತೆಯಾದರೆ, ಆಕೆಯ ದೇಹದ ಭಾಗಗಳು ಕೂಡ ಪತ್ತೆಯಾದವು. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ದಂಪತಿ ಸೇರಿ ಶ್ರೀಮತಿ ಶೆಟ್ಟಿ ಅವರನ್ನು ಭೀಕರವಾಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು ಎಂದವರು ಹೇಳಿದರು.

ಹಣಕಾಸು ವ್ಯವಹಾರ ಕಾರಣ: ಬಡ್ಡಿಗೆ ಹಣ ನೀಡುವ ವ್ಯವಹಾರವನ್ನು ನಡೆಸುತ್ತಿದ್ದ ಶ್ರೀಮತಿ ಶೆಟ್ಟಿಯಿಂದ ಆರೋಪಿ ಸ್ಯಾಮ್ಸನ್ 1 ಲಕ್ಷ ರೂ. ಸಾಲ ಪಡೆದಿದ್ದ. ಅದರಲ್ಲಿ 40 ಸಾವಿರ ರೂ. ಮರುಪಾವತಿಸಿದ್ದ. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಉಳಿದ ಹಣವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿರಲಿಲ್ಲ. ಮರುಪಾವತಿಸುವಂತೆ ಶ್ರೀಮತಿ ಶೆಟ್ಟಿ ಪದೇ ಪದೇ ಒತ್ತಾಯಿಸುತ್ತಿದ್ದಳು. ಮೇ 11ರಂದು ಬೆಳಗ್ಗೆ ಶ್ರೀಮತಿ ಶೆಟ್ಟಿ ಸಾಲ ವಸೂಲಿಗಾಗಿ ಸ್ಯಾಮ್ಸನ್ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದಳು. ಮನೆಯೊಳಗೆ ಹೋದ ಕೂಡಲೇ ಸಾಲದ ಹಣ ನೀಡುವಂತೆ ಕೇಳಿದ್ದಳು. ಈ ವಿಚಾರದಲ್ಲಿ ಇಬ್ಬರೊಳಗೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸ್ಯಾಮ್ಸನ್ ಮಾರಕಾಯುಧದಿಂದ ಆಕೆಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ.

ಸಾಗಿಸಲು ಶವ ಕತ್ತರಿಸಿದ್ದ: ಬಳಿಕ ಶ್ರೀಮತಿ ಶೆಟ್ಟಿಯ ಶವವನ್ನು ದಿನಪೂರ್ತಿ ಮನೆಯಲ್ಲಿ ಇರಿಸಿ ಸಾಗಾಟ ಮಾಡಲು ಅನುಕೂಲಕ್ಕಾಗಿ ದೇಹವನ್ನು ತುಂಡು ತುಂಡು ಮಾಡಿ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಕದ್ರಿ ಹಾಗೂ ನಂದಿಗುಡ್ಡ ಪರಿಸರ ಸೇರಿದಂತೆ ಮೂರು ಕಡೆಗಳಲ್ಲಿ ಎಸೆದಿದ್ದನು. ಹೀಗೆ ಎಸೆದ ಬಳಿಕ ವಾಹನವನ್ನು ಸ್ನೇಹಿತ ರಾಜು ಎಂಬಾತನ ಮನೆಯಲ್ಲಿ ಇರಿಸಿದ್ದನು. ಈ ಬಗ್ಗೆ ರಾಜುವನ್ನು ವಿಚಾರಣೆ ನಡೆಸಲಾಗಿದೆ. ಮೃತ ಶ್ರೀಮತಿ ಶೆಟ್ಟಿಯ ದೇಹದಲ್ಲಿದ್ದ 8 ಚಿನ್ನದ ಉಂಗುರ ಹಾಗೂ ಚಿನ್ನದ ಚೈನ್‌ನ್ನು ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಆತನಿಗೆ ಯಾರಾದರೂ ಸಹಕಾರ ನೀಡಿದ್ದಾರೆಯೇ? ಎನ್ನುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಕಮಿಷನರ್ ಹೇಳಿದರು.

ಕದ್ರಿ ಪಾರ್ಕ್ ಬಳಿ ಕಾಲು ಪತ್ತೆ: ಮಹಿಳೆಯ ಕಾಲು ಬುಧವಾರ ಬೆಳಗ್ಗೆ ಕದ್ರಿ ಪಾರ್ಕ್ ಬಳಿಯಲ್ಲಿ ಪತ್ತೆಯಾಗಿದೆ. ತಲೆ ಹಾಗೂ ದೇಹದ ಇತರ ಭಾಗ ಮೇ 12ರಂದು ಪತ್ತೆಯಾಗಿತ್ತು. ಮಂಗಳವಾರ ಶಂಕೆಯ ಹಿನ್ನೆಲೆಯಲ್ಲಿ ನಾಗುರಿಯ ಬಾವಿಯೊಂದರಲ್ಲಿ ಹುಡುಕಾಟ ನಡೆಸಲಾಗಿತ್ತು. ಅದರಲ್ಲಿ ಪತ್ತೆಯಾಗಿರಲಿಲ್ಲ.

