ಆಗಸ್ಟ್‌ನಲ್ಲೇ ಪಾಲಿಕೆ ಚುನಾವಣೆ ?

ಪಿ.ಬಿ.ಹರೀಶ್ ರೈ ಮಂಗಳೂರು
ಮಹಾನಗರ ಪಾಲಿಕೆಗೆ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ರಾಜಕೀಯ ಪಕ್ಷಗಳು ಇನ್ನೊಂದು ಮಹತ್ವದ ಚುನಾವಣೆಗೆ ಅಣಿಯಾಗುವುದು ಅನಿವಾರ್ಯ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅವಧಿ ಮಾರ್ಚ್ 12ಕ್ಕೆ ಅಂತ್ಯಗೊಂಡಿದೆ. ನಿಯಮ ಪ್ರಕಾರ ಅವಧಿ ಪೂರ್ಣವಾಗುವ ಮೊದಲೇ ಚುನಾವಣೆ ನಡೆಯಬೇಕಿತ್ತು. ಆದರೆ ಪಾಲಿಕೆಯ ವಾರ್ಡ್‌ಗಳ ಮೀಸಲು ವಿವಾದ ಹೈಕೋರ್ಟ್ ಮುಂದಿದ್ದ ಕಾರಣ ನಿಗದಿತ ಅವಧಿಯಲ್ಲಿ ಚುನಾವಣೆ ನಡೆದಿರಲಿಲ್ಲ.

ತೊಡಕು ನಿವಾರಣೆ
ಮೀಸಲಾತಿ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಒಂದು ತಿಂಗಳ ಹಿಂದೆ ಹೈಕೋರ್ಟ್ ವಜಾ ಮಾಡಿದ್ದು ತೊಡಕು ನಿವಾರಣೆಯಾಗಿದೆ. ಈ ತೀರ್ಪು ಮರುಪರಿಶೀಲಿಸುವಂತೆ ಬಿಜೆಪಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೂ, ಮೀಸಲಾತಿ ಬದಲಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅವಧಿ ಪೂರ್ಣಗೊಂಡ ಬಳಿಕ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕಾಗಿರುವ ಕಾರಣ ಮುಂದಿನ ತಿಂಗಳು ಚುನಾವಣೆಗೆ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ.

ರಾಜಕೀಯ ಚಿತ್ರಣ
1984ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಬಳಿಕ ಒಂದು ಅವಧಿ ಹೊರತುಪಡಿಸಿ ಉಳಿದ ಎಲ್ಲ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2007ರಲ್ಲಿ ಪ್ರಥಮವಾಗಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಪಡೆದಿತ್ತು. 2013ರ ಚುನಾವಣೆ ಸಂದರ್ಭ ಮನಪಾ ವ್ಯಾಪ್ತಿಯ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಈಗ ರಾಜಕೀಯ ಚಿತ್ರಣ ಬದಲಾಗಿದೆ. 2018ರ ಚುನಾವಣೆಯಲ್ಲಿ ಮಹಾಣಗರ ಪಾಲಿಕೆ ವ್ಯಾಪ್ತಿಯ ಎರಡೂ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಾಗಿದೆ.

ಮೀಸಲು ವರದಾನ
ಲೋಕಸಭಾ ಚುನಾವಣೆಯಲ್ಲಿ ಪಾಲಿಕೆಯ 60 ವಾರ್ಡ್‌ಗಳ ಪೈಕಿ 48 ವಾರ್ಡ್‌ಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ಆದರೆ ಪಾಲಿಕೆಯ ಮೀಸಲು ಪಟ್ಟಿ ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ. ಹೊಸ ಮೀಸಲು ಪ್ರಕಾರ ಬಿಜೆಪಿಯ 15 ಮಾಜಿ ಕಾರ್ಪೊರೇಟರ್‌ಗಳು ಮತ್ತೆ ತಮ್ಮ ವಾರ್ಡ್‌ನಿಂದ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಆದರೆ ಕಾಂಗ್ರೆಸ್‌ನ 29 ಕಾರ್ಪೊರೇಟರ್‌ಗಳು ಮತ್ತೆ ತಮ್ಮ ವಾರ್ಡ್‌ನಿಂದ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.

ಆಡಳಿತಾಧಿಕಾರಿ ಅಧಿಕಾರ
ಮನಪಾ ಆಡಳಿತಾಧಿಕಾರಿಯಾಗಿ ಈ ಹಿಂದೆ ದ.ಕ.ಜಿಲ್ಲಾಧಿಕಾರಿ ಅವರನ್ನು ನೇಮಿಸುವ ಕ್ರಮವಿತ್ತು. ಆದರೆ ಈಗ ಮೈಸೂರು ಪ್ರಾದೇಶಿಕ ಆಯುಕ್ತ ಯಶವಂತ್ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಪ್ರಾದೇಶಿಕ ಆಯುಕ್ತರ ಕಾರ್ಯವ್ಯಾಪ್ತಿ ಇರುವ ಕಾರಣ ಇವರು ಮಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಡತಗಳನ್ನು ಸಹಿಗಾಗಿ ಇಲ್ಲಿನ ಅಧಿಕಾರಿಗಳು ಮೈಸೂರಿಗೆ ಕೊಂಡೊಯ್ಯುವುದು ಅನಿವಾರ್ಯವಾಗಿದೆ.

ಮೀಸಲಾತಿ ಸಂಬಂಧಿಸಿ ಹೈಕೋರ್ಟ್ ತೀರ್ಪು ಮರುಪರಿಶೀಲಿಸುವಂತೆ ಮತ್ತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಕೋರ್ಟ್ ಈ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳಲಿದೆ. ಮುಂದಿನ ತಿಂಗಳು ಚುನಾವಣೆ ಘೋಷಣೆ ಸಾಧ್ಯತೆ ಇದ್ದು ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ.
ಪ್ರೇಮಾನಂದ ಶೆಟ್ಟಿ, ಬಿಜೆಪಿ ನಾಯಕ

ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಆಡಳಿತ ಇಲ್ಲದಿದ್ದರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶೀಘ್ರ ಚುನಾವಣೆ ನಡೆಯುವ ನಿರೀಕ್ಷೆ ಇದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಫಲಿತಾಂಶ ಪಾಲಿಕೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಜ್ಜಾಗಿದೆ.
ಶಶಿಧರ ಹೆಗ್ಡೆ, ಕಾಂಗ್ರೆಸ್ ನಾಯಕ

ಹಿಂದಿನ ಅವಧಿಯಲ್ಲಿ ಬಲಾಬಲ
ಕಾಂಗ್ರೆಸ್-35
ಬಿಜೆಪಿ-20
ಜೆಡಿಎಸ್-2
ಸಿಪಿಎಂ-1
ಎಸ್‌ಡಿಪಿಐ-1
ಪಕ್ಷೇತರ-1

Leave a Reply

Your email address will not be published. Required fields are marked *