ಪೊಲೀಸರಿಗೆ ಬಹುಮಾನ: ಆರೋಪಿ ಸ್ಯಾಮ್ಸನ್ ವಿರುದ್ಧ 2010ರಲ್ಲಿ ಜಾನ್‌ಮೇರಿ ಮೆಂಡೋನ್ಸಾ ಕೊಲೆ ಪ್ರಕರಣ ಆರೋಪವೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ 30 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡುವುದಾಗಿ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಡಿಸಿಪಿಗಳಾದ ಹನುಮಂತರಾಯ ಹಾಗೂ ಲಕ್ಷ್ಮೀ ಗಣೇಶ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ಸುಧೀರ್ ಹೆಗಡೆ, ಸಿಸಿಬಿ ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಕದ್ರಿ ಇನ್ಸ್‌ಪೆಕ್ಟರ್ ಮಹೇಶ್, ಕಂಕನಾಡಿ ಇನ್ಸ್‌ಪೆಕ್ಟರ್ ಜಗದೀಶ್, ಸಿಸಿಬಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಕಬ್ಬಾಳ್‌ರಾಜ್ ಮತ್ತು ಶಂಕರ ನಾಯಿರಿ, ಎಎಸ್‌ಐಗಳಾದ ಹರೀಶ್ ಪದವಿನಂಗಡಿ ಮತ್ತು ಶಶಿಧರ ಶೆಟ್ಟಿ, ಹೆಡ್‌ಕಾನ್ಸ್‌ಟೆಬಲ್‌ಗಳಾದ ರಾಮ ಪೂಜಾರಿ, ಚಂದ್ರ ಶೇಖರ, ಸುಬ್ರಹ್ಮಣ್ಯ, ಚಂದ್ರಹಾಸ, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಚಂದ್ರ, ಕಾನ್ಸ್‌ಟೆಬಲ್‌ಗಳಾದ ರಾಜ ಮತ್ತು ಅಜಿತ್ ಡಿ’ಸೋಜ, ಹಿತೇಶ್, ವಿಶ್ವನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಫಾಸ್ಟ್‌ಫುಡ್ ಅಂಗಡಿ ನಡೆಸುತ್ತಿದ್ದ ಆರೋಪಿ
ಕೊಲೆ ಆರೋಪಿ ಸ್ಯಾಮ್ಸನ್ ನಂದಿಗುಡ್ಡೆಯಲ್ಲಿ ಫಾಸ್ಟ್‌ಫುಡ್ ಅಂಗಡಿ ನಡೆಸುತ್ತಿದ್ದ. ವ್ಯವಹಾರ ಇಲ್ಲದ ಕಾರಣ ಒಂದು ತಿಂಗಳಿನಿಂದ ಅಂಗಡಿ ಬಂದ್ ಮಾಡಿ ಮನೆಯಲ್ಲೇ ಇದ್ದ. ಖರ್ಚಿಗೆ ಹಣವಿಲ್ಲದ ಈತನಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗಿರಲಿಲ್ಲ. ಶ್ರೀಮತಿ ಶೆಟ್ಟಿ ಸಾಲ ಮರುಪಾವತಿಸುವಂತೆ ಪೀಡಿಸುತ್ತಿದ್ದಾಗ ಆಕೆಯನ್ನು ಕೊಲೆ ಮಾಡಿ ಆಕೆಯ ಮೈ ಮೇಲೆ ಇದ್ದ ಚಿನ್ನಾಭರಣವನ್ನು ದೋಚಲು ಯೋಜನೆ ರೂಪಿಸಿ, ಕೃತ್ಯ ಎಸಗಿದ್ದಾನೆ ಎಂದು ತನಿಖೆ ನಡೆಸುತ್ತಿದ್ದ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
ಪೊಲೀಸರು ಬಂಧಿಸಲು ಬರುತ್ತಿದ್ದಾರೆ ಎಂದು ತಿಳಿದ ಆರೋಪಿ ಸ್ಯಾಮ್ಸನ್ ತನ್ನನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಮಾನ ನಡೆದಿದೆ. ಬಳಿಕ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣವನ್ನೂ ದಾಖಲಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಆತನ ಪತ್ನಿಯನ್ನೂ ಬಂಧಿಸಲಾಗಿದೆ. ಚೇತರಿಸಿದ ಕೂಡಲೇ ಆತನಿಂದ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕಾಗಿದೆ ಎಂದು ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